ಬೆಂಗಳೂರು: ನಗರದ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬುಧವಾರ ಭಾರತ-ಆಸ್ಟ್ರೇಲಿಯ ನಡುವೆ ಟಿ-20 ಕ್ರಿಕೆಟ್ ಪಂದ್ಯ ನಡೆಯಲಿದ್ದು, ಪಂದ್ಯ ವೀಕ್ಷಣೆಗೆ ಬರುವವರ ಅನುಕೂಲಕ್ಕಾಗಿ “ನಮ್ಮ ಮೆಟ್ರೋ’ ಸೇವೆಯನ್ನು ಅರ್ಧಗಂಟೆ ವಿಸ್ತರಿಸಲಾಗಿದೆ.
ಅಂದು ಮೆಟ್ರೋ ಕೊನೆಯ ವಾಣಿಜ್ಯ ಸಂಚಾರ ಸೇವೆ (ಬೈಯಪ್ಪನಹಳ್ಳಿ, ಮೈಸೂರು ರಸ್ತೆ, ಯಲಚೇನಹಳ್ಳಿ ಮತ್ತು ನಾಗಸಂದ್ರದಿಂದ) ರಾತ್ರಿ 11.30ಕ್ಕೆ ಹೊರಡಲಿದೆ. ನಾಡಪ್ರಭು ಕೆಂಪೇಗೌಡ ನಿಲ್ದಾಣದಿಂದ ಎಲ್ಲ ನಾಲ್ಕೂ ದಿಕ್ಕುಗಳಿಗೂ 11.55ಕ್ಕೆ ತೆರಳಲಿದೆ.
ಪಂದ್ಯ ಮುಗಿದ ನಂತರ ಪ್ರಯಾಣಿಕರು ತ್ವರಿತವಾಗಿ ಪ್ರಯಾಣಿಸಲು ಅನುಕೂಲ ಆಗುವಂತೆ ರಿಟರ್ನ್ಜರ್ನಿ ಪೇಪರ್ ಟಿಕೆಟ್ ಪರಿಚಯಿಸಲಾಗಿದೆ. ಇದನ್ನು ಪ್ರಯಾಣಿಕರು ಮಧ್ಯಾಹ್ನ 3 ಗಂಟೆಯಿಂದ ಸಂಜೆ 7ರವರೆಗೆ ಯಾವುದೇ ಮೆಟ್ರೋ ನಿಲ್ದಾಣಗಳಿಂದ ಖರೀದಿಸಬಹುದು. ದಿನದ ಪಂದ್ಯಾವಳಿಯ ನಂತರ ಕೊನೆಯ ಮೆಟ್ರೋ ರೈಲು ಸೇವೆವರೆಗೆ ಮಾತ್ರ ಈ ಟಿಕೆಟ್ ಅನ್ವಯ ಆಗಲಿದೆ.
ಪಂದ್ಯದ ದಿನದಂದು ಕಬ್ಬನ್ ಪಾರ್ಕ್ ಮೆಟ್ರೋ ರೈಲು ನಿಲ್ದಾಣದಿಂದ ಯಾವುದೇ ಮೆಟ್ರೋ ನಿಲ್ದಾಣಗಳಿಗೆ ರಾತ್ರಿ 10 ಗಂಟೆ ನಂತರ ಪ್ರಯಾಣ ದರ 50 ರೂ. ಇರಲಿದೆ. ಪೇಪರ್ ಟಿಕೆಟ್ ಖರೀದಿಸಿ ಪ್ರಯಾಣಿಸಬಹುದು. ಕಬ್ಬನ್ ಪಾರ್ಕ್‌ನಿಂದ ಪ್ರಯಾಣಿಸುವಾಗ ಪೇಪರ್ ಟಿಕೆಟ್ ಮಾತ್ರ ಉಪಯೋಗಿಸಬೇಕು.
ಅದೇ ರೀತಿ, ಯಾವುದೇ ಮೆಟ್ರೋ ನಿಲ್ದಾಣದಿಂದ ಕಬ್ಬನ್ ಪಾರ್ಕ್‌ಗೆ ತೆರಳುವವರು ಸಾಮಾನ್ಯ ದರದಲ್ಲಿ ಸ್ಮಾರ್ಟ್‌ಕಾರ್ಡ್ ಮತ್ತು ಟೋಕನ್‌ಗಳನ್ನು ಉಪಯೋಗಿಸಿಕೊಂಡು ಪ್ರಯಾಣಿಸಬಹುದು. ಸ್ಮಾರ್ಟ್‌ಕಾರ್ಡ್ ಹೊಂದಿರುವ ಪ್ರಯಾಣಿಕರಿಗೆ ಎಂದಿನಂತೆ ರಿಯಾಯ್ತಿಗಳು ಇರಲಿವೆ ಎಂದು ಪ್ರಕಟಣೆ ತಿಳಿಸಿದೆ.