Advertisement

ಇಂಗ್ಲೆಂಡ್‌ ಕ್ಲಬ್‌ ಕ್ರಿಕೆಟ್‌ನಲ್ಲೊಂದು ದಾಖಲೆ

06:00 AM Jul 25, 2018 | Team Udayavani |

ಬೆಕ್ಸ್‌ಲೀ (ಲಂಡನ್‌): ಇತ್ತೀಚಿಗೆ ಇಂಗ್ಲೆಂಡಿನ ಪುರುಷರ ಹಾಗೂ ವನಿತಾ ತಂಡಗಳೆರಡೂ ಏಕದಿನ ಕ್ರಿಕೆಟ್‌ನಲ್ಲಿ ಬೃಹತ್‌ ಮೊತ್ತ ಪೇರಿಸಿ ಸುದ್ದಿಯಾದದ್ದು ತಿಳಿದೇ ಇದೆ. ಇದೇ ವೇಳೆ ಇಂಗ್ಲೆಂಡಿನ ಕ್ಲಬ್‌ ತಂಡವೊಂದು ದಾಖಲೆ ಕನಿಷ್ಠ ಮೊತ್ತಕ್ಕೆ ಆಲೌಟ್‌ ಆಗಿ ಅಚ್ಚರಿ ಮೂಡಿಸಿದೆ.

Advertisement

ಲಂಡನ್ನಿನ ಬೆಕ್ಸ್‌ಲೀಯಲ್ಲಿ ಶನಿವಾರ ಸಂಭವಿಸಿದ ಈ ಸ್ವಾರಸ್ಯಕರ ಕ್ರಿಕೆಟ್‌ ವಿದ್ಯಮಾನ ವಿಳಂಬವಾಗಿ ಸುದ್ದಿಯಾಗಿದೆ. “ಕೆಂಟ್‌ ಕ್ರಿಕೆಟ್‌ ಲೀಗ್‌ ಪ್ರೀಮಿಯರ್‌ ಫ‌ಸ್ಟ್‌ ಮ್ಯಾಚ್‌’ ಏಕದಿನ ಕೂಟದಲ್ಲಿ ಬೆಕೆನ್‌ಹ್ಯಾಮ್‌ ಕ್ರಿಕೆಟ್‌ ಕ್ಲಬ್‌ ತಂಡ ಸ್ಥಳೀಯ ಬೆಕ್ಸ್‌ಲೀ ಕ್ರಿಕೆಟ್‌ ಕ್ಲಬ್‌ ತಂಡದ ವಿರುದ್ಧ ಕೇವಲ 18 ರನ್ನಿಗೆ ಆಲೌಟ್‌ ಆಗಿದೆ. ಇದು 152 ವರ್ಷಗಳ ಕೆಂಟ್‌ ಕ್ಲಬ್‌ ಕ್ರಿಕೆಟ್‌ ಇತಿಹಾಸದಲ್ಲಿ ದಾಖಲಾದ ಕನಿಷ್ಠ ಮೊತ್ತ.

61 ನಿಮಿಷಗಳಲ್ಲಿ ಮುಗಿದ ಪಂದ್ಯ
ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ನಡೆಸಿದ ಬೆಕೆನ್‌ಹ್ಯಾಮ್‌ ತಂಡ 11.2 ಓವರ್‌ಗಳಲ್ಲಿ ಕೇವಲ 18 ರನ್ನಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತು. ಈ ಇನ್ನಿಂಗ್ಸ್‌ 49 ನಿಮಿಷಗಳಲ್ಲಿ ಮುಗಿದು ಹೋಯಿತು. ಜವಾಬಿತ್ತ ಬೆಕ್ಸ್‌ಲೀ ತಂಡ ಕೇವಲ 3.3 ಓವರ್‌ಗಳಲ್ಲಿ ವಿಕೆಟ್‌ ನಷ್ಟವಿಲ್ಲದೆ 22 ರನ್‌ ಮಾಡಿ ಗುರಿ ಮುಟ್ಟಿತು. ಇದರೊಂದಿಗೆ 100 ಓವರ್‌ ಕಾಣಬೇಕಾದ ಪಂದ್ಯವೊಂದು 14.5 ಓವರ್‌ಗಳಲ್ಲಿ ಮುಗಿದು ಹೋಯಿತು. ಪಂದ್ಯ ನಡೆದ ಒಟ್ಟು ಅವಧಿ 61 ನಿಮಿಷ ಮಾತ್ರ.

ಹಿಂದಿನ ದಾಖಲೆ 21 ರನ್‌
ಬೆಕೆನ್‌ಹ್ಯಾಮ್‌ ಸರದಿಯಲ್ಲಿ ಯಾರೂ ನಾಲ್ಕಕ್ಕಿಂತ ಹೆಚ್ಚು ರನ್‌ ಮಾಡಲಿಲ್ಲ. 5 ಮಂದಿ ಖಾತೆಯನ್ನೇ ತೆರೆಯಲಿಲ್ಲ. ಇದರಲ್ಲಿ ಆರಂಭಕಾರ ಅಲೆಕ್ಸ್‌ ಬ್ಲೇಕ್‌ ಕೂಡ ಸೇರಿದ್ದಾರೆ. ಬ್ಲೇಕ್‌ ಪಂದ್ಯದ ಮೊದಲ ಎಸೆತದಲ್ಲೇ ಔಟಾಗಿದ್ದರು. ವೇಗಿ ಕಾಲಂ ಮೆಕ್‌ಲಿಯೋಡ್‌ ಎದುರಾಳಿ ಪತನಕ್ಕೆ ಮುಹೂರ್ತವಿರಿಸಿದ್ದರು. ಮೆಕ್‌ಲಿಯೋಡ್‌ ಬೌಲಿಂಗ್‌ ಫಿಗರ್‌ ಹೀಗಿದೆ: 6-2-5-6. ಗಯಾನಾ ಮೂಲದ ಜಾಸನ್‌ ಬೆನ್‌ ಉಳಿದ 4 ವಿಕೆಟ್‌ಗಳನ್ನು 12 ರನ್‌ ವೆಚ್ಚದಲ್ಲಿ ಉರುಳಿಸಿದರು.

ಕೆಂಟ್‌ ಇತಿಹಾಸದಲ್ಲೇ ಕನಿಷ್ಠ
ಇದು ಕೆಂಟ್‌ ಕ್ರಿಕೆಟ್‌ ಲೀಗ್‌ ಇತಿಹಾಸದ ಕನಿಷ್ಠ ಮೊತ್ತವಾಗಿದೆ. 2010ರಲ್ಲಿ ಬ್ಲ್ಯಾಕ್‌ಹೀತ್‌ ಕ್ರಿಕೆಟ್‌ ಕ್ಲಬ್‌ ವಿರುದ್ಧ ಹಾರ್ವೆಲ್‌ ಕ್ರಿಕೆಟ್‌ ಕ್ಲಬ್‌ 21 ರನ್ನಿಗೆ ಆಲೌಟ್‌ ಆದದ್ದು ಈವರೆಗಿನ ಸಣ್ಣ ಸ್ಕೋರ್‌ ಆಗಿತ್ತು. ಅಂದು 289 ರನ್‌ ಗುರಿಯನ್ನು ಬೆನ್ನಟ್ಟಿಕೊಂಡು ಹೋಗಿದ್ದ ಹಾರ್ವೆಲ್‌ ಕ್ಲಬ್‌ ತಂಡ, ರುಯೆಲ್‌ ಬ್ರಾತ್‌ವೇಟ್‌ ದಾಳಿಗೆ ತತ್ತರಿಸಿತ್ತು. ಬ್ರಾತ್‌ವೇಟ್‌ 8 ವಿಕೆಟ್‌ ಉಡಾಯಿಸಿದ್ದರು. ಚೇಸಿಂಗ್‌ ವೇಳೆ ಬೆಕ್ಸ್‌ಲೀ ತಂಡದ ಆರಂಭಿಕರಾದ ಐಡನ್‌ ಗ್ರಿಗ್ಸ್‌ 12 ಮತ್ತು ಕ್ರಿಸ್ಟೋಫ‌ರ್‌ ಲಾಸ್‌ 4 ರನ್‌ ಮಾಡಿದರು. 6 ಎಕ್ಸ್‌ಟ್ರಾ ರನ್‌ಗಳಾಗಿದ್ದವು.

Advertisement
Advertisement

Udayavani is now on Telegram. Click here to join our channel and stay updated with the latest news.

Next