Advertisement
ಟೂರ್ನಿಯ ಎಲ್ಲ ಪಂದ್ಯಗಳು ಬೆಂಗಳೂರಿನ “ಎಂ. ಚಿನ್ನಸ್ವಾಮಿ ಸ್ಟೇಡಿಯಂ’ನಲ್ಲಿ ನಡೆಯಲಿವೆ. ಒಟ್ಟು 6 ತಂಡಗಳು ಟ್ರೋಫಿಗಾಗಿ ಸೆಣಸಾಡಲಿವೆ. ಇವುಗಳೆಂದರೆ ಬೆಂಗಳೂರು ಬ್ಲಾಸ್ಟರ್, ಹುಬ್ಬಳ್ಳಿ ಟೈಗರ್, ಗುಲ್ಬರ್ಗ ಮಿಸ್ಟಿಕ್ಸ್, ಮೈಸೂರು ವಾರಿಯರ್, ಮಂಗಳೂರು ಡ್ರ್ಯಾಗನ್ಸ್, ಶಿವಮೊಗ್ಗ ಲಯನ್ಸ್. ಲೀಗ್, ಸೆಮಿಫೈನಲ್ ಮತ್ತು ಫೈನಲ್ ಸೇರಿ ಒಟ್ಟು 33 ಪಂದ್ಯ ಗಳು ರಂಜಿಸಲಿವೆ. ಎರಡು ಪಂದ್ಯ ಗಳಿರುವ ದಿನ ಅಪರಾಹ್ನ 3 ಗಂಟೆಗೆ ಮತ್ತು ರಾತ್ರಿ 7 ಗಂಟೆಗೆ ಆರಂಭಗೊಳ್ಳಲಿವೆ.
ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಶನ್ (ಕೆಎಸ್‌ಸಿಎ) ಮುಂದಾಳತ್ವದಲ್ಲಿ ನಡೆಯುತ್ತಿರುವ ಮಹಾರಾಜ ಟ್ರೋಫಿ 3ನೇ ಆವೃತ್ತಿ ಇದು. 2022ರಲ್ಲಿ ಮೊದಲ ಆವೃತ್ತಿ ನಡೆದಾಗ ಟೂರ್ನಿಗೆ ಕರ್ನಾಟಕ ಪ್ರೀಮಿಯರ್ ಲೀಗ್ (ಕೆಪಿ ಎಲ್) ಎಂದು ಕರೆಯಲಾಗಿತ್ತು. ಆದರೆ ಬಳಿಕ, ಮೈಸೂರು ಮಹಾರಾಜರಾಗಿದ್ದ ಜಯಚಾಮರಾಜ ಒಡೆಯರ್ ಸ್ಮರಣಾರ್ಥ, “ಮಹಾರಾಜ ಟ್ರೊಫಿ’ ಎಂದು ಬದಲಾಯಿಸಲಾಯಿತು. ಗುಲ್ಬರ್ಗ, ಹುಬ್ಬಳ್ಳಿ ಚಾಂಪಿಯನ್ಸ್
ಮಹಾರಾಜ ಟ್ರೋಫಿ 2022ರ ಚೊಚ್ಚಲ ಆವೃತ್ತಿಯಲ್ಲಿ ಗುಲ್ಬರ್ಗ ಮಿಸ್ಟಿಕ್ಸ್ ತಂಡ ಚಾಂಪಿಯನ್ಸ್ ಪಟ್ಟ ಅಲಂಕರಿಸಿತ್ತು. ಕಳೆದ ವರ್ಷ ಹುಬ್ಬಳ್ಳಿ ಟೈಗರ್ ತಂಡ ಪ್ರಶಸ್ತಿ ಗೆದ್ದಿತ್ತು. ಮನೀಶ್ ಪಾಂಡೆ, ವೈಶಾಕ್ ವಿಜಯ್ ಕುಮಾರ್, ಕರುಣ್ ನಾಯರ್, ದೇವದತ್ ಪಡಿಕ್ಕಲ್ ಮೊದಲಾದ ತಾರಾ ಆಟಗಾರರು ಈ ಬಾರಿಯ ಪಂದ್ಯಾವಳಿಯಲ್ಲೂ ಕಣಕ್ಕಿಳಿಯುತ್ತಿರುವುದರಿಂದ ಟೂರ್ನಿ ಕುತೂಹಲ ಮೂಡಿಸಿದೆ.
Related Articles
ಈ ಆವೃತ್ತಿಗಾಗಿ ಕಳೆದ ಜು. 25ರಂದು ಬೆಂಗಳೂರಿನಲ್ಲಿ ನಡೆದ ಆಟಗಾರರ ಹರಾಜಿನಲ್ಲಿ ವಿಕೆಟ್ ಕೀಪರ್ ಕಮ್ ಬ್ಯಾಟರ್ ಎಲ್.ಆರ್. ಚೇತನ್ ಅತೀ ದುಬಾರಿ ಆಟಗಾರರಾಗಿ ಹೊರಹೊಮ್ಮಿದ್ದರು. ಅವರು 8.6 ಲಕ್ಷ ರೂ.ಗೆ ಬೆಂಗಳೂರು ಪಾಲಾಗಿದ್ದರು. ಉಳಿದಂತೆ ಶ್ರೇಯಸ್ ಗೋಪಾಲ್ (7.6 ಲಕ್ಷ ರೂ., ಮಂಗಳೂರು), ಕೃಷ್ಣಪ್ಪ ಗೌತಮ್ (7.4 ಲಕ್ಷ, ಮೈಸೂರು), ಲವನೀತ್ ಸಿಸೋಡಿಯಾ (7.2 ಲಕ್ಷ, ಗುಲ್ಬರ್ಗ), ಮೊಹಮ್ಮದ್ ತಾಹ (6.6 ಲಕ್ಷ, ಹುಬ್ಬಳ್ಳಿ) ದುಬಾರಿ 5 ಆಟಗಾರರಲ್ಲಿ ಕಾಣಿಸಿಕೊಂಡಿದ್ದರು.
Advertisement
ಇಂದಿನ ಪಂದ್ಯ1. ಬೆಂಗಳೂರು-ಗುಲ್ಬರ್ಗ
ಆರಂಭ: ಅ. 3.00
2. ಶಿವಮೊಗ್ಗ-ಮೈಸೂರು
ಆರಂಭ: ರಾತ್ರಿ 7.00
ಪ್ರಸಾರ: ಸ್ಟಾರ್ ನ್ಪೋರ್ಟ್ಸ್ 2,
ಸ್ಟಾರ್ ನ್ಪೋರ್ಟ್ಸ್ ಕನ್ನಡ