Advertisement

Crime ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

08:29 PM Sep 02, 2023 | Team Udayavani |

ಮದ್ಯ ಸಹಿತ ಬಂಧನ, ಕಾರು ವಶಕ್ಕೆ
ಮಂಜೇಶ್ವರ: ಮಂಜೇಶ್ವರ ತಪಾಸಣ ಕೇಂದ್ರದಲ್ಲಿ ಅಬಕಾರಿ ದಳ ನಡೆಸಿದ ಕಾರ್ಯಾಚರಣೆಯಲ್ಲಿ ಕಾರಿನಲ್ಲಿ ಸಾಗಿಸುತ್ತಿದ್ದ 2400 ಟೆಟ್ರೋ ಪ್ಯಾಕೆಟ್‌ (432 ಲೀಟರ್‌) ಮದ್ಯವನ್ನು ವಶಪಡಿಸಲಾಗಿದೆ. ಈ ಸಂಬಂಧ ಮಂಗಳೂರು ಜಪ್ಪಿನಮೊಗರು ಗೋರಿಗುಡ್ಡೆ ಲೋಬೋ ಕಾಂಪೌಂಡ್‌ನ‌ ಬಾಲಕೃಷ್ಣ (50) ನನ್ನು ಬಂಧಿಸಲಾಗಿದೆ. ಮದ್ಯ ಸಾಗಿಸಿದ ಕಾರನ್ನು ವಶಪಡಿಸಲಾಗಿದೆ.

Advertisement

ಮದ್ಯ ಸಹಿತ ಬಂಧನ
ಕಾಸರಗೋಡು: ಕಾಸರಗೋಡು ಅಬಕಾರಿ ರೇಂಜ್‌ ಕಚೇರಿಯ ಅಧಿಕಾರಿಗಳು ನಡೆಸಿದ ಕಾರ್ಯಾಚರಣೆಯಲ್ಲಿ ತೆಕ್ಕಿಲ್‌ ಚಟ್ಟಂಚಾಲ್‌ನಿಂದ 1.98 ಲೀಟರ್‌ ಮದ್ಯ ವಶಪಡಿಸಿಕೊಳ್ಳಲಾಗಿದ್ದು, ಈ ಸಂಬಂಧ ಮೈಲಾಟಿಯ ಪ್ರಶಾಂತ್‌(34)ನನ್ನು ಬಂಧಿಸಲಾಗಿದೆ. ಮದ್ಯ ಸಾಗಿಸಲು ಬಳಸಿದ ಬೈಕನ್ನು ವಶಪಡಿಸಿದ್ದಾರೆ.

ಬೈಕ್‌ ಕಳವುಗೈದು ಬಿಡಿ ಭಾಗಗಳ ಮಾರಾಟ
ಕಾಸರಗೋಡು: ಬೈಕ್‌ಗಳನ್ನು ಕಳವುಗೈದು ಬಿಡಿ ಭಾಗಗಳನ್ನು ಮಾರಾಟ ಮಾಡುವ ಪ್ರಕರಣದ ಆರೋಪಿ ತೃಶ್ಶೂರು ನಿವಾಸಿಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಈತನನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ರೈಲು ಗಾಡಿಗೆ ಮತ್ತೆ ಕಲ್ಲೆಸೆತ
ಕುಂಬಳೆ: ರೈಲು ಗಾಡಿಗೆ ಮತ್ತೆ ಕಲ್ಲೆಸೆತ ನಡೆದಿದೆ. ತಿರುವನಂತಪುರದಿಂದ ಮಂಗಳೂರಿಗೆ ಪ್ರಯಾಣಿಸುತ್ತಿದ್ದ ನೇತ್ರಾವತಿ ಎಕ್ಸ್‌ಪ್ರೆಸ್‌ ರೈಲಿಗೆ ಸೆ. 1ರಂದು ರಾತ್ರಿ 9 ಗಂಟೆಗೆ ಕುಂಬಳೆ ಬಳಿ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ್ದಾರೆ. ಕಲ್ಲು ರೈಲಿನ ಬಾಗಿಲಿನ ಗಾಜಿಗೆ ತಗಲಿದ್ದು, ಗಾಜು ಪುಡಿಯಾಗಿದೆ. ಈ ಬಗ್ಗೆ ಕಾಸರಗೋಡು ರೈಲ್ವೇ ಪೊಲೀಸರು, ಕುಂಬಳೆ ಪೊಲೀಸರು ಜಂಟಿಯಾಗಿ ತನಿಖೆ ಆರಂಭಿಸಿದ್ದಾರೆ.

ಮಟ್ಕಾ : ಬಂಧನ
ಕುಂಬಳೆ: ಇಲ್ಲಿನ ಪೇಟೆಯಲ್ಲಿ ಮಟ್ಕಾ ದಂಧೆಯಲ್ಲಿ ನಿರತನಾಗಿದ್ದ ಕೊಯಿಪ್ಪಾಡಿಯ ಗೋಪಾಲಕೃಷ್ಣ (49)ನನ್ನು ಕುಂಬಳೆ ಪೊಲೀಸರು ಬಂಧಿಸಿದ್ದಾರೆ. ಈತನಿಂದ 860 ರೂ. ವಶಪಡಿಸಿಕೊಳ್ಳಲಾಗಿದೆ.

Advertisement

ರಬ್ಬರ್‌ ಶೀಟ್‌ ಸಹಿತ ಕಳವು : ಬಂಧನ
ಮುಳ್ಳೇರಿಯ: ನೆಟ್ಟಣಿಗೆ ಗ್ರಾಮದ ಕಿನ್ನಿಂಗಾರಿನಲ್ಲಿರುವ ದಾಸ್ತಾನು ಕಟ್ಟಡದಲ್ಲಿ ಸಂಗ್ರಹಿಸಿಡಲಾಗಿದ್ದ 15 ಕ್ವಿಂಟಾಲ್‌ ರಬ್ಬರ್‌ ಶೀಟ್‌ ಸಹಿತ ವಿವಿಧ ಸಾಮಗ್ರಿಗಳನ್ನು ಕಳವುಗೈದ ಬಗ್ಗೆ ಆದೂರು ಪೊಲೀಸರಿಗೆ ದೂರು ನೀಡಲಾಗಿದೆ. ಈ ಸಂಬಂಧ ಟ್ಯಾಪಿಂಗ್‌ ಕಾರ್ಮಿಕ ನೆಟ್ಟಣಿಗೆಯ ಜನಾರ್ದನನನ್ನು ಪೊಲೀಸರು ಬಂಧಿಸಿದ್ದಾರೆ. ಒಟ್ಟು 2,30,000 ರೂ. ಮೌಲ್ಯದ ಸಾಮಗ್ರಿಗಳನ್ನು ಕಳವು ಮಾಡಲಾಗಿದೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.

ಯುವತಿ ನಾಪತ್ತೆ
ಕುಂಬಳೆ: ಕೆಲಸಕ್ಕೆಂದು ತಿಳಿಸಿ ಹೋದ ಬಂದ್ಯೋಡು ಮಳ್ಳಂಗೈಯ ಜಯಕರ ಶೆಟ್ಟಿ ಅವರ ಪುತ್ರಿ ಶ್ರೇಯಾ (23) ನಾಪತ್ತೆಯಾಗಿರುವುದಾಗಿ ಕುಂಬಳೆ ಪೊಲೀಸರಿಗೆ ದೂರು ನೀಡಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಕುಂಬಳೆ ಎಸ್‌.ಐ.ಗೆ ಬೆದರಿಕೆ
ಆರೋಪಿಯ ಮಾಹಿತಿ ಲಭ್ಯ
ಕುಂಬಳೆ: ಕುಂಬಳೆ ಠಾಣೆಯಲ್ಲಿ ಎಸ್‌.ಐ. ಆಗಿದ್ದ ರಜಿತ್‌ ಹಾಗೂ ಅವರ ಕುಟುಂಬಕ್ಕೆ ಕೊಲೆ ಬೆದರಿಕೆಯೊಡ್ಡಿದ ಪ್ರಕರಣದಲ್ಲಿ ಆರೋಪಿಯ ಮಾಹಿತಿ ಲಭಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿ ತಲೆಮರೆಸಿಕೊಂಡಿದ್ದು, ಆತನಿಗಾಗಿ ಶೋಧ ನಡೆಯುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next