ಬೆಂಗಳೂರು: ಇಸ್ಪಿಟ್ ಹಣದ ವಿಚಾರಕ್ಕೆ ವ್ಯಕ್ತಿ ಯೊಬ್ಬನನ್ನು ಹತ್ಯೆಗೈದಿದ್ದ ಏಳು ಮಂದಿಯನ್ನು ನಂದಿನಿ ಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಪ್ರೇಮ ನಗರದ ಕೆ.ಮಂಜುನಾಥ (42), ಚೌಡೇಶ್ವರಿನಗರದ ನಾಗರಾಜ್ ಅಲಿಯಾಸ್ ಸ್ಪಾಟ್ ನಾಗ (38), ಅನ್ನಪೂರ್ಣೇಶ್ವರಿನಗರದ ಗೋಪಾಲ್ (35), ಚೌಡೇಶ್ವರಿನಗರದ ಕಿರಣ್ ಕುಮಾರ್ (29), ಮಣಿಕಾಂತ್ (23), ಕಾರ್ತಿಕ್ (34), ಬಾಬು (32) ಬಂಧಿತರು.
ಆರೋಪಿಗಳು ಮೇ 24ರಂದು ರಾತ್ರಿ ಕಾಂಗ್ರೆಸ್ ಮುಖಂಡ ಕೃಷ್ಣಮೂರ್ತಿ ಹುಟ್ಟುಹಬ್ಬ ಮುಗಿಸಿಕೊಂಡು ಮನೆಗೆ ಹೋಗಿದ್ದ ಕಾಂಗ್ರೆಸ್ ಕಾರ್ಯಕರ್ತ ರವಿಯನ್ನು ಮತ್ತೂಮ್ಮೆ ಪಾರ್ಟಿ ಮಾಡೋಣ ಎಂದು ಕರೆಸಿಕೊಂಡು ಲಗ್ಗೆರೆ ಚೌಡೇಶ್ವರಿ ನಗರದ ಹಳ್ಳಿ ರುಚಿ ಹೋಟೆಲ್ ಬಳಿಯ ನಿರ್ಜನ ಪ್ರದೇಶದಲ್ಲಿ ಮಾರಕಾಸ್ತ್ರಗಳಿಂದ ಹೊಡೆದು, ಕಲ್ಲುಗಳನ್ನು ಎತ್ತಿಹಾಕಿ ಹತ್ಯೆಗೈದಿದ್ದರು ಎಂದು ಪೊಲೀಸರು ಹೇಳಿದರು.
ಹಳೇ ದ್ವೇಷಕ್ಕೆ ಕೊಲೆ: ಆರೋಪಿಗಳ ಪೈಕಿ ಮಂಜು ನಾಥ್ ಮತ್ತು ನಾಗರಾಜ್ ಕಳೆದ ಯುಗಾದಿ ಯಲ್ಲಿ ರವಿ ಜತೆ ಇಸ್ಪೀಟ್ ಆಟವಾಡಿದ್ದರು. ಆಗ ಆರೋಪಿಗಳು ಸಾವಿರಾರು ರೂ. ಸೋತಿದ್ದು ಆ ಹಣ ವಾಪಸ್ ಕೊಡುವಂತೆ ರವಿ ಬಳಿ ಜಗಳ ಮಾಡಿದ್ದರು. ಬಳಿಕ ಬಲವಂತವಾಗಿ 20 ಸಾವಿರ ರೂ. ಪಡೆದುಕೊಂಡಿದ್ದರು. ಕೆಲ ದಿನಗಳ ಬಳಿಕ ರವಿ, ಹಣ ವಾಪಸ್ ನೀಡುವಂತೆ ದುಂಬಾಲು ಬಿದ್ದಿದ್ದ. ಅದರಿಂದ ಆರೋಪಿಗಳು ಮತ್ತು ರವಿ ನಡುವೆ ದ್ವೇಷ ಹುಟ್ಟಿಕೊಂಡಿತ್ತು. ಇದೇ ವೇಳೆ ಮೇ 24ರಂದು ಸ್ಥಳೀಯ ಕಾಂಗ್ರೆಸ್ ಮುಖಂಡ ಕೃಷ್ಣಮೂರ್ತಿ ಹುಟ್ಟುಹಬ್ಬ ಇತ್ತು. ಅದರಲ್ಲಿ ರವಿ ಮತ್ತು ಆರೋಪಿಗಳು ಪಾಲ್ಗೊಂಡಿದ್ದರು. ಈ ವೇಳೆ ರವಿ ಮತ್ತೂಮ್ಮೆ, ಆರೋಪಿಗಳಿಗೆ ಹಣದ ವಿಚಾರ ಪ್ರಸ್ತಾಪಿಸಿ, ವಾಪಸ್ ಕೊಡುವಂತೆ ಕೇಳಿದ್ದಾನೆ. ಆಗ ಇಬ್ಬರ ನಡುವೆ ಜಗಳವಾಗಿದೆ. ಅರ್ಧಕ್ಕೆ ಊಟ ಬಿಟ್ಟಿದ್ದ ರವಿ, ಮನೆಗೆ ವಾಪಸ್ ಹೋಗಿದ್ದ. ಈ ವಿಚಾರವನ್ನು ಮನೆಯಲ್ಲಿ ಪತ್ನಿ ಪುಷ್ಪಾ ಬಳಿಯೂ ಹೇಳಿಕೊಂಡಿದ್ದ. ಕೆಲ ಹೊತ್ತಿನ ಬಳಿಕ ಆರೋಪಿ ಮಂಜುನಾಥ್ ಪದೇ ಪದೆ ಕರೆ ಮಾಡಿ ಮತ್ತೂಮ್ಮೆ ಪಾರ್ಟಿಗೆ ಬರುವಂತೆ ಹೇಳಿದ್ದಾನೆ. ಹೀಗಾಗಿ ರವಿ ರಾತ್ರಿ 12 ಗಂಟೆ ಸುಮಾರಿಗೆ ಮನೆಯಿಂದ ಹೊರಟ್ಟಿದ್ದ. ಮಾರ್ಗ ಮಧ್ಯೆಯೇ ಹಳ್ಳಿರುಚಿ ಹೋಟೆಲ್ ಬಳಿ ರವಿ ಮೇಲೆ ದಾಳಿ ನಡೆಸಿರುವ ಆರೋಪಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ, ಕಲ್ಲುಗಳನ್ನು ಎತ್ತಿ ಹಾಕಿ ಹತ್ಯೆಗೈದಿದ್ದ ಎಂದು ಪೊಲೀಸರು ಹೇಳಿದರು.