ಮೈಸೂರು: ರಂಗಭೂಮಿ ಮನುಷ್ಯನನ್ನು ಪ್ರತಿಕ್ಷಣ ಎಚ್ಚರಗೊಳಿಸುವ ಜೊತೆಗೆ ವ್ಯಕ್ತಿಯನ್ನು ಸೃಜನಶೀಲನನ್ನಾಗಿ ರೂಪಿಸುತ್ತದೆ ಎಂದು ರಂಗ ನಿರ್ದೇಶಕ ಮಂಡ್ಯ ರಮೇಶ್ ಹೇಳಿದರು. ನಗರದ ವಿಜಯ ವಿಠಲ ಕಾಲೇಜಿನ ಆವರಣದಲ್ಲಿ ಸಂಚಲನ ಆಯೋಜಿಸಿರುವ “ಸಂಚಲನ ಯುವರಂಗ ತರಬೇತಿ ಶಿಬಿರ’ವನ್ನು ಉದ್ಘಾಟಿಸಿ ಮಾತನಾಡಿದರು.
ರಂಗಭೂಮಿ ಪ್ರೀತಿಸುವೆ: ರಂಗಭೂಮಿ ಪ್ರತಿಕ್ಷಣ ಎಚ್ಚರಗೊಳಿಸುತ್ತದೆ. ಅದಕ್ಕಾಗಿ ನಾನು ರಂಗಭೂಮಿಯನ್ನು ಪ್ರೀತಿಸುತ್ತೇನೆ. ಸನ್ಮಾನ ಸಿಗಬೇಕಾದರೆ ಅವಮಾನ ಆಗಲೇಬೇಕು, ಅವಮಾನವೇ ಮುಂದಿನ ಸನ್ಮಾನಕ್ಕೆ ಮೊದಲ ಮೆಟ್ಟಿಲಾಗಿದೆ ಎಂದು ಹೇಳಿದರು.
ಸಂಭ್ರಮವಿದ್ದಂತೆ: ಚಲನಚಿತ್ರ ಸಂಗೀತ ನಿರ್ದೇಶಕ ಪೂರ್ಣಚಂದ್ರ ತೇಜಸ್ವಿ ಮಾತನಾಡಿ, ರಂಗಭೂಮಿ ಬದುಕನ್ನು ಕಟ್ಟಿಕೊಡುತ್ತದೆ. ಇದೊಂದು ಜ್ಞಾನದ ತಾಣವೂ ಆಗಿದೆ. ರಂಗಭೂಮಿಯ ಶಿಬಿರಗಳು ಒಂದು ಸಂಭ್ರಮವಿದ್ದಂತೆ ಎಂದು ಹೇಳಿದರು.
ಸಂಸ್ಕೃತಿಯನ್ನು ಕಲಿಸುತ್ತೆ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಚ್.ಚನ್ನಪ್ಪ ಮಾತನಾಡಿ, ರಂಗಭೂಮಿ ಸೆಳೆತ ಮನುಷ್ಯನಿಗೆ ಒಂದು ಹೊಸ ಅಲೆಯನ್ನು ರೂಪಿಸುತ್ತದೆ. ರಂಗಭೂಮಿ ಕಲೆ, ಸಾಹಿತ್ಯ, ಸಂಗೀತ, ಸಂಸ್ಕೃತಿಯನ್ನು ಕಲಿಸುತ್ತದೆ ಎಂದು ಹೇಳಿದರು.
ಅಪರ್ಯಾಪ್ತ ರಂಗತಂಡದಿಂದ ರಂಗಗೀತೆಯನ್ನು ನೆರವೇರಿಸಿಕೊಟ್ಟರು. ವಿಜಯ ವಿಠಲ ವಿದ್ಯಾಸಂಸ್ಥೆ ಪ್ರಾಂಶುಪಾಲ ಎಚ್.ಸತ್ಯಪ್ರಸಾದ್, ಸಂಚಲನದ ಅಧ್ಯಕ್ಷ ದೀಪಕ್ ಇದ್ದರು.