ಬೆಂಗಳೂರು: ಗುಜರಿ ಅಂಗಡಿಯಲ್ಲಿ ಕಳ್ಳತನಕ್ಕೆ ಯತ್ನಿಸಿದ್ದ ಎಂಬ ಆರೋಪದ ಮೇಲೆ ಯುವಕನನ್ನು ಅಪಹರಿಸಿ ಹತ್ಯೆಗೈದು, ಮೃತ ದೇಹವನ್ನು ಚರಂಡಿಗೆ ಎಸೆದು ತಲೆಮರೆಸಿಕೊಂಡಿದ್ದ ಮೂವರು ಆರೋಪಿಗಳನ್ನು ರಾಮಮೂರ್ತಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕೆ.ಜಿ ಹಳ್ಳಿಯ ಪಿಳ್ಳಣ್ಣಗಾರ್ಡನ್ ನಿವಾಸಿ ಶೇಖ್ ಜಬಿವುಲ್ಲಾ (26), ಕೋರಂಗ್ ಜೋಪಡಿ ನಿವಾಸಿ ಶಹಬಾಜ್ ಅಲಿಯಾಸ್ ಬಬನ್(28) ಮತ್ತು ಉಡುಪಿ ಮೂಲದ ಪ್ರಶಾಂತ್ (34) ಬಂಧಿತರು.
ಆರೋಪಿಗಳು ಫೆಬ್ರವರಿಯಲ್ಲಿ ಸೈಫುಲ್ಲಾ ಎಂಬಾತ ನನ್ನು ಹತ್ಯೆಗೈದು, ಮತದೇಹವನ್ನು ಚರಂಡಿಗೆ ಎಸೆದು ಪರಾರಿಯಾಗಿದ್ದರು ಎಂದು ಪೊಲೀಸರು ಹೇಳಿದರು. ಡಿ.ಜೆ. ಹಳ್ಳಿಯಲ್ಲಿ ತನ್ನ ತಾತಜತೆ ವಾಸವಾಗಿದ್ದ ಸೈಫುಲ್ಲಾ ಕುದುರೆ ಗಾಡಿ ಇಟ್ಟು ಕೊಂಡು ಕೂಲಿ ಕೆಲಸ ಮಾಡಿಕೊಂಡಿದ್ದ. ಕೆಲಸ ನಿಮಿತ್ತ ಆಗಾಗ್ಗೆ 10-20 ದಿನಗಳ ಕಾಲ ಮನೆ ಬಿಟ್ಟು ಹೋಗುತ್ತಿದ್ದ. ಕಳೆದ ಫೆಬ್ರವರಿಯಲ್ಲಿ ಮನೆಯಿಂದ ಹೋದ ಸೈಫುಲ್ಲಾ 40 ದಿನಗಳಾದರೂ ಬಂದಿರಲಿಲ್ಲ. ಫೋನ್ ಮಾಡಿದಾಗ ಸ್ವಿಚ್ಡ್ ಆಫ್ ಆಗಿತ್ತು. ಗಾಬರಿಗೊಂಡ ಈತನ ಸಹೋದರ, ದೂರುದಾರ ಫಾಯಾಜುಲ್ಲಾ, ಸೈಫುಲ್ಲಾ ಜತೆ ಕೆಲಸ ಮಾಡುತ್ತಿದ್ದ ಯುವಕರು ಹಾಗೂ ಇತರರನ್ನು ವಿಚಾರಿಸಿದ್ದಾರೆ.
ಆಗ ಬಬಲ್ ಎಂಬಾತ “ನಿಮ್ಮ ತಮ್ಮ ಕಳ್ಳ. ಈಗಾಗಲೇ ಆತನಿಗೆ ಒಂದು ಗತಿ ಕಾಣಿಸಲಾಗಿದೆ’ ಎಂದು ಹೇಳಿ ಎಚ್ಚರಿಕೆ ನೀಡಿ ಕಳುಹಿಸಿದ್ದ. ಅದರಿಂದ ಅನುಮಾನಗೊಂಡು ಕೆ.ಜಿ.ಹಳ್ಳಿ ಠಾಣೆಗೆ ದೂರು ನೀಡಲು ಹೋದಾಗ ಸೈಫುಲ್ಲಾ ಫೋಟೋ ಠಾಣೆಯ ಬೋರ್ಡ್‌ನಲ್ಲಿ ಹಾಕಿ, ಈತನ ಬಗ್ಗೆ ಮಾಹಿತಿ ಕೋರಲಾಗಿತ್ತು. ಗಾಬರಿಗೊಂಡು ವಿಚಾರಿಸಿದಾಗ ರಾಮ ಮೂರ್ತಿನಗರ ಠಾಣೆ ವ್ಯಾಪ್ತಿಯಲ್ಲಿ ಈತನ ಮೃತದೇಹ ಪತ್ತೆಯಾಗಿರುವುದು ಗೊತ್ತಾಗಿದೆ.
ಬಳಿಕ ರಾಮಮೂರ್ತಿನಗರ ಠಾಣೆಗೆ ಹೋದಾಗ ಠಾಣೆ ವ್ಯಾಪ್ತಿಯ ಕಸ್ತೂರಿನಗರ ಸರ್ವೀಸ್ ರಸ್ತೆಯ ಪಕ್ಕದ ಚರಂಡಿಯಲ್ಲಿ ಮೃತದೇಹ ಪತ್ತೆಯಾಗಿತ್ತು. ಈ ಸಂಬಂಧ ಕೊಲೆ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದರು. ಇದೇ ವೇಳೆ ಬಬನ್ ಬಗ್ಗೆಯೂ ಫಾಯಾಜುಲ್ಲಾ ಪೊಲೀಸರಿಗೆ ಮಾಹಿತಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ಬಬಲ್ ಹಾಗೂ ಇತರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ತಪ್ಪೊಪ್ಪಿಕೊಂಡಿದ್ದಾರೆ ಎಂದು ಪೊಲೀಸರು ಹೇಳಿದರು.
ಕಳ್ಳತನ ಆರೋಪ: ಆರೋಪಿಗಳ ಪೈಕಿ ಶಹಬಾಜ್ ಗುಜರಿ ಮಾಲೀಕನಾಗಿದ್ದು, ಪ್ರಶಾಂತ್ ಅದಕ್ಕೆ ಭದ್ರತಾ ಸಿಬ್ಬಂದಿಯಾಗಿದ್ದ. ಫೆಬ್ರವರಿಯಲ್ಲಿ ರಾತ್ರಿ ಸೈಫುಲ್ಲಾ ಗುಜರಿ ಅಂಗಡಿ ಬಳಿ ಬಂದಿದ್ದಾನೆ. ಆಗ ಮೂವರು ಆರೋಪಿಗಳು ಈ ವೇಳೆ ಯಾವ ಕಾರಣಕ್ಕೆ ಗುಜರಿ ಬಳಿ ಬಂದಿರುವೆ? ಏನಾದರೂ ಕಳ್ಳತನ ಮಾಡಿರುವೆಯಾ? ಎಂದೆಲ್ಲ ಪ್ರಶ್ನಿಸಿದ್ದಾರೆ. ಆಗ ಗೊಂದಲಕ್ಕೀಡಾದ ಸೈಫುಲ್ಲಾ, ಚಿನ್ನಾಭರಣ ಕಳವು ಮಾಡಿದ್ದೇನೆ ಎಂದಿದ್ದಾನೆ. ಹೀಗಾಗಿ ಮೂವರು ಆರೋಪಿಗಳು ಆತನನ್ನು ಅಪಹರಿಸಿ ಗುಜರಿ ಅಂಗಡಿ ಹಿಂಭಾಗದ ಸ್ಥಳದಲ್ಲಿ ಇರಿಸಿ ನಿತ್ಯ ಹಿಂಸೆ ನೀಡಿ, ಚಿನ್ನಾಭರಣ ಇಟ್ಟಿರುವ ಜಾಗವನ್ನು ತೋರಿಸುವಂತೆ ಹಲ್ಲೆ ನಡೆಸುತ್ತಿದ್ದರು. ಆದರೆ, ಸೈಫುಲ್ಲಾ ಮಾನಸಿಕ ಅಸ್ವಸ್ಥನಾದರಿಂದ ಮರು ದಿನ ಏನನ್ನು ಕಳವು ಮಾಡಿಲ್ಲ ಎಂದಿದ್ದಾನೆ. ಅದರಿಂದ ಆಕ್ರೋಶಗೊಂಡ ಆರೋಪಿಗಳು ಮಾರಕಾಸ್ತ್ರಗಳಿಂದ ಆತನ ಮೇಲೆ ಹಲ್ಲೆ ನಡೆಸಿ ಹತ್ಯೆಗೈದಿದ್ದರು. ಬಳಿಕ ಕಸ್ತೂರಿನಗರದ ಸರ್ವೀಸ್ ರಸ್ತೆಯ ಚರಂಡಿಯಲ್ಲಿ ಮೃತದೇಹ ಎಸೆದು ಪರಾರಿಯಾಗಿದ್ದರು ಎಂದು ಪೊಲೀಸರು ಹೇಳಿದರು.
ರಾಮಮೂರ್ತಿ ನಗರ ಠಾಣಾಧಿಕಾರಿ ರಂಗಸ್ವಾಮಿ ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದಾರೆ.