ಬೆಂಗಳೂರು: ಮದ್ಯದ ಆಮಲಿನಲ್ಲಿ ವಿದೇಶಿ ಮಹಿಳೆಯರು ಹೊಯ್ಸಳ ಸಿಬಂದಿ ಮೇಲೆ ಹಲ್ಲೆ ನಡೆಸಿರುವ ಘಟನೆ ಬ್ರಿಗೇಡ್ ರಸ್ತೆಯಲ್ಲಿ ರವಿವಾರ ತಡರಾತ್ರಿ ನಡೆದಿದೆ.
ನೈಜೀರಿಯಾ ಮೂಲದ ಪೀಸ್ ಪರ್ನಾಷ್ ಹಾಗೂ ಜೂಲಿಯ ವಾಂಜೀರೋ ಸಹಿತ ಮೂವರು ಮಹಿಳೆಯರು ನಗರದ ಕಮ್ಮನಹಳ್ಳಿಯಲ್ಲಿ ವಾಸವಾಗಿದ್ದರು. ವಾರಾಂತ್ಯವಾಗಿದ್ದರಿಂದ ಬೀಗ್ರೇಡ್ ರಸ್ತೆಯಲ್ಲಿರುವ ಪಬ್ ಆ್ಯಂಡ್ ರೆಸ್ಟೋರೆಂಟ್‌ಗೆ ಬಂದಿದ್ದು, ತಡರಾತ್ರಿವರೆಗೂ ಕಂಠಪೂರ್ತಿ ಮದ್ಯ ಸೇವಿಸಿದ್ದಾರೆ.
ಬಳಿಕ ಹೋಟೆಲ್ ಸಿಬಂದಿ ಜತೆ ವಾಗ್ವಾದಕ್ಕಿಳಿದ್ದರಿಂದ ಹೋಟೆಲ್‌ನಿಂದ ಹೊರಗಡೆ ಕಳುಹಿಸಲಾಗಿದೆ. ಅನಂತರ ರಾತ್ರಿ 1.30ರ ಸುಮಾರಿಗೆ ಬ್ರಿàಗೇಡ್ ರಸ್ತೆಯಲ್ಲಿ ಅಸಭ್ಯವಾಗಿ ಓಡಾಡುತ್ತಿದ್ದು, ಸಾರ್ವಜನಿಕರಿಗೆ ಕಿರಿಕಿರಿ ಉಂಟು ಮಾಡುತ್ತಿದ್ದರು. ಆಗ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅದೇ ವೇಳೆ ಗಸ್ತಿನಲ್ಲಿದ್ದ ಕಬ್ಬನ್‌ಪಾರ್ಕ್ ಠಾಣೆ ಸಿಬಂದಿ ಸ್ಥಳಕ್ಕೆ ಬಂದು ತಡರಾತ್ರಿ 1.30ರ ಆಗಿದ್ದು, ಸ್ಥಳದಿಂದ ಹೊರಡುವಂತೆ ಸೂಚಿಸಿದ್ದಾರೆ. ಅದಕ್ಕೆ ಇಬ್ಬರು ಮಹಿಳೆಯರು ಏಕಾಏಕಿ ಹೊಯ್ಸಳ ಸಿಬಂದಿ ಜತೆ ವಾಗ್ವಾದಕ್ಕಿಳಿಸಿದ್ದಾರೆ.
ಕೂಡಲೇ ಪಿಎಸ್‌ಐ ಸ್ಥಳಕ್ಕೆ ಬಂದು ಇಷ್ಟೊತ್ತಿನಲ್ಲಿ ಈ ರೀತಿ ಓಡಾಡಬಾರದು, ಮನೆಗೆ ಹೋಗಿ ಎಂದು ಎಚ್ಚರಿಕೆ ನೀಡಿದ್ದಾರೆ. ಆದರೂ ಮಹಿಳೆಯರು ಕೇಳದೆ, ಪಿಎಸ್‌ಐ ಹಾಗೂ ಸಿಬಂದಿ ಜತೆ ಗಲಾಟೆ ಮಾಡಿದ್ದಾರೆ. ಒಂದು ಹಂತದಲ್ಲಿ ತಳ್ಳಾಟ, ನೂಕಾಟ ನಡೆದಿದೆ. ಅದು ವಿಕೋಪಕ್ಕೆ ಹೋದಾಗ ಹೆಡ್‌ಕಾನ್‌ಸ್ಟೆಬಲ್ ನಾಗರಾಜ್ ಮೇಲೆ ಹಲ್ಲೆ ನಡೆಸಿದ್ದಾರೆ. ಕೂಡಲೇ ಹೆಚ್ಚಿನ ಸಿಬಂದಿಯನ್ನು ಕರೆಸಿಕೊಂಡು ಇಬ್ಬರನ್ನು ಠಾಣೆಗೆ ಕರೆದೊಯ್ದು ವೈದ್ಯಕೀಯ ಪರೀಕ್ಷೆ ನಡೆಸಿ, ಪ್ರಾಥಮಿಕ ಮಾಹಿತಿ ಸಂಗ್ರಹಿಸಿ, ವಿಚಾರಣೆಗೆ ಹಾಜರಾಗುವಂತೆ ಸೂಚಿಸಿ ನೋಟಿಸ್ ಕೊಟ್ಟು ಕಳುಹಿಸಲಾಗಿದೆ ಎಂದು ಪೊಲೀಸರು ಹೇಳಿದರು.
ಅಶೋಕನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.