Advertisement

ಡೆಲ್ಲಿ ವಿರುದ್ಧ ಸೇಡಿಗೆ ಕಾದಿದೆ ಪಂಜಾಬ್‌ ಕಿಂಗ್ಸ್‌

12:31 AM May 02, 2021 | Team Udayavani |

ಅಹ್ಮದಾಬಾದ್‌: ಶುಕ್ರವಾರದ ಸೆಣಸಾಟದಲ್ಲಿ ಬಲಿಷ್ಠ ಆರ್‌ಸಿಬಿಯನ್ನು ಉರುಳಿಸಿ “ರಾಜ’ನೆನಿಸಿಕೊಂಡ ಪಂಜಾಬ್‌ ಕಿಂಗ್ಸ್‌ ಈಗ ಡೆಲ್ಲಿಯನ್ನು ಕೆಡವಲು ಸ್ಕೆಚ್‌ ಹಾಕುತ್ತಿದೆ. ರವಿವಾರದ ದ್ವಿತೀಯ ಪಂದ್ಯದಲ್ಲಿ ಕೆ.ಎಲ್‌. ರಾಹುಲ್‌-ರಿಷಭ್‌ ಪಂತ್‌ ಪಡೆಗಳು ಮುಖಾಮುಖೀಯಾಗುತ್ತಿವೆ. ಇದರೊಂದಿಗೆ 14ನೇ ಐಪಿಎಲ್‌ ಕೂಟದ ದ್ವಿತೀಯ ಸುತ್ತಿನ ಹೋರಾಟವೂ ಮೊದಲ್ಗೊಳ್ಳಲಿದೆ.

Advertisement

ಪಂಜಾಬ್‌ ಪಾಲಿಗೆ ಇದು ಸೇಡಿನ ಪಂದ್ಯವೂ ಹೌದು. ಚೆನ್ನೈಯಲ್ಲಿ ನಡೆದ ಮೊದಲ ಸುತ್ತಿನ ಬ್ಯಾಟಿಂಗ್‌ ಮೇಲಾಟದಲ್ಲಿ ಡೆಲ್ಲಿ 6 ವಿಕೆಟ್‌ಗಳಿಂದ ರಾಹುಲ್‌ ಪಡೆಯನ್ನು ಮಗುಚಿತ್ತು. ಪಂಜಾಬ್‌ 4ಕ್ಕೆ 195 ರನ್‌ ಪೇರಿಸಿದರೆ, ಡೆಲ್ಲಿ 18.2 ಓವರ್‌ಗಳಲ್ಲಿ ನಾಲ್ಕೇ ವಿಕೆಟ್‌ ನಷ್ಟದಲ್ಲಿ 198 ರನ್‌ ಬಾರಿಸಿ ಗೆದ್ದು ಬಂದಿತ್ತು.

ಶಿಖರ್‌ ಧವನ್‌ 92 ರನ್‌ ಬಾರಿಸಿ ಡೆಲ್ಲಿಯ ಯಶಸ್ವಿ ಚೇಸಿಂಗ್‌ನಲ್ಲಿ  ಮಹತ್ವದ ಪಾತ್ರ ವಹಿಸಿದ್ದರು.  ಪಂಜಾಬ್‌ ಆರಂಭಿಕರಾದ ರಾಹುಲ್‌ (61)-ಅಗರ್ವಾಲ್‌ (69) 122 ರನ್‌ ಜತೆಯಾಟದಲ್ಲಿ ಭಾಗಿಯಾಗಿದ್ದರು. ಆದರೆ ಅಹ್ಮದಾಬಾದ್‌ ಟ್ರ್ಯಾಕ್‌ನಲ್ಲಿ ಇಷ್ಟೊಂದು ದೊಡ್ಡ ಮೊತ್ತ ಸಂಗ್ರಹವಾಗುವುದು ಅನುಮಾನ. 170 ರನ್‌ ಇಲ್ಲಿನ ಎವರೇಜ್‌ ಸ್ಕೋರ್‌ ಆಗಿದೆ. ಚೇಸಿಂಗ್‌ ತುಸು ಕಷ್ಟ.

ಡೆಲ್ಲಿ ಹೆಚ್ಚು ಬಲಿಷ್ಠ

ಮೇಲ್ನೋಟಕ್ಕೆ ಡೆಲ್ಲಿಯೇ ಹೆಚ್ಚು ಬಲಿಷ್ಠವಾಗಿ ಗೋಚರಿಸುತ್ತಿದೆ. ಧವನ್‌-ಶಾ ಅಬ್ಬರಿಸತೊಡಗಿದರೆ ಡೆಲ್ಲಿಯ ಅರ್ಧ ಕೆಲಸ ಮುಗಿದಂತೆ. ಇವರಿಬ್ಬರು ಈಗಾಗಲೇ 580 ರನ್‌ ಪೇರಿಸಿದ್ದಾರೆ. ಈ ಜೋಡಿಯನ್ನು ಬೇಗನೇ ಬೇರ್ಪಡಿಸಿದರಷ್ಟೇ ಪಂಜಾಬ್‌ಗ ಲಾಭ. ಆಗ ಸ್ಮಿತ್‌, ಪಂತ್‌, ಸ್ಟೋಯಿನಿಸ್‌ ಮೇಲೂ ಒತ್ತಡ ಹೇರಬಹುದಾಗಿದೆ.

Advertisement

ಅಶ್ವಿ‌ನ್‌ ಹೊರಬಿದ್ದರೂ ಡೆಲ್ಲಿ ಸ್ಪಿನ್‌ ವಿಭಾಗವೇನೂ ದುರ್ಬಲಗೊಂಡಿಲ್ಲ. ಅಕ್ಷರ್‌ ಪಟೇಲ್‌, ಆಫ್ಸ್ಪಿನ್ನರ್‌ ಲಲಿತ್‌ ಯಾದವ್‌ ಸಿಕ್ಕಿದ ಅವಕಾಶವನ್ನು ಸಮರ್ಥವಾಗಿ ಬಳಸಿಕೊಳ್ಳುತ್ತಿದ್ದಾರೆ. ಅನುಭವಿ ಸ್ಪಿನ್ನರ್‌ ಅಮಿತ್‌ ಮಿಶ್ರಾ ತಂಡಕ್ಕೆ ಮರಳುವ ಎಲ್ಲ ಸಾಧ್ಯತೆ ಇದೆ. ಆಗ ಯಾದವ್‌ ಅವರೇ ಜಾಗ ಬಿಡಬೇಕಾದ ಸಾಧ್ಯತೆ ಹೆಚ್ಚು.

ರಾಹುಲ್‌-ಗೇಲ್‌ ನಿರ್ಣಾಯಕ

ಪಂಜಾಬ್‌ ಆರ್‌ಸಿಬಿಯನ್ನು ಕೆಡವಿತೇನೋ ನಿಜ, ಆದರೆ ಬ್ಯಾಟಿಂಗ್‌ ವಿಭಾಗವೇನೂ ಸಶಕ್ತವಲ್ಲ. ಸಿಡಿದದ್ದು ರಾಹುಲ್‌ ಮತ್ತು ಗೇಲ್‌ ಮಾತ್ರ. ಡೆಲ್ಲಿ ಬೌಲರ್ ಇವರಿಬ್ಬರನ್ನು ಟಾರ್ಗೆಟ್‌ ಮಾಡುವುದರಲ್ಲಿ ಅನುಮಾನವಿಲ್ಲ. ಪೂರಣ್‌, ಹೂಡಾ, ಶಾರೂಖ್‌ ಖಾನ್‌ ಮೇಲೆ ನಂಬಿಕೆ ಇಡುವುದು ಕಷ್ಟ. ಕೀಪರ್‌ ಕಂ ಓಪನರ್‌ ಆಗಿರುವ ಪ್ರಭ್‌ಸಿಮ್ರಾನ್‌ ನಿರೀಕ್ಷಿತ ಯಶಸ್ಸು ಸಾಧಿಸಿಲ್ಲ. ಹೀಗಾಗಿ ಅಗರ್ವಾಲ್‌ ಮರಳಿ ಕಣಕ್ಕಿಳಿಯುವ ಸಾಧ್ಯತೆ ಇದೆ.

ಡೆಲ್ಲಿಯಂತೆ ಪಂಜಾಬ್‌ ಸ್ಪಿನ್‌ ವಿಭಾಗ ಬಲಿಷ್ಠ. ರವಿ ಬಿಷ್ಣೋಯಿ, ಮೊದಲ ಐಪಿಎಲ್‌ ಪಂದ್ಯದಲ್ಲೇ ಮಿಂಚಿದ ಹರ್‌ಪ್ರೀತ್‌ ಬ್ರಾರ್‌ ಮತ್ತೆ ಮ್ಯಾಜಿಕ್‌ ಮಾಡಿದರೆ ಹೋರಾಟ ತೀವ್ರಗೊಳ್ಳಲಿದೆ.

Advertisement

Udayavani is now on Telegram. Click here to join our channel and stay updated with the latest news.

Next