ಬೆಂಗಳೂರು: ಕಳ್ಳರಿಂದ ಕಳವು ಮೊಬೈಲ್‌ಗಳನ್ನು ಖರೀದಿಸಿ ಬೇರೆಡೆ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದ ಆರೋಪದ ಮೇರೆಗೆ ಬಂಧಿಸಲು ಹೋದ ಪೊಲೀಸರ ಮೇಲೆ ಹಲ್ಲೆ ನಡೆಸಿದ ರೌಡಿಶೀಟರ್‌ನನ್ನು ಮಾಗಡಿ ರಸ್ತೆ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಜಗಜೀವನ್ ರಾಮ್‌ನಗರ ಪೊಲೀಸ್ ಠಾಣೆಯ ರೌಡಿಶೀಟರ್ ಅಸ್ಲಾಂ ಪಾಷಾ (50) ಬಂಧಿತ. ಆರೋಪಿಯನ್ನು ವೈದ್ಯಕೀಯ ಪರೀಕ್ಷೆಗೊಳಪಡಿಸಿದ ಬಳಿಕ ಹೆಚ್ಚಿನ ವಿಚಾರಣೆಗೊಳಪಡಿಸಲಾಗಿದೆ. ಈ ಸಂಬಂಧ ಜಗಜೀವನ್ ರಾಮ್‌ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದರು.
ಜೆ.ಜೆ.ನಗರ, ಎಸ್.ಜೆ.ಪಾರ್ಕ್, ವಿವೇಕನಗರ, ಗಿರಿನಗರ ಸೇರಿ ವಿವಿಧೆಡೆ ಪೊಲೀಸ್ ಠಾಣೆಗಳಲ್ಲಿ 15ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಅಸ್ಲಾಂ ಪಾಷಾ ಭಾಗಿಯಾಗಿ ಜೈಲು ಸೇರಿ ಜಾಮೀನಿನ ಮೇರೆಗೆ ಹೊರ ಬಂದಿದ್ದ. ಆದರೂ, ತನ್ನ ಹಳೇ ಚಾಳಿ ಬಿಡದೆ ಕದ್ದ ಮೊಬೈಲ್‌ಗಳನ್ನು ಕಳ್ಳರಿಂದ ಪಡೆದು ವ್ಯವಸ್ಥಿತವಾಗಿ ಪ್ಯಾಕ್ ಮಾಡಿಕೊಂಡು ಬೇರೆ ಬೇರೆ ರಾಜ್ಯಗಳಲ್ಲಿ ಮಾರಾಟ ಮಾಡುತ್ತಿದ್ದ ಎಂದು ಹೇಳಿದರು.
ಇತ್ತೀಚೆಗೆ ಮಾಗಡಿ ರಸ್ತೆ ಪೊಲೀಸರು ಮೊಬೈಲ್ ಕಳ್ಳನನ್ನು ಬಂಧಿಸಿ ಹೆಚ್ಚಿನ ವಿಚಾರಣೆಗೊಳಪಡಿಸಿದ್ದರು. ಈ ವೇಳೆ ಆತ ಕದ್ದ ಮೊಬೈಲ್‌ಗಳನ್ನು ಅಸ್ಲಾಂ ಪಾಷಾಗೆ ನೀಡಿರುವುದಾಗಿ ಬಾಯ್ಬಿಟ್ಟಿದ್ದ. ಈ ಮಾಹಿತಿ ಆಧರಿಸಿ ಪೊಲೀಸರು ಬಂಧಿಸಲು ಹೋದಾಗ ಅಸ್ಲಾಂ ಪಾಷಾ ಕುಟುಂಬಸ್ಥರು ಅಡ್ಡಿಪಡಿಸಿದ್ದಾರೆ. ಕರ್ತವ್ಯನಿರತ ಪೊಲೀಸರ ಮೇಲೆಯೂ ಆರೋಪಿ ಹಲ್ಲೆಗೆ ಮುಂದಾಗಿದ್ದ. ಈ ಸಂಬಂಧ ಆತನನ್ನು ಬಂಧಿಸಲಾಗಿದೆ. 2019ರಲ್ಲಿ ಈತನನ್ನು ಕೇಂದ್ರ ವಿಭಾಗದ ಪೊಲೀಸರು ಬಂಧಿಸಿ 500ಕ್ಕೂ ಹೆಚ್ಚು ಮೊಬೈಲ್‌ಗಳನ್ನು ವಶಕ್ಕೆ ಪಡೆದುಕೊಂಡಿದ್ದರು.
ಇದನ್ನೂ ಓದಿ : ಉಡುಪಿ ಜಿಲ್ಲಾ ಕಸಾಪ ಚುನಾವಣೆ: ನೀಲಾವರ ಸುರೇಂದ್ರ ಅಡಿಗರಿಗೆ ಹ್ಯಾಟ್ರಿಕ್ ಗೆಲುವು