ಬೆಂಗಳೂರು: ಹಳೇ ದ್ವೇಷಕ್ಕೆ ರೌಡಿಯೊಬ್ಬ ಪೇಂಟರ್‌ನನ್ನು ನಡು ರಸ್ತೆಯಲ್ಲಿ ಚಾಕುವಿನಿಂದ ಇರಿದು ಕೊಲೆಗೈದಿರುವ ಘಟನೆ ಬನಶಂಕರಿ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಕಾವೇರಿನಗರ ನಿವಾಸಿ ವಿಕ್ರಂ(22) ಕೊಲೆಯಾದ ಯುವಕ. ಕೃತ್ಯ ಎಸಗಿದ ರೌಡಿ ವಾಸೀಂ(28)ನನ್ನು ಪೊಲೀಸರು ಬಂಧಿಸಿದ್ದಾರೆ.
ಕಾವೇರಿನಗರದಲ್ಲಿ ವಾಸವಾಗಿರುವ ವಿಕ್ರಂ, ಪೇಂಟಿಂಗ್ ಕೆಲಸ ಮಾಡಿಕೊಡಿದ್ದ. ಆರೋಪಿ ವಾಸೀಂ ವಿರುದ್ಧ ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ ಕೊಲೆ ಯತ್ನ, ದರೋಡೆ, ಹಲ್ಲೆ, ಮಾದಕವಸ್ತು ಸೇವನೆ, ಮಾರಾಟ ಪ್ರಕರಣಗಳು ದಾಖಲಾಗಿದ್ದು, ರೌಡಿಶೀಟರ್ ಆಗಿದ್ದಾನೆ. ಎರಡೂವರೆ ವರ್ಷಗಳ ಹಿಂದೆ ರಸ್ತೆ ಅಪಘಾತದ ವಿಚಾರಕ್ಕೆ ವಿಕ್ರಂ ಮತ್ತು ವಾಸೀಂ ನಡುವೆ ಗಲಾಟೆ ಆಗಿತ್ತು. ಅಂದಿನಿಂದ ವಾಸೀಂ, ವಿಕ್ರಂ ಮೇಲೆ ಹಲ್ಲೆ ನಡೆಸಲು ಸಂಚು ರೂಪಿಸಿದ್ದ. ಆದರೆ, ಸಾಧ್ಯವಾಗಿರಲಿಲ್ಲ. ಸೋಮವಾರ ಸಂಜೆ 5 ಗಂಟೆಗೆ ಕಾವೇರಿ ನಗರದ ಹೋಟೆಲ್‌ವೊಂದರ ಬಳಿ ವಿಕ್ರಂ ಸ್ನೇಹಿತರಜತೆ ನಿಂತಿದ್ದ. ಆ ವೇಳೆ ಬೈಕ್‌ನಲ್ಲಿ ಬಂದ ಆರೋಪಿ ವಾಸೀಂ, ಚಾಕುವಿನಿಂದ ವಿಕ್ರಂಗೆ ಐದಾರು ಬಾರಿ ಇರಿದು ಕೊಲೆಗೈದು ಪರಾರಿಯಾಗಿದ್ದ. ಈ ಮಾಹಿತಿ ಪಡೆದ ಪೊಲೀಸರು ಕೂಡಲೇ ಸ್ಥಳಕ್ಕೆ ಧಾವಸಿ ಪ್ರಾಥಮಿಕ ಮಾಹಿತಿ ಪಡೆದುಕೊಂಡು, ಕ್ಷೀಪ್ರ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ ಎಂದು ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದರು.
ಈ ಕುರಿತು ಪ್ರತಿಕ್ರಿಯೆ ನೀಡಿದ ಡಿಸಿಪಿ ಲೋಕೇಶ್ ಬಿ.ಜಗಲಸಾರ, ಹಳೇ ದ್ವೇಷದ ಹಿನ್ನೆಲೆಯಲ್ಲಿ ಆರೋಪಿ, ವಿಕ್ರಂನನ್ನು ಕೊಲೆಗೈದಿದ್ದಾನೆ. ಆರೋಪಿಯನ್ನು ಬಂಧಿಸಿದ್ದು, ಈತ ಅಪರಾಧ ಹಿನ್ನೆಲೆಯುಳ್ಳವನಾಗಿದ್ದಾನೆ ಎಂದು ಹೇಳಿದರು.