Advertisement
ಘಟನೆ ಹಿನ್ನೆಲೆಕಸಾಬಾ ನಿವಾಸಿ ಧಮೇಂದ್ರ ಅವರ ಅಣ್ಣನ ಪುತ್ರ ಕಾರ್ತಿಕ್ (25) ಐದು ವರ್ಷಗಳಿಂದ ಮಂಗಳೂರು ಪ್ಲಾನ್ ಟೆಕ್ ಕಂಪೆನಿಯಲ್ಲಿ ಸೇಫ್ಟಿ ಸೂಪರ್‌ವೈಸರ್ ಆಗಿ ಕೆಲಸ ಮಾಡುತ್ತಿದ್ದರು. ಅನಂತರ ಒಡಿಶಾಕ್ಕೆ ತೆರಳಿ ಅದೇ ಕಂಪೆನಿಯಲ್ಲಿ ಕೆಲಸ ಮಾಡಿಕೊಂಡಿದ್ದ. ಜ. 14ರಂದು ಮಂಗಳೂರು ಕಂಪೆನಿಯ ಮ್ಯಾನೇಜರ್ ಕುಶಲ್ ಅವರು ಧರ್ಮೆಂದ್ರ ಅವರಿಗೆ ಕರೆ ಮಾಡಿ ಕಾರ್ತಿಕ್ ವಿಷಾಹಾರ ಸೇವಿಸಿದ್ದಾನೆ. ಆತನ ಸ್ನೇಹಿತರು ಕಟಕ್‌ನ ರಿಲಾಕ್ಸ್ ಆಸ್ಪತ್ರೆಗೆ ದಾಖಲಿಸಿದ್ದಾಗಿ ತಿಳಿಸಿದ್ದಾರೆ. ಧಮೇಂದ್ರವರು ಆತನ ಪೋಷಕರಿಗೆ ವಿಚಾರ ತಿಳಿಸಿ ಸಂಬಂಧಿಕರಾದ ವೇಲು ಮತ್ತು ಕೃಷ್ಣ ಜತೆ ಜ. 17ರಂದು ಕಟಕ್ ತಲುಪಿದ್ದರು.
ಕಟಕ್‌ನ ರಿಲಾಕ್ಸ್ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಕಾರ್ತಿಕ್ ಆ ವೇಳೆ ಮಾತನಾಡುವ ಸ್ಥಿತಿಯಲ್ಲಿರಲಿಲ್ಲ. ಆತನ ಚಿಕಿತ್ಸೆಗೆ ಹೆಚ್ಚಿನ ಹಣದ ಆವಶ್ಯಕತೆ ಬಗ್ಗೆ ಆಸ್ಪತ್ರೆಯವರು ತಿಳಿಸಿದ್ದರು. 94 ಸಾವಿರ ರೂ. ಆಸ್ಪತ್ರೆ ಬಿಲ್ ಕೂಡ ಆಗಿತ್ತು. ಆಸ್ಪತ್ರೆಯಿಂದ ಅಲ್ಲಿನ ಮಂಗಲ್ ಬಾಗ್ ಪೊಲೀಸ್ ಠಾಣೆಗೆ ಮಾಹಿತಿ ಬಂದು ಪೊಲೀಸರು ಆಸ್ಪತ್ರೆಗೆ ತೆರಳಿ ಘಟನೆ ಬಗ್ಗೆ ಮಾಹಿತಿ ಪಡೆದುಕೊಂಡಿದ್ದರು. ಕಾರ್ತಿಕ್‌ನನ್ನು ಅಲ್ಲಿನ ಆಸ್ಪತ್ರೆಯಿಂದ ಬಿಡುಗಡೆಗೊಳಿಸಿ ಆ್ಯಂಬುಲೆನ್ಸ್‌ನಲ್ಲಿ ಉಡುಪಿ ಕಡೆಗೆ ಕರೆ ತರುತ್ತಿದ್ದ ವೇಳೆ ಜ. 19ರ ಮಧ್ಯಾಹ್ನ ದಾರಿ ಮಧ್ಯೆ ಜೂಸ್ ಕುಡಿಸಿದ್ದರು. ಕಾರ್ಕಳ ತಲುಪುವ ವೇಳೆ ಆತ ತೀರಾ ಅಸ್ವಸ್ಥನಾಗಿದ್ದ. ಸರಕಾರಿ ಆಸ್ಪತ್ರೆಗೆ ಕರೆ ತಂದಾಗ ಅಲ್ಲಿ ವೈದ್ಯರು ಆತ ಮೃತಪಟ್ಟಿದ್ದನ್ನು ಖಚಿತಪಡಿಸಿದ್ದರು. ದೂರು ಸ್ವೀಕರಿಸದ
ಒಡಿಶಾ ಪೊಲೀಸರು
ಘಟನೆ ಬಗ್ಗೆ ಮಾಹಿತಿ ಪಡೆದ ಕಾರ್ಕಳ ನಗರ ಪೊಲೀಸ್ ಠಾಣೆ ಯವರು ಕಾರ್ತಿಕ್ ಒಡಿಶಾ ರಾಜ್ಯದ ಪಾರಾದೀಪ್ ಲಾಕ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ವಿಷ ಪದಾರ್ಥ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಕಾರಣದಿಂದ ಪ್ರಕರಣದ ಬಗ್ಗೆ ಒಡಿಶಾದ ಪಾರಾದೀಪ್ ಲಾಕ್ ಪೊಲೀಸ್ ಠಾಣೆಗೆ ಸೂಚನ ಪತ್ರ ಕಳುಹಿಸಿ ಮಾಹಿತಿ ನೀಡಿದ್ದರು. ಕಾರ್ತಿಕ್‌ನ ಮೃತದೇಹ ಮಣಿಪಾಲ ಕೆಎಂಸಿ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿತ್ತು. ಒಡಿಶಾ ಪಾರಾದೀಪ್ ಲಾಕ್ ಠಾಣೆಯ ಪೊಲೀಸರು ಬಂದು ಪ್ರಕರಣ ದಾಖಲಿಸಿಕೊಂಡು ಮೃತದೇಹವನ್ನು ಬಿಟ್ಟುಕೊಡದೆ ಇರುವುದರಿಂದ ಮೃತದೇಹವು ಮೂರು ದಿನಗಳಿಂದ ಶವಗಾರದಲ್ಲೇ ಇರುವಂತಾಗಿದೆ. ಈ ಬಗ್ಗೆ ಜಿಲ್ಲಾ ಎಸ್‌ಪಿಯವರು ಮುತುವರ್ಜಿ ವಹಿಸಿ ಒಡಿಶಾ ಎಸ್‌ಪಿಯವರಲ್ಲಿ ಮಾತುಕತೆ ನಡೆಸಿದರೂ, ಅಲ್ಲಿನ ಪೊಲೀಸರು ಕಾರ್ಕಳಕ್ಕೆ ಬರಲು ಹಿಂದೇಟು ಹಾಕಿದ್ದರು. ಕೊನೆಗೆ ಎಸ್‌ಪಿಯವರು ಸ್ವಯಂ ನಿರ್ಧಾರ ಕೈಗೊಂಡು ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಪ್ರಕ್ರಿಯೆಗಳ ಮೂಲಕ ತಾಯಿಗೆ ಮೃತದೇಹವನ್ನು ಹಸ್ತಾಂತರಿಸಲು ಕಿರಿಯ ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದರು. ಅದರಂತೆ ಮೃತದೇಹ ಹಸ್ತಾಂತರ ಮಾಡಲಾಗಿದೆ.