Advertisement
ಮಲ್ಲೇಶ್ವರದ ಬಿಜೆಪಿ ಕಚೇರಿಯಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವರ್ಗಾವಣೆ ಬೆದರಿಕೆ ಮೂಲಕ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯ ನೈತಿಕ ಸ್ಥೈರ್ಯವನ್ನೇ ಕೆಡಿಸಿರುವ ಈ ಸರ್ಕಾರದಿಂದಾಗಿ ಇಡೀ ಪೊಲೀಸ್ ಇಲಾಖೆ ಮಲಗಿ, ರೌಡಿಗಳು ನಗರವನ್ನು ಆಳುವಂತಾಗಿದೆ ಎಂದು ಆರೋಪಿಸಿದರು.
Related Articles
Advertisement
ತಮ್ಮ ಮಾತು ಕೇಳದ ಪೊಲೀಸ್ ಅಧಿಕಾರಿಗಳನ್ನು ಮೂರೇ ತಿಂಗಳಲ್ಲಿ ವರ್ಗಾವಣೆ ಮಾಡುತ್ತಾರೆ. ಇದರಿಂದಾಗಿ ಪೊಲೀಸರ ನೈತಿಕ ಸ್ಥೈರ್ಯ ಕುಸಿದು ಅವರು ಸರಿಯಾಗಿ ಕೆಲಸ ಮಾಡಲು ಸಾಧ್ಯವಾಗದೆ ಕಾನೂನು ಸುವ್ಯವಸ್ಥೆ ಹದಗೆಟ್ಟು ಬೆಂಗಳೂರು ಕ್ರೈಂ ಸಿಟಿಯಾಗಿದೆ ಎಂದು ಆರೋಪಿಸಿದರು.
ಪೊಲೀಸ್ ಇಲಾಖೆಯಲ್ಲಿ ಒಳ್ಳೆಯ ಅಧಿಕಾರಿಗಳು ಸಾಕಷ್ಟಿದ್ದಾರೆ. ಆದರೆ, ಅವರಿಗೆ ಕಾನೂನು ಸುವ್ಯವಸ್ಥೆ ಸರಿಪಡಿಸುವ ಕೆಲಸ ಮಾಡಲು ಬಿಡದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಗೃಹ ಸಚಿವರ ಸಲಹೆಗಾರರು ಸೇರಿ ರಾಜಕೀಯ ಕೆಲಸಗಳಿಗೆ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಪ್ರತಿಪಕ್ಷದವರನ್ನು ಬಗ್ಗುಬಡಿಯಲು ಬಳಸಿಕೊಳ್ಳುತ್ತಿದ್ದಾರೆ ಎಂದು ಕಿಡಿ ಕಾರಿದರು.
ಸುಳಿವೇನಾಯಿತು: ಡಾ.ಎಂ.ಎಂ.ಕಲಬುರ್ಗಿ ಹತ್ಯೆಯಾಗಿ ವರ್ಷಗಳು ಕಳೆದವು. ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯಾಗಿ ತಿಂಗಳುಗಳು ಕಳೆದವು. ಗೌರಿ ಲಂಕೇಶ್ ಹತ್ಯೆಯಾದ ಮಾರನೇ ದಿನವೇ ಗೃಹ ಸಚಿವರು ಪತ್ರಿಕಾಗೋಷ್ಠಿ ಕರೆದು ಆರೋಪಿಗಳ ಸುಳಿವು ಸಿಕ್ಕಿದೆ. ಶೀಘ್ರ ಬಂಧಿಸಲಾಗುವುದು ಎಂದು ಹೇಳಿದ್ದರು.
ನಂತರ ಅನೇಕ ಬಾರಿ ಇದೇ ಮಾತನ್ನು ಪುನರಾವರ್ತಿಸಿದ್ದರು. ಗೃಹ ಸಚಿವರಿಗೆ ಸಿಕ್ಕಿರುವ ಸುಳಿವೇನು? ಆರೋಪಿಗಳನ್ನು ಯಾವಾಗ ಬಂದಿಸುತ್ತೀರಿ ಎಂಬುದನ್ನು ಇನ್ನಾದರೂ ಅವರು ಬಹಿರಂಗಪಡಿಸಲಿ ಎಂದು ಶಾಸಕ ಅಶೋಕ್ ಒತ್ತಾಯಿಸಿದರು.
ಎಸಿಪಿ ಮನೆಯಲ್ಲಿ ಅವರ ಪತ್ನಿಯ ಸರ ಅಪಹರಣವಾಗುತ್ತಿದೆ. ಸಂಕ್ರಾಂತಿಯಂದು ಒಂದೇ ದಿನ ಐದು ಕಡೆ ಸರಗಳ್ಳತನ ನಡೆದಿದೆ. ಇದರಿಂದ ಹೆಣ್ಣುಮಕ್ಕಳು, ಮಹಿಳೆಯರು ಬೆಳಗ್ಗೆ ರಂಗೋಲಿ ಹಾಕಲು ಹೊರಗೆ ಬರಲು ಹೆದರುವಂತಾಗಿದೆ. ಆದ್ದರಿಂದ ಇನ್ನುಮುಂದೆ ಹೆಣ್ಣುಮಕ್ಕಳು ಬೆಳಗ್ಗೆ ರಂಗೋಲಿ ಹಾಕಲು ಅಥವಾ ಹೊಸ್ತಿಲು ಪೂಜೆ ಮಾಡಲು ಮನೆಯಿಂದ ಹೊರಗೆ ಬರುವ ಮುನ್ನ ಸಮೀಪದ ಪೊಲೀಸ್ ಠಾಣೆ ಅಥವಾ ಪೊಲೀಸ್ ಕಂಟ್ರೋಲ್‌ರೂಂಗೆ ಕರೆ ಮಾಡಿ ಮನೆಯಿಂದ ಹೊರಬರುತ್ತಿದ್ದೇನೆ ಎಂದು ಹೇಳಿ. ಇಲ್ಲದಿದ್ದರೆ ಕಷ್ಟ.-ಆರ್.ಅಶೋಕ್, ಮಾಜಿ ಉಪಮುಖ್ಯಮಂತ್ರಿ