ಬೆಂಗಳೂರು: ಸಮಾಜದಲ್ಲಿ ಹೆಚ್ಚುತ್ತಿರುವ ಕೊಲೆ, ಸುಲಿಗೆ, ಅತ್ಯಾಚಾರದಂತಹ ಅಪರಾಧ ಕೃತ್ಯಗಳು ಇಂದಿನ ಚಿತ್ರರಂಗದ ಫಲಶ್ರುತಿ ಎಂದು ಹಿರಿಯ ನಟ ಕಲಾತಪಸ್ವಿ ಡಾ.ರಾಜೇಶ್ ಕಟುವಾಗಿ ಹೇಳಿದ್ದಾರೆ. ಗಾನಗಂಗಾ ಲಲಿತ ಕಲಾ ಸಂಸ್ಥೆ ಮತ್ತು ಪುಟ್ಟಣ್ಣ ಕಣಗಾಲ್ ಚಲನಚಿತ್ರ ತರಬೇತಿ ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ಭಾನುವಾರ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಲಾಗಿದ್ದ “ಸಂಗೀತೋತ್ಸವ-2017′ ಉದ್ಘಾಟಿಸಿ ಅವರು ಮಾತನಾಡಿದರು.
ಸುಮಾರು 80ರ ದಶಕದವರೆಗೆ ಉತ್ತಮ ಸಂಸ್ಕಾರ, ಸಚ್ಚಾರಿತ್ರ್ಯ, ಒಳ್ಳೆಯ ನಡೆ-ನುಡಿಯ ಬಗ್ಗೆ ಬೆಳಕು ಚೆಲ್ಲುತ್ತಿದ್ದ ಚಿತ್ರರಂಗ ಇಂದು ಮಚ್ಚು, ಲಾಂಗು ಹಿಡಿಯುವುದು ಹೇಗೆ, ಕತ್ತು ಕತ್ತರಿಸುವುದು ಹೇಗೆ ಎಂದು ಹೇಳಿಕೊಡುತ್ತಿದೆ. ಇಂದು ದಿನಬೆಳಗಾದರೆ ನಡೆಯುತ್ತಿರುವ ಅತ್ಯಾಚಾರ, ಕೊಲೆ, ಸುಲಿಗೆ, ದರೋಡೆಯಂತಹ ಪ್ರಕರಣಗಳು ನಮ್ಮ ಕಾಲದಲ್ಲಿರಲಿಲ್ಲ. ಅಪರಾಧ ಕೃತ್ಯಗಳ ಹೆಚ್ಚಳಕ್ಕೆ ಈಗಿನ ಚಿತ್ರರಂಗವೇ ಕಾರಣ ಎಂದರು.
ಕನ್ನಡ ಚಿತ್ರರಂಗ ಅಧಃಪಾತಾಳದತ್ತ: 50ರಿಂದ 80ರ ದಶಕದವರೆಗೆ ಕನ್ನಡ ಚಿತ್ರರಂಗದಲ್ಲಿ ಇದ್ದಂತಹ ಪುಟ್ಟಣ್ಣ ಕಣಗಾಲ್ ಅವರಂತಹ ನಿರ್ದೇಶಕರು, ಡಾ.ರಾಜ್‌ಕುಮಾರ್, ನರಸಿಂಹರಾಜು, ಉದಯಕುಮಾರ್, ಕಲ್ಯಾಣ್‌ಕುಮಾರ್, ವಜ್ರಮುನಿ ಅವರಂತಹ ಕಲಾವಿದರಿಗೆ ಪರ್ಯಾಯವಾದ ಅಥವಾ ಅಂದಿನ ನಿರ್ದೇಶಕರು, ಕಲಾವಿದರನ್ನು ಸರಿಗಟ್ಟುವ ನಿರ್ದೇಶಕರನ್ನಾಗಲಿ, ಕಲಾವಿದರನ್ನಾಗಲಿ ನೋಡಲು ಇಂದಿಗೂ ಸಾಧ್ಯವಾಗುತ್ತಿಲ್ಲ. ಅಂದು ಹಿಮಾಲಯದ ತುದಿಯಲ್ಲಿ ರಾರಾಜಿಸುತ್ತಿದ್ದ ಕನ್ನಡ ಚಿತ್ರರಂಗ ಇಂದು ಸಪ್ತ ಪಾತಾಳಗಳಲ್ಲೇ ಕೊನೆಯದಾದ ಅಧಃ ಪಾತಾಳಕ್ಕೆ ಕುದಿದೆ. ಅಂದು ಅಪಾರ ಪಾಂಡಿತ್ಯ, ಕಲೆಯಿಂದ ಸಂಪನ್ನವಾಗಿದ್ದ ಚಿತ್ರರಂಗದಲ್ಲಿ ಇಂದು ಕೋಟಿ ಕೋಟಿ ಹಣವಿದೆ. ಆದರೆ, ಕಲೆ, ಪಾಂಡಿತ್ಯವಿಲ್ಲವಾಗಿದೆ ಎಂದು ತೀವ್ರ ಬೇಸರ ವ್ಯಕ್ತಪಡಿಸಿದರು.
ಹೀನಾಯಮಟ್ಟ ತಲುಪಿರುವ ಸಂಭಾಷಣೆ: ಪುಟ್ಟಣ್ಣ ಕಣಗಾಲ್ ಅವರು ತೆಗೆದ ಒಂದೊಂದು ಚಿತ್ರವೂ ಒಂದೊಂದು ಮೈಲಿಗಲ್ಲು. ವಿಪರ್ಯಾಸ ಎಂದರೆ ಇಂದು ಕಾದಂಬರಿ ಆಧಾರಿತ ಚಿತ್ರಗಳು ಬಹಳ ವಿರಳ. ಅಂದು ಚಿತ್ರರಂಗದ ಸಂಭಾಷಣೆ ರಾಷ್ಟ್ರಕವಿಗಳಾದ ಕುವೆಂಪು, ಜಿ.ಎಸ್.ಶಿವರುದ್ರಪ್ಪ ಅಂತಹವರಿಗೂ ಒಪ್ಪಿಗೆಯಾಗುತ್ತಿತ್ತು. ಇಂದಿನ ಕನ್ನಡದ ಸಂಭಾಷಣೆಗಳು ತಾರೀ ಹೀನಾಯ ಮಟ್ಟಕ್ಕೆ ತಲುಪಿವೆ. ಕನ್ನಡ ಚಿತ್ರರಂಗವನ್ನು ಹಿಂದಿನ ಪರಾಕಾಷ್ಟೆಗೆ ಕೊಂಡೊಯ್ಯಲು ಪ್ರತಿಯೊಬ್ಬರೂ ಸಕಾರಾತ್ಮಕವಾಗಿ ದುರಿಯಬೇಕಿದೆ ಎಂದರು.
ಗಾನಗಂಗಾ ಸಂಸ್ಥೆಯ ನಿರ್ದೇಶಕ ಪಂಪಾಪತಿ ಗದ್ದಿ ಅವರು ಓದಿದ್ದು ಕಾನೂನು ಪದವಿಯಾದರೂ, ಕಲಾವಿದರ ಕುಟುಂಬದಲ್ಲಿ ಹುಟ್ಟಿ ಬೆಳೆದಿದ್ದರಿಂದ ಸಂಗೀತ ಕಲಿತು ಸಂಸ್ಥೆಯನ್ನೂ ಹುಟ್ಟುಹಾಕಿ ನೂರಾರು ಜನರಿಗೆ ಸಂಗೀತ ಧಾರೆ ಎರೆಯುತ್ತಿದ್ದಾರೆ ಎಂದು ಶ್ಲಾ ಸಿದರು. ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ಬಲವಂತರಾವ್ ಪಾಟೀಲ್, ಲಕ್ಷ್ಮಿ ಪುಟ್ಟಣ್ಣ ಕಣಗಾಲ್, ಗಾನಗಂಗಾ ಸಂಸ್ಥೆ ಮತ್ತು ಪುಟ್ಟಣ್ಣ ಕಣಗಾಲ್ ಚಲನಚಿತ್ರ ತರಬೇತಿ ಸಂಸ್ಥೆ ನಿರ್ದೇಶಕರಾದ ಪಂಪಾಪತಿ ಗದ್ದಿ ದಂಪತಿ ಉಪಸ್ಥಿತರಿದ್ದರು. ಎರಡೂ ಸಂಸ್ಥೆಗಳ ವಿದ್ಯಾರ್ಥಿಗಳು ಪ್ರಸ್ತುತಪಡಿಸಿದ ಸಂಗೀತ ಹಾಗೂ ನೃತ್ಯ ಪ್ರದರ್ಶನ ನೆರೆದಿದ್ದ ಪ್ರೇಕ್ಷಕರ ಮನಗೆದ್ದವು.