Advertisement

Crime news: ಕಾಸರಗೋಡು ಅಪರಾಧ ಸುದ್ಧಿಗಳು

08:29 PM Aug 11, 2024 | Team Udayavani |

ಹಣ ಎಗರಿಸಿದ ಪ್ರಕರಣ ಮಹಿಳೆ ವಿರುದ್ಧ ಇನ್ನೊಂದು ಕೇಸು ದಾಖಲು
ಕಾಸರಗೋಡು: ಕೇಂದ್ರ ಸರಕಾರಿ ಅಧಿಕಾರಿ ಎಂಬ ಸೋಗಿನಲ್ಲಿ ಹಣ ಮತ್ತು ಚಿನ್ನ ಪಡೆದು ವಂಚಿಸಿದ ಹಲವು ಪ್ರಕರಣಗಳಿಗೆ ಸಂಬಂಧಿಸಿ ಬಂಧಿತಳಾಗಿ ನ್ಯಾಯಾಂಗ ಬಂಧನದಲ್ಲಿರುವ ಚೆಮ್ನಾಡ್‌ ಕೊಂಬನಡ್ಕ ನಿವಾಸಿ ಸಿ.ಕೆ. ಶ್ರುತಿ ಚಂದ್ರಶೇಖರನ್‌ (34) ವಿರುದ್ಧ ಮೀಯೂರು ಪೊಲೀಸ್‌ ಠಾಣೆಯಲ್ಲಿ ಇನ್ನೊಂದು ಪ್ರಕರಣ ದಾಖಲಿಸಲಾಗಿದೆ.

Advertisement

ಪಾಲ್ಘಾಟ್‌ ನಿವಾಸಿಯಾದ ಯುವಕನೋರ್ವ ನೀಡಿದ ದೂರಿನಂತೆ ಕೇಸು ದಾಖಲಿಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ಕಣ್ಣೂರು ಜಿಲ್ಲೆಯ ಪೊಲೀಸ್‌ನ ವಿರುದ್ಧವೂ ಕೇಸು ದಾಖಲಿಸಲಾಗಿದೆ. ತಾನು ಆದಾಯ ತೆರಿಗೆ ಇಲಾಖೆಯ ಅಧಿಕಾರಿಯೆಂದೂ, ಮದುವೆಯಾಗುವ ಭರವಸೆ ನೀಡಿ 2022ರ ಎಪ್ರಿಲ್‌ 5ರಿಂದ 2023ರ ಜನವರಿ 15ರ ವರೆಗಿನ ಅವಧಿಯಲ್ಲಿ ಒಟ್ಟು 5.12 ಲಕ್ಷ ರೂ. ಪಡೆದು ವಂಚಿಸಿದ್ದಾಗಿ ದೂರಿನಲ್ಲಿ ತಿಳಿಸಲಾಗಿದೆ.

ಶ್ರುತಿ ವಿರುದ್ಧ ಕಾಸರಗೋಡು ಜಿಲ್ಲೆಯ ವಿವಿಧ ಠಾಣೆಗಳಲ್ಲಿ ಒಟ್ಟು ಐದು ಕೇಸುಗಳು ದಾಖಲಾಗಿವೆ.

ಪೋಲೆಂಡ್‌ ವೀಸಾ ಭರವಸೆ ನೀಡಿ ವಂಚನೆ: ಪ್ರಕರಣ ದಾಖಲು
ಕಾಸರಗೋಡು: ಪೋಲೆಂಡ್‌ನ‌ಲ್ಲಿ ಉದ್ಯೋಗ ವೀಸಾ ನೀಡುವ ಭರವಸೆ ನೀಡಿ 15 ಲಕ್ಷ ರೂ. ಪಡೆದು ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿ ರಾಜಪುರ ಕೋಟ್ಟೋಡಿ ಪಾಲಪುಳಿಯಿಲ್‌ ನಿವಾಸಿ ಕೆ.ಜೆ.ರಾಜೇಶ್‌ ನೀಡಿದ ದೂರಿನಂತೆ ಎರ್ನಾಕುಳಂ ಕಲ್ಲೂರು ಶ್ರೀಪದ್ವಂ ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುವ ಸಿಮ್‌ಲಾಲ್‌ ರಾಜೇಂದ್ರನ್‌ ವಿರುದ್ಧ ರಾಜಪುರ ಪೊಲೀಸರು ಕೇಸು ದಾಖಲಿಸಿದ್ದಾರೆ.

ನನಗೆ ಹಾಗೂ ಸಹೋದರಿ ಪತಿಗೆ ಪೋಲೆಂಡ್‌ನ‌ಲ್ಲಿ ಉದ್ಯೋಗ ವೀಸಾ ನೀಡುವ ಭರವಸೆ ನೀಡಿ 15 ಲಕ್ಷ ರೂ. ನಗದು, ಎಸ್‌ಎಸ್‌ಎಲ್‌ಸಿ ಸರ್ಟಿಫಿಕೆಟ್‌ ಮತ್ತು ಪಾಸ್‌ಪೋರ್ಟ್‌ಗಳನ್ನು ಪಡೆದು ವಂಚಿಸಿದ್ದಾಗಿ ದೂರಿನಲ್ಲಿ ತಿಳಿಸಲಾಗಿತ್ತು.

Advertisement

ಸಂಶಯಾಸ್ಪದ ರೀತಿಯಲ್ಲಿ ಕಂಡ ಮೂವರ ಬಂಧನ
ಕುಂಬಳೆ:
ಶನಿವಾರ ಮುಂಜಾನೆ ಕುಂಬಳೆ ಪಿಎಚ್‌ಸಿ ರಸ್ತೆಯಲ್ಲಿ ಸಂಶಯಾಸ್ಪದ ರೀತಿಯಲ್ಲಿ ಕಂಡ ಪೆರಿಯಡ್ಕ ನಿವಾಸಿ ಅನ್ಸಾರ್‌ (26), ಮಧೂರು ಕೆ.ಕೆ.ಪುರದ ಉಸ್ಮಾನ್‌ (40) ಮತ್ತು ಉಳಿಯತ್ತಡ್ಕ ನ್ಯಾಶನಲ್‌ ನಗರದ ಅಶ್ರಫ್‌ (38)ನನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಪೊಲೀಸರು ಇವರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಬಂಧಿತರ ಪೈಕಿ ಅನ್ಸಾರ್‌ ಕೊಲೆ ಯತ್ನ, ಖಾಸಗಿ ಹಣಕಾಸು ಸಂಸ್ಥೆಯಲ್ಲಿ ನಕಲಿ ಚಿನ್ನ ಅಡವಿರಿಸಿ ವಂಚನೆ ನಡೆಸಿದ ಪ್ರಕರಣದಲ್ಲಿ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.

ನಿಲ್ಲಿಸಿದ್ದ ಬಸ್‌ಗಳಿಂದ ಡೀಸೆಲ್‌ ಕಳವು
ಕುಂಬಳೆ: ಕುಂಬಳೆ-ಬದಿಯಡ್ಕ ರಸ್ತೆಯಲ್ಲಿರುವ ಭಾರತ್‌ ಪೆಟ್ರೋಲ್‌ ಬಂಕ್‌ನ ಪರಿಸರದಲ್ಲಿ ರಾತ್ರಿ ನಿಲ್ಲಿಸಿದ್ದ ಎರಡು ಬಸ್‌ಗಳಿಂದ ಡೀಸೆಲ್‌ ಕಳವು ಮಾಡಿದ ಘಟನೆ ನಡೆದಿದೆ.

ಗುರುವಾಯೂರಪ್ಪನ್‌ ಬಸ್‌ನಿಂದ 150 ಲೀಟರ್‌ ಹಾಗೂ ಅರಿಯಪ್ಪಾಡಿ ಬಸ್‌ನಿಂದ 135 ಲೀಟರ್‌ ಡೀಸೆಲ್‌ ಕಳವು ಮಾಡಲಾಗಿದೆ. ಗುರುವಾಯೂರಪ್ಪನ್‌ ಬಸ್‌ನ ಕಂಡೆಕ್ಟರ್‌ ಅವಿನಾಶ್‌ ಹಾಗೂ ಅರಿಯಪ್ಪಾಡಿ ಬಸ್‌ನ ಮಾಲಕ ಅಬ್ದುಲ್‌ ಸತ್ತಾರ್‌ ನೀಡಿದ ದೂರಿನಂತೆ ಕುಂಬಳೆ ಪೊಲೀಸರು ಕೇಸು ದಾಖಲಿಸಿದ್ದಾರೆ. ಇದೇ ವೇಳೆ ಪೆಟ್ರೋಲ್‌ ಬಂಕ್‌ನ ಸಿಸಿ ಟಿವಿ ಕೆಮರಾ ಪರಿಶೀಲಿಸಿದಾಗ ಕಾರೊಂದರ ದೃಶ್ಯ ಪತ್ತೆಯಾಗಿದೆ.

ಎಂಡಿಎಂಎ ಗಾಂಜಾ ಸಹಿತ ಮೂವರ ಬಂಧನ
ಮಂಜೇಶ್ವರ/ಬದಿಯಡ್ಕ: ಮಂಜೇಶ್ವರ ಪೊಲೀಸರು ಆ. 9ರಂದು ರಾತ್ರಿ ನಡೆಸಿದ ಕಾರ್ಯಾಚರಣೆಯಲ್ಲಿ ಮೊರತ್ತಣೆಯಿಂದ ಸ್ಕೂಟರ್‌ನಲ್ಲಿ ಸಾಗಿಸುತ್ತಿದ್ದ 97 ಗ್ರಾಂ ಎಂಡಿಎಂಎ ವಶಪಡಿಸಿಕೊಂಡು ಈ ಸಂಬಂಧ ಹೊಸಂಗಡಿ ಆಚಾರಿಮೂಲೆ ಬಿಸ್ಮಿಲ್ಲಾ ಮಂಜಿಲ್‌ನ ಮೊಹಮ್ಮದ್‌ ಅಲ್ತಾಬ್‌(34)ನನ್ನು ಬಂಧಿಸಿದ್ದಾರೆ.

ಬೇಳ ಪೆರಿಯಡ್ಕದ ಮನೆಯೊಂದಕ್ಕೆ ದಾಳಿ ಮಾಡಿದ ಬದಿಯಡ್ಕ ಪೊಲೀಸರು 1.92 ಗ್ರಾಂ ಎಂಡಿಎಂಎ ಮತ್ತು 41.30 ಗ್ರಾಂ ಗಾಂಜಾ ಹಾಗೂ 13,500 ರೂ. ನಗದು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಪೆರಿಯಡ್ಕ ಕುಂಜಾರು ನಿವಾಸಿ ಇಬ್ರಾಹಿಂ ಇಸ್ಫಾಕ್‌ ಕೆ.ಎ. (25)ನನ್ನು ಹಾಗೂ ಬೇಳ ಮೆಣಸಿನಪಾರೆ ನಿವಾಸಿ ಮೊಹಮ್ಮದ್‌ ರಪೀಕ್‌ (21)ನನ್ನು ಬಂಧಿಸಿದ್ದಾರೆ. ರಹಸ್ಯ ಮಾಹಿತಿಯಂತೆ ದಾಳಿ ಮಾಡಲಾಗಿತ್ತು. ಬೆಡ್‌ರೂಂನ ಬೆಡ್‌ನ‌ ಅಡಿ ಭಾಗದಲ್ಲಿ ಪ್ಲಾಸ್ಟಿಕ್‌ ಚೀಲದಲ್ಲಿ ಎಂಡಿಎಂಎ ಬಚ್ಚಿಡಲಾಗಿತ್ತು. ಫ್ರಿಡ್ಜ್ ನೊಳಗೆ ಗಾಂಜಾ ಇರಿಸಲಾಗಿತ್ತು.

ಹೈಪರ್‌ ಮಾರ್ಕೆಟ್‌ಗೆ ಬೆಂಕಿ
ಉಪ್ಪಳ: ಇಲ್ಲಿನ ಪತ್ವಾಡಿ ರಸ್ತೆಯಲ್ಲಿರುವ ಹೈಪರ್‌ ಮಾರ್ಕೆಟ್‌ನಲ್ಲಿ ಬೆಂಕಿ ಆಕಸ್ಮಿಕದಿಂದ ಸುಮಾರು 5 ಲಕ್ಷ ರೂ. ನಷ್ಟ ಅಂದಾಜಿಸಲಾಗಿದೆ.

ಎ.ಸಿ., ಫ್ರಿಡ್ಜ್ ಸಹಿತ ವಿವಿಧ ಸಾಮಗ್ರಿಗಳು ಬೆಂಕಿಗಾಹುತಿಯಾಗಿವೆ. ಅಗ್ನಿಶಾಮಕ ದಳ ಬೆಂಕಿಯನ್ನು ಆರಿಸಿತು. ವಿದ್ಯುತ್‌ ಶಾರ್ಟ್‌ ಸರ್ಕ್ಯೂಟ್‌ ಬೆಂಕಿ ಆಕಸ್ಮಿಕಕ್ಕೆ ಕಾರಣವೆಂದು ಶಂಕಿಸಲಾಗಿದೆ.

ಆನ್‌ಲೈನ್‌ ವಂಚನೆ : ಕೇಸು ದಾಖಲು
ಕುಂಬಳೆ: ಆನ್‌ಲೈನ್‌ ವಂಚನೆಗೆ ಸಂಬಂಧಿಸಿ ಬದ್ರಿಯಾ ನಗರದ ಅಬ್ದುಲ್‌ ಮಿಶಾಲ್‌ ನೀಡಿದ ದೂರಿನಂತೆ ತಿರುವನಂತಪುರ ನೆಯ್ನಾಟಿಂಗರ ನಿವಾಸಿಯಾದ ಆನಂದ್‌ ವಿಸ್ಮಯಾ ವಿರುದ್ಧ ಕುಂಬಳೆ ಪೊಲೀಸರು ಕೇಸು ದಾಖಲಿಸಿದ್ದಾರೆ.

ಟೈಟಾನ್‌ ಕಂಪೆನಿಯಲ್ಲಿ ಹಣ ಠೇವಣಿಯಿರಿಸಿದರೆ ಭಾರೀ ಲಾಭ ಲಭಿಸುವುದಾಗಿ ನಂಬಿಸಿ 2023ರ ಡಿ. 13 ಮತ್ತು 14ರಂದು ಒಟ್ಟು 1.30 ಲಕ್ಷ ರೂ. ಪಡೆದು ವಂಚಿಸಿದ್ದಾಗಿ ಅಬ್ದುಲ್‌ ಮಿಶಾಲ್‌ ನೀಡಿದ ದೂರಿನಂತೆ ಕೇಸು ದಾಖಲಿಸಲಾಗಿದೆ.

ಮನೆ ಕುಸಿತ : ತಪ್ಪಿದ ದುರಂತ
ಮಂಜೇಶ್ವರ: ಶುಕ್ರವಾರ ರಾತ್ರಿ ಸುರಿದ ಗಾಳಿ, ಮಳೆಗೆ ಮಜೀರ್‌ಪಳ್ಳ ಧರ್ಮನಗರದ ಕೂಲಿ ಕಾರ್ಮಿಕ ಅಬ್ದುಲ್‌ ಖಾದರ್‌ ಅವರ ಮನೆಯ ಮೇಲ್ಛಾವಣಿ ಕುಸಿದು ಬಿದ್ದಿದೆ. ರಾತ್ರಿ 11 ಗಂಟೆಗೆ ಮನೆಯ ಪಕ್ಕಾಸೊಂದು ಮುರಿದು ಬಿದ್ದಿದೆ. ಕೂಡಲೇ ಮನೆಯಲ್ಲಿದ್ದವರು ಎಚ್ಚೆತ್ತು ಬಾಯಿಕಟ್ಟೆಯಲ್ಲಿರುವ ಸಂಬಂಧಿಕರ ಮನೆಯಲ್ಲಿ ಆಶ್ರಯ ಪಡೆದರು. ಗಂಟೆಗಳ ಬಳಿಕ ಮನೆಯ ಮೇಲ್ಛಾವಣಿ ಸಂಪೂರ್ಣ ಕುಸಿದು ಬಿತ್ತು. ಅಪಾಯದ ಆರಂಭ ಹಂತದಲ್ಲೇ ಮನೆಯಿಂದ ಸಂಬಂಧಿಕರ ಮನೆಗೆ ಹೋಗಿದ್ದರಿಂದ ಸಂಭವನೀಯ ಅಪಾಯ ತಪ್ಪಿತು.

Advertisement

Udayavani is now on Telegram. Click here to join our channel and stay updated with the latest news.

Next