ಮುಂಬೈ: ಪಾಕಿಸ್ತಾನದ ಮಾಜಿ ನಾಯಕ ಇಂಝಮಾಮ್ ಉಲ್ ಹಕ್ (Inzamam ul Haq) ಅವರ ವಿರುದ್ದ ಟೀಕೆ ಮಾಡಿರುವ ಟೀಂ ಇಂಡಿಯಾ ಆಟಗಾರ ಮೊಹಮ್ಮದ್ ಶಮಿ (Mohammed Shami) ವಿರುದ್ದ ಪಾಕಿಸ್ತಾನದ ಮಾಜಿ ಆಟಗಾರ ಬಾಸಿತ್ ಅಲಿ (Basit Ali) ಕಿಡಿಕಾರಿದ್ದಾರೆ.
2024ರ ಟಿ20 ವಿಶ್ವಕಪ್ ವೇಳೆ ಭಾರತೀಯ ಬೌಲರ್ ಗಳ ವಿರುದ್ದ ಬಾಲ್ ಟ್ಯಾಂಪರಿಂಗ್ ಆರೋಪವನ್ನು ಇಂಝಮಾಮ್ ಉಲ್ ಹಕ್ ಮಾಡಿದ್ದರು. ಇತ್ತೀಚೆಗೆ ಶಮಿ ಇದಕ್ಕೆ ಪ್ರತಿಕ್ರಿಯೆ ನೀಡಿದ್ದು, ಕಾರ್ಟೂನ್ ಗಿರಿ ಎಂದಿದ್ದರು.
ಶಮಿ ಅವರ ಪದಗಳ ಆಯ್ಕೆಯನ್ನು ಟೀಕಿಸಿದ ಬಾಸಿತ್ ಅವರು, ಭಾರತದ ವೇಗಿ ತನ್ನ ಪದಗಳನ್ನು ಸರಿಯಾಗಿ ಆಯ್ಕೆ ಮಾಡಬೇಕಿತ್ತು ಎಂದು ಹೇಳಿದ್ದಾರೆ.
“ಇಂಜಿಮಾಮ್ ಭಾಯ್ ಅವರನ್ನು ಶಮಿ ಕಾರ್ಟೂನ್ ಎಂದು ಕರೆಯುವುದು ಸರಿಯಲ್ಲ. ಇಂಜಮಾಮ್ ಈ ದೇಶವನ್ನು ಮುನ್ನಡೆಸಿದ್ದಾರೆ. ನಾಯಕತ್ವ ವಹಿಸಿದ್ದಾರೆ. ಶಮಿ, ನಿಮ್ಮ ಪದಗಳ ಆಯ್ಕೆ ಚೆನ್ನಾಗಿಲ್ಲ, ನಿಮ್ಮ ಬೌಲಿಂಗ್ ಅನ್ನು ನಾವು ಪ್ರಶಂಸಿಸುತ್ತೇವೆ, ಆದರೆ ನೀವು ನಿಮ್ಮ ಪದಗಳನ್ನು ಉತ್ತಮವಾಗಿ ಆರಿಸಬೇಕು. ನೀವು ನಿಮ್ಮ ಮಾತುಗಳನ್ನು ಸರಿಯಾಗಿ ಆಯ್ಕೆ ಮಾಡಲಿಲ್ಲ. ಅದು ನನಗೆ ನೋವುಂಟು ಮಾಡಿದೆ” ಎಂದು ಅಲಿ ತಮ್ಮ ಯೂಟ್ಯೂಬ್ ಚಾನೆಲ್ ನಲ್ಲಿ ಹೇಳಿದ್ದಾರೆ.
“ಇಂಝಿ ಭಾಯ್ ತಪ್ಪು ಹೇಳಿದ್ದಾರೆ ಎಂದು ನಿಮಗೆ ಅನಿಸಿದರೆ ಸರಿಯಾಗಿ ಹೇಳಬಹುದಿತ್ತು. ಅವರೆನ್ನು ಕಾರ್ಟೂನ್ ಎಂದೆಲ್ಲಾ ಕರೆಯಬೇಡಿ. ಸ್ವಲ್ಪ ಮರ್ಯಾದೆ ಇರಲಿ. ಅವರು ಹಿರಿಯರು. ನೀವು ಹಿರಿಯ ಆಟಗಾರರಿಗೆ ಗೌರವ ನೀಡಬೇಕು. ನೀವು ಗೌರವ ನೀಡಿದಿದ್ದರೆ, ಕ್ರಿಕೆಟ್ ನಿಮ್ಮನ್ನು 365 ದಿನಗಳಲ್ಲಿ 300 ದಿನ ಅಳಿಸುತ್ತದೆ. ಕೇವಲ 65 ದಿನ ಮಾತ್ರ ನಿಮ್ಮನ್ನು ನಗಿಸುತ್ತದೆ. ದಯವಿಟ್ಟು ಇದನ್ನು ಮುಂದುವರಿಸಬೇಡಿ, ಇದು ನನ್ನ ವೈಯಕ್ತಿಕ ಮನವಿ” ಎಂದರು.
“ಸ್ವಲ್ಪ ಜಾಗರೂಕರಾಗಿರಿ, ನೀವು ಎಲ್ಲಿಯೂ ಏನನ್ನೂ ಹೇಳಲು ಸಾಧ್ಯವಿಲ್ಲ. ಏನೇ ಪ್ರಶ್ನೆ ಕೇಳಿದರೂ ಅಸಭ್ಯ ಉತ್ತರಗಳನ್ನು ಕೊಡುತ್ತಿದ್ದೀರಿ. ನಾನು ಸರಿಯಾದ ಪದವನ್ನು ಬಳಸುತ್ತಿದ್ದೇನೆ, ನೀವು ಅಸಭ್ಯ ಭಾಷೆ ಬಳಸಿದ್ದೀರಿ. ನಿಮ್ಮ ಹಿರಿಯರು ಇದನ್ನು ನಿಮಗೆ ಎಂದಿಗೂ ಕಲಿಸಲಿಲ್ಲ” ಎಂದು ಬಾಸಿತ್ ಹೇಳಿದರು.