Advertisement

ವಿಶ್ವಕಪ್‌ನಲ್ಲಿ ಪಾಕ್‌ ಜತೆಗೆ ಕ್ರಿಕೆಟ್‌ ಬೇಕಾ-ಬೇಡ್ವಾ?

12:30 AM Mar 23, 2019 | |

ವಿಶ್ವಕಪ್‌ ಏಕದಿನ ಕ್ರಿಕೆಟ್‌ಗೆ ದಿನಗಣನೆ ಆರಂಭವಾಗಿದೆ. ಬೆನ್ನಲ್ಲೇ ಉಗ್ರರನ್ನು ಸಲಹುವ ಪಾಪಿ ಪಾಕಿಸ್ತಾನದ ಜತೆಗೆ ವಿಶ್ವಕಪ್‌ನಲ್ಲಿ ಭಾರತ ಆಡಬಾರದು ಎನ್ನುವ ಕೂಗು ಕೇಳಿ ಬರುತ್ತಿದೆ. 

Advertisement

ಈ ಬಗ್ಗೆ ಸ್ವತಃ ಕ್ರಿಕೆಟ್‌ ವಲಯದಲ್ಲೇ ಪರ ವಿರೋಧದ ಹೇಳಿಕೆ ಕೇಳಿ ಬರುತ್ತಿವೆ. ಹಿರಿಯ ಕ್ರಿಕೆಟಿಗ ಸುನಿಲ್‌ ಗಾವಸ್ಕರ್‌, ಕ್ರಿಕೆಟ್‌ ದಿಗ್ಗಜ ಸಚಿನ್‌ ತೆಂಡುಲ್ಕರ್‌ ಸೇರಿದಂತೆ ಅನೇಕ ಹಾಲಿ ಮಾಜಿ ಕ್ರಿಕೆಟಿಗರು ಭಾರತ – ಪಾಕ್‌ ವಿಶ್ವಕಪ್‌ ಕ್ರಿಕೆಟ್‌ ಬಗೆಗೆ ಮಾತನಾಡಿದ್ದಾರೆ. ಕೆಲವರು ಕ್ರೀಡಾಂಗಣದಲ್ಲೇ ಪಾಕ್‌ಗೆ ತಕ್ಕ ಪಾಠ ಕಲಿಸಬೇಕು ಅನ್ನುವ ಕೆಚ್ಚೆದೆಯ ಮಾತುಗಳನ್ನಾಡಿದ್ದಾರೆ. ಮತ್ತೆ ಕೆಲವರು ನಮ್ಮ ಸೈನಿಕರ ರಕ್ತ ಹೀರಿದ ರಕ್ತಬಿಜಾಸುರರ ಜತೆಗೆ ಕ್ರಿಕೆಟ್‌ ಸಖ್ಯ ಬೇಡವೇ ಬೇಡ ಅನ್ನುತ್ತಿದ್ದಾರೆ. ವಿಶ್ವಕಪ್‌ನಲ್ಲಿ ಪಾಕ್‌ ತಂಡವನ್ನು ದೂರವಿಡುವುದೇ ನಮ್ಮ ಯೋಧರಿಗೆ ಸಲ್ಲಿಸುವ ನಿಜವಾದ ಗೌರವ ಅನ್ನುತ್ತಿದ್ದಾರೆ. ಈ ಬಗ್ಗೆ ಕ್ರಿಕೆಟಿಗರ ಅಭಿಪ್ರಾಯವೇನು, ಬಿಸಿಸಿಐ ನಿಲುವೇನು, ವಿವಿಧ ಕ್ರಿಕೆಟಿಗರ ಪರ-ವಿರೋಧದ ಹೇಳಿಕೆ ಇಲ್ಲಿದೆ. 

ಬಿಸಿಸಿಐ ಹೇಳಿದ್ದೇನು?
ಪುಲ್ವಾಮ ದುರಂತದಲ್ಲಿ ಭಾರತದ 40 ಯೋಧರು ಉಗ್ರರ ಕುಕೃತ್ಯಕ್ಕೆ ಬಲಿಯಾದರು. ಉಗ್ರರಿಗೆ ಬೆಂಬಲ ನೀಡುವ ಪಾಕ್‌ ವಿರುದ್ಧ ವಿಶ್ವದಾದ್ಯಂತ ಟೀಕೆ ವ್ಯಕ್ತವಾಯಿತು. ಇದೇ ವೇಳೆ ಪಾಕ್‌ ಜತೆಗಿನ ಎಲ್ಲ ವ್ಯವಹಾರಗಳನ್ನೂ ಭಾರತ ಸ್ಥಗಿತಗೊಳಿಸಿತು. ಭಾರತಕ್ಕೆ ವಿವಿಧ ಕ್ರೀಡೆಗಳಲ್ಲಿ ಪಾಲ್ಗೊಳ್ಳಲು ಆಗಮಿಸಬೇಕಿದ್ದ ಎಲ್ಲ ಪಾಕ್‌ ಆಟಗಾರರಿಗೆ ಭಾರತ ಸರ್ಕಾರ ವೀಸಾ ನಿರಾಕರಿಸಿತು. ವಿಶ್ವಕಪ್‌ ಕ್ರಿಕೆಟ್‌ ಕೂಟದಲ್ಲಿ ಪಾಕಿಸ್ತಾನ ಜತೆಗೆ ಕ್ರಿಕೆಟ್‌ ಆಡದಿರುವ ನಿರ್ಧಾರಕ್ಕೆ ಬಿಸಿಸಿಐ (ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ) ಚಿಂತಿಸಿತು. ಐಸಿಸಿಗೆ ಪತ್ರ ಬರೆದು ಪಾಕಿಸ್ತಾನದ ಹೆಸರನ್ನು ಎಲ್ಲೂ ಎತ್ತದೆ ಭಯೋತ್ಪಾದನೆಗೆ ಕುಮ್ಮಕ್ಕು ನೀಡುವ ರಾಷ್ಟ್ರಗಳನ್ನು ಮುಂಬರುವ ವಿಶ್ವಕಪ್‌ ಕೂಟದಿಂದಲೇ ಹೊರಗಿಡಿ ಎಂದು ಮನವಿ ಮಾಡಿತು. ಭಾರತದ ಮನವಿಯನ್ನು ಐಸಿಸಿಗೆ ಪುರಸ್ಕರಿಸುವುದು ಕಷ್ಟ. ಅದರಲ್ಲೂ ಪಾಕಿಸ್ತಾನದ ಹೆಸರನ್ನು ಬಿಸಿಸಿಐ ಎಲ್ಲಿಯೂ ಪ್ರಸ್ತಾಪಿಸಿಲ್ಲ. ಕೇವಲ ಭಯೋತ್ಪಾದನೆಗೆ ಕುಮ್ಮಕ್ಕು ನೀಡುವ ರಾಷ್ಟ್ರ ಅಂತ ಮಾತ್ರ ಹೇಳಿರುವುದರಿಂದ ಪಾಕ್‌ ಅನ್ನು ಇಡೀ ವಿಶ್ವಕಪ್‌ ಕೂಟದಿಂದಲೇ ಬಹಿಷ್ಕರಿಸುವುದು ಕಷ್ಟಸಾಧ್ಯ. 

ಬಿಸಿಸಿಐ ಮುಂದಿರುವ ದಾರಿ ಏನು?
ಭಾರತ ಮುಂದಿನ ವಿಶ್ವಕಪ್‌ ಲೀಗ್‌ ಹಂತದ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ಆಡದೇ ಇರಬಹುದು. ಇದರಿಂದ ಭಾರತ ಎರಡು ಅಮೂಲ್ಯ ಅಂಕವನ್ನು ಕಳೆದುಕೊಳ್ಳಬಹುದು. ಜತೆಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿಯಿಂದ ಶಿಸ್ತು ಕ್ರಮಕ್ಕೆ ಗುರಿಯಾಗಬೇಕಾದೀತು. ಇಲ್ಲವೆ ಪಂದ್ಯವನ್ನು ಆಡಿ ಪಾಕ್‌ ತಂಡವನ್ನು ಮತ್ತೆ ಸೋಲಿಸಿ ಸೇಡು ತೀರಿಸಿಕೊಳ್ಳಲೂ ಅವಕಾಶ ಇದೆ. ಆದರೆ ಪಾಕ್‌ ಜತೆಗಿನ ಪಂದ್ಯಕ್ಕೆ ಹಲವರ ವಿರೋಧ ಇದೆ. ಹೀಗಿದ್ದರೂ ಭಾರತ ಪಾಕ್‌ ವಿರುದ್ಧ ಪಂದ್ಯವಾಡಿದರೆ ಹಲವರ ಕೆಂಗಣ್ಣಿಗೆ ಗುರಿಯಾಗಬೇಕಾಗಿ ಬರಬಹುದು. 

ಆಟಗಾರರ ಅಭಿಪ್ರಾಯವೇನು?  

Advertisement

ಕೇಂದ್ರ ಸರ್ಕಾರ, ಬಿಸಿಸಿಐ ತೆಗೆದುಕೊಳ್ಳುವ ನಿರ್ಧಾರವನ್ನು ನಾವು ಗೌರವಿಸುತ್ತೇವೆ. ಸೈನಿಕರ ಸಾವಿನ ಬಗ್ಗೆ ನಮಗೆಲ್ಲ ಅಪಾರ ನೋವಿದೆ. ಘಟನೆ ನಡೆಯ‌ಬಾರದಿತ್ತು. ಆದರೆ ದುರಾದೃಷ್ಟಕರ ಸಂಗತಿ. ಹುತ್ಮಾತ್ಮ ಯೋಧರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುವೆ. 

ವಿರಾಟ್‌ ಕೊಹ್ಲಿ, ಭಾರತ ತಂಡದ ನಾಯಕ

ಭಾರತ ಪ್ರತೀ ಸಲವೂ ವಿಶ್ವಕಪ್‌ನಲ್ಲಿ ಪಾಕ್‌ ತಂಡದ ಸೊಕ್ಕಡಗಿಸಿದೆ. ಇದೀಗ ಮತ್ತೆ ಪಾಕಿಸ್ತಾನವನ್ನು ಸೋಲಿಸುವ ಅವಕಾಶ ನಮ್ಮ ಎದುರಿಗಿದೆ. ಅವರೊಂದಿಗೆ ಆಡದೆ ನಾವೇಕೆ ಅವರಿಗೆ ಎರಡು ಅಂಕವನ್ನು ಬಿಟ್ಟುಕೊಟ್ಟು ಸಹಾಯ ಮಾಡಬೇಕು. 

ಸಚಿನ್‌ ತೆಂಡುಲ್ಕರ್‌, ಮಾಜಿ ಕ್ರಿಕೆಟಿಗ

ಆಡುವುದು ಅಥವಾ ಆಡದಿರುವುದು ಎರಡೂ ಕೂಡ ನಮ್ಮ ಕೈಯಲ್ಲಿ ಇಲ್ಲ. ಅದೇನಿದ್ದರೂ ಸರ್ಕಾರ ಹಾಗೂ ಸಂಬಂಧಪಟ್ಟ ಅಧಿಕಾರಿಗಳದ್ದು. ರಾಷ್ಟ್ರದ ಹಿತಾಸಕ್ತಿಯಿಂದ ತೆಗೆದುಕೊಳ್ಳುವ ನಿರ್ಧಾರಕ್ಕೆ ನನ್ನ ಬೆಂಬಲವಿದೆ. 
ಕಪಿಲ್‌ದೇವ್‌, ಮಾಜಿ ಕ್ರಿಕೆಟಿಗ

ಪಾಕಿಸ್ತಾನಕ್ಕೆ ಬಿಟ್ಟಿ ಎರಡು ಅಂಕ ಬಿಟ್ಟುಕೊಡುವುದು ಬೇಡ. ಒಂದು ವೇಳೆ ಬಿಟ್ಟುಕೊಟ್ಟರೆ ಭಾರತ ಈ ಸಲ ವಿಶ್ವಕಪ್‌ನಲ್ಲಿ ತೊಂದರೆಗೂ ಸಿಲುಕಬಹುದು. ನಾವು ಗೆಲ್ಲಬೇಕು, ಪಾಕ್‌ ಮುಂದಿನ ಸುತ್ತಿಗೆ ಪ್ರವೇಶಿಸುವುದನ್ನು ತಡೆಯಬೇಕು ಎನ್ನುವುದು ನನ್ನ ಅನಿಸಿಕೆ. 
ಸುನಿಲ್‌ ಗಾವಸ್ಕರ್‌, ಮಾಜಿ ಕ್ರಿಕೆಟಿಗ

ಒಂದು ವೇಳೆ ಪಾಕ್‌ ವಿರುದ್ಧ ಕ್ರಿಕೆಟ್‌ ನಡೆದರೆ ನಾವು, ನೀವು ಎಲ್ಲರು ಆ ಪಂದ್ಯವನ್ನು ಬಹಿಷ್ಕರಿಸುವ. ಭಾರತಕ್ಕೆ ಮರಳಿ ಬರುವ. ನಮ್ಮ ಯೋಧರ ಪ್ರಾಣಕ್ಕಿಂತ ಪಾಕಿಸ್ತಾನದ ಜತೆಗಿನ ಕ್ರಿಕೆಟ್‌ ನಮಗೆ ಮುಖ್ಯವಲ್ಲ.
ಗೌತಮ್‌ ಗಂಭೀರ್‌, ಮಾಜಿ ಕ್ರಿಕೆಟಿಗ 

Advertisement

Udayavani is now on Telegram. Click here to join our channel and stay updated with the latest news.

Next