Advertisement

ತಲೆಬುರುಡೆ, ಅಸ್ಥಿ ಪಂಜರ ಪತ್ತೆಯಾದ ಸ್ಥಳಕ್ಕೆ ವಿಧಿ ವಿಜ್ಞಾನ ಪ್ರಯೋಗಾಲಯ ತಂಡ ಭೇಟಿ

12:24 AM Oct 23, 2022 | Team Udayavani |

ಪುತ್ತೂರು: ಚಿಕ್ಕಮುಟ್ನೂರು ಗ್ರಾಮದ ಸಿದ್ಯಾಲದ ಗುಡ್ಡದಲ್ಲಿ ಶುಕ್ರವಾರ ಹುಲ್ಲು ಕಟಾವು ಮಾಡುತ್ತಿದ್ದ ವೇಳೆ ತೆಂಗಿನ ಮರದ ಬುಡದಲ್ಲಿ ಮಾನವ ತಲೆಬುರುಡೆ, ಅಸ್ಥಿಪಂಜರ ಪತ್ತೆಯಾದ ಸ್ಥಳಕ್ಕೆ ಮಂಗಳೂರು ವಿಧಿ ವಿಜ್ಞಾನ ಪ್ರಯೋಗಾಲಯದ ತಂಡ ಭೇಟಿ ನೀಡಿ ಪರಿಶೀಲಿಸಿದೆ.

Advertisement

ಸಿದ್ಯಾಲ ದಿ| ಜೀವನ್‌ ಭಂಡಾರಿಅವರಿಗೆ ಸೇರಿದ ಜಮೀನನ್ನು ಕೆಮ್ಮಾಯಿ ನಿವಾಸಿ ಶಿವಾನಂದ ನಾಯಕ್‌ ನೋಡಿಕೊಳ್ಳುತ್ತಿದ್ದರು. ತೋಟದ ಮತ್ತು ಗುಡ್ಡೆಯಲ್ಲಿ ಬೆಳೆದಿರುವ ಹುಲ್ಲನ್ನು ಕಟಾವು ಮಾಡಿಸುತ್ತಿದ್ದು, ಅ.21ರಂದು ಕೆಲಸ ನಿರ್ವಹಿಸುತ್ತಿದ್ದ ವೇಳೆ ಪಾಳು ಬಿದ್ದ ತೆಂಗಿನ ಬುಡದಲ್ಲಿ ಮಾನವನ ತಲೆ ಬುರುಡೆ ಮತ್ತು ಅಸ್ಥಿಪಂಜರ ಪತ್ತೆಯಾಗಿತ್ತು. ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು. ಸ್ಥಳಕ್ಕೆ ಆಗಮಿಸಿದ ಪೊಲೀಸರು ಮಂಗಳೂರು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಮಾಹಿತಿ ನೀಡಿದರು.

ಎಫ್‌ಎಸ್‌ಎಲ್‌ ತಜ್ಞರ ಆಗಮನ
ಮಂಗಳೂರಿನ ವಿಧಿ ವಿಜ್ಞಾನ ಪ್ರಯೋಗಾಲಯದ ಡಾ| ಗಿರೀಶ್‌ ಮತ್ತು ಲ್ಯಾಬ್‌ ಅಸಿಸ್ಟೆಂಟ್‌ ಸುಶಾಂತ್‌ ಅವರು ಪರಿಶೀಲಿಸಿದರು. ಮೃತ ವ್ಯಕ್ತಿಯ ಎದೆಗೂಡು ಮಣ್ಣಿನಡಿಯಲ್ಲಿ ಹೂತು ಹೋಗಿತ್ತು. ವ್ಯಕ್ತಿ ಧರಿಸಿದ್ದ ಬಟ್ಟೆ ಅದನ್ನು ಸುತ್ತುವರಿದಿತ್ತು. ಶರ್ಟ್‌ ಕಿಸೆಯಲ್ಲಿ ಪ್ಲಾಸ್ಟಿಕ್‌ ಕವರ್‌ ಇದ್ದು, ಆ ಪ್ಲಾಸ್ಟಿಕ್‌ ಕವರ್‌ನ ಒಳಗೆ ರೂ.100 ಮತ್ತು 50ರ ನೋಟು ಮತ್ತು ಚಿಲ್ಲರೆ ನಾಣ್ಯ ಹಾಗೂ ಸಣ್ಣ ಕೀ, ಅಲ್ಲೇ ಸಮೀಪ ಚಪ್ಪಲಿ ಪತ್ತೆಯಾಗಿತ್ತು. ವಿಧಿ ವಿಜ್ಞಾನ ತಂಡ ಅಸ್ಥಿ ಪಂಜರ ಮತ್ತು ಪತ್ತೆಯಾದ ಸೊತ್ತುಗಳನ್ನು ಪ್ರತ್ಯೇಕಗೊಳಿಸಿ ಪುತ್ತೂರು ನಗರ ಪೊಲೀಸ್‌ ಠಾಣೆಗೆ ಒಪ್ಪಿಸಿದ್ದಾರೆ.

ಡಿಎನ್‌ಎ ಪರೀಕ್ಷೆ
ಪತ್ತೆಯಾದ ಅಸ್ಥಿಪಂಜರದಿಂದ ಕೆಲವು ಭಾಗವನ್ನು ಬೆಂಗಳೂರು ಪ್ರಯೋಗಾಲಯಕ್ಕೆ ಡಿಎನ್‌ಎ ಪರೀಕ್ಷೆಗೆ ಕಳುಹಿಸಬೇಕಾಗಿದ್ದು, ಉಳಿದ ಅಸ್ಥಿಪಂಜರಗಳನ್ನು ಪೊಲೀಸ್‌ ಭದ್ರತೆಯಲ್ಲಿ ಇರಿಸಲಾಗುತ್ತದೆ. ನಗರ ಪೊಲೀಸ್‌ ಠಾಣೆ ಇನ್‌ಸ್ಪೆಕ್ಟರ್‌ ಸುನಿಲ್‌ ಕುಮಾರ್‌, ಎಸ್‌.ಐ. ಶ್ರೀಕಾಂತ್‌ ರಾಥೋಡ್‌, ಎಎಸ್‌ಐ ಲೋಕನಾಥ್‌ ಸಹಿತ ಪೊಲೀಸ್‌ ಸಿಬಂದಿ ಉಪಸ್ಥಿತರಿದ್ದರು.

7 ತಿಂಗಳ ಹಿಂದೆ ನಾಪತ್ತೆಯಾಗಿದ್ದ ವೃದ್ಧ..!
7 ತಿಂಗಳ ಹಿಂದೆ ಕೇಪುಳು ತಾರಿಗುಡ್ಡೆ ನಿವಾಸಿ ವೃದ್ಧ ಯೂಸುಫ್‌ ನಾಪತ್ತೆಯಾದ ಬಗ್ಗೆ ಅವರ ಸಹೋದರ ಪೊಲೀಸರಿಗೆ ದೂರು ನೀಡಿದ್ದರು. ಅವರು ಈ ತನಕ ಪತ್ತೆಯಾಗಿಲ್ಲ. ಸಿದ್ಯಾಲದಲ್ಲಿ ದೊರೆತಿರುವ ತಲೆಬುರಡೆ, ಅಸ್ಥಿಪಂಜರ ನಾಪತ್ತೆಯಾಗಿರುವ ವ್ಯಕ್ತಿಯದ್ದೆ ಎನ್ನುವ ಶಂಕೆ ಮೂಡಿದ್ದು ಡಿಎನ್‌ಎ ಪರೀಕ್ಷೆಯ ಬಳಿಕ ಸ್ಪಷ್ಟವಾಗಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next