Advertisement

ಶೋಧ ಕಾರ್ಯಾಚರಣೆ ವೇಳೆ ಅರಣ್ಯ ವೀಕ್ಷಕ ನಾಪತ್ತೆ

01:16 AM Sep 26, 2022 | Team Udayavani |

ಮಡಿಕೇರಿ: ಕರ್ತವ್ಯದಲ್ಲಿದ್ದ ಅರಣ್ಯ ವೀಕ್ಷಕ ನಾಪತ್ತೆಯಾಗಿರುವ ಘಟನೆ ವಿರಾಜಪೇಟೆ ತಾ|ನ ಮಾಕುಟ್ಟ ಅರಣ್ಯ ವ್ಯಾಪ್ತಿಯಲ್ಲಿ ನಡೆದಿದೆ.

Advertisement

ಮೂಲತಃ ಬಾಳೆಲೆ ಗ್ರಾಮದ ನಿವಾಸಿ ತರುಣ್‌ (23) ನಾಪತ್ತೆಯಾದ ಅರಣ್ಯ ವೀಕ್ಷಕನಾಗಿದ್ದು, ಕಾಲು ಜಾರಿ ನದಿಗೆ ಬಿದ್ದಿರುವ ಶಂಕೆ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ನದಿಯಲ್ಲಿ ಶೋಧ ಕಾರ್ಯ ನಡೆಸಲಾಗುತ್ತಿದೆ. ಮಾಕುಟ್ಟ ಮೀಸಲು ಅರಣ್ಯ ವ್ಯಾಪ್ತಿಗೆ ಒಳಪಡುವ ವಿ.ಬಾಡಗ ಗ್ರಾಮದಲ್ಲಿ ಕಾಡಾನೆ ಕಾರ್ಯಾಚರಣೆಗಾಗಿ ಅರಣ್ಯ ವೀಕ್ಷಕ ತರುಣ್‌ ಮತ್ತು ಇತರ ನಾಲ್ವರ ತಂಡ ಸೆ. 23ರ ಸಂಜೆ ವೇಳೆ ಕೂಂಬಿಂಗ್‌ ಕಾರ್ಯಾಚರಣೆ ನಡೆಸುತ್ತಿತ್ತು. ಈ ವೇಳೆ ತರುಣ್‌ ದಿಢೀರ್‌ ಆಗಿ ನಾಪತ್ತೆಯಾಗಿದ್ದಾರೆ.

ಅರಣ್ಯ ಇಲಾಖೆ ಸಿಬಂದಿ, ಪೊಲೀಸ್‌ ಇಲಾಖೆ, ಅಗ್ನಿಶಾಮಕ ದಳ, ಬಿಟ್ಟಾಂಗಲ ಗ್ರಾ.ಪಂ. ಸದಸ್ಯರು ಸೇರಿದಂತೆ ಸ್ಥಳೀಯರು ನಾಪತ್ತೆಯಾದ ತರುಣ್‌ಗಾಗಿ ಕತ್ತಲಿನವರೆಗೆ ಹುಡುಕಾಟ ನಡೆಸಿದ್ದಾರೆ. ಆದರೆ ತರುಣ್‌ ಪತ್ತೆಯಾಗಲಿಲ್ಲ.

ಮಡಿಕೇರಿಯಿಂದ ಸೆ. 23ರ ತಡ ರಾತ್ರಿ ಎನ್‌.ಡಿ.ಆರ್‌.ಎಫ್. ಸಿಬಂದಿಯ ಒಂದು ತಂಡವನ್ನು ಸ್ಥಳಕ್ಕೆ ಕರೆಯಿಸಿಕೊಂಡು ಅರಣ್ಯದಲ್ಲಿ ಶೋಧ ಕಾರ್ಯ ನಡೆಸಲಾಯಿತಾದರೂ ಫ‌ಲಕಾರಿಯಾಗಿಲ್ಲ. ಹೀಗಾಗಿ ಸೆ. 24ರ ಬೆಳಗ್ಗಿನಿಂದ ವಿ.ಬಾಡಗ ವ್ಯಾಪ್ತಿಯ ನೀರುಗುಂಡಿ ಪ್ರದೇಶದ ಕೀರೆಹೊಳೆ ನದಿಯಲ್ಲಿ ಶೋಧ ಕಾರ್ಯ ಮುಂದುವರಿಸಲಾಯಿತು. ಸಂಜೆಯವರೆಗೂ ನಿರಂತರ ಶೋಧ ಕಾರ್ಯ ನಡೆಸಲಾಯಿತಾದರೂ, ಯಾವುದೇ ಕುರುಹುಗಳು ಪತ್ತೆಯಾಗಿಲ್ಲ. ಸ್ಥಳದಲ್ಲಿ ಎನ್‌.ಡಿ.ಆರ್‌.ಎಫ್., ಅಗ್ನಿಶಾಮಕ ದಳ ಮತ್ತು ಪೊಲೀಸ್‌ ಇಲಾಖೆ ಸಿಬಂದಿ ಮೊಕ್ಕಾಂ ಹೂಡಿದ್ದು, ನಾಳೆಯೂ ಶೋಧ ಕಾರ್ಯ ನಡೆಯಲಿದೆ.

ಪೋಷಕರ ಆಕ್ರಂದನ
ತರುಣ್‌ ನಾಪತ್ತೆಯಾಗಿರುವ ಬಗ್ಗೆ ಸೆ. 23ರ ರಾತ್ರಿ ಅರಣ್ಯ ಇಲಾಖೆ ಅಧಿಕಾರಿಗಳು ಅವರ ಪೋಷಕರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ್ದ ಪೋಷಕರ ಆಕ್ರಂದನ ಮುಗಿಲುಮುಟ್ಟಿತ್ತು. ತಮ್ಮನ್ನು ಕೂಡ ಅರಣ್ಯದೊಳಗೆ ತೆರಳಲು ಅವಕಾಶ ನೀಡುವಂತೆ ಸ್ಥಳದಲ್ಲಿದ್ದ ಅರಣ್ಯಾಧಿಕಾರಿಗಳಲ್ಲಿ ಮನವಿ ಮಾಡಿದರು. ಮಾಕುಟ್ಟ ದಟ್ಟ ಅರಣ್ಯವಾಗಿದ್ದು, ತರುಣ್‌ ನಾಪ್ತತೆಯಾದ ಪ್ರದೇಶ ದುರ್ಗಮ ಸ್ಥಳವಾಗಿರುವ ಹಿನ್ನೆಲೆಯಲ್ಲಿ ಅಲ್ಲಿಗೆ ತೆರಳುವುದು ಸೂಕ್ತವಲ್ಲ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಅವರ ಮನವೊಲಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next