ಬಂಗಾರಪೇಟೆ: ತಾಲೂಕಿನ ಚಿನ್ನಕೋಟೆ, ಆಲಂ ಬಾಡಿ ಜ್ಯೋತೇನಹಳ್ಳಿ ಗ್ರಾಪಂಗಳಲ್ಲಿ ಪಿಡಿಒಗಳು ಹಾಗೂ ಪುರಸಭೆ ವ್ಯಾಪ್ತಿಯಲ್ಲಿ ಅಧಿಕಾರಿಗಳು ಸೂಕ್ತ ದಾಖಲೆಗಳಿಲ್ಲದೇ ಅಕ್ರಮವಾಗಿ ಇ-ಖಾತೆ ಗಳನ್ನು ಮಾಡುವುದರ ಮೂಲಕ ಲಕ್ಷಾಂತರ ರೂ.ಗಳ ಭ್ರಷ್ಟಾಚಾರ ಮಾಡುತ್ತಿದ್ದಾರೆ ಎಂದು ಕರ್ನಾ ಟಕ ರಿಪಬ್ಲಿಕ್ ಸೇನೆಯ ಜಿಲ್ಲಾಧ್ಯಕ್ಷ ಚಿಕ್ಕನಾರಾಯಣ ಆರೋಪ ಮಾಡಿದರು.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ತಾಲೂಕಿನ ಚಿನ್ನಕೋಟೆ ಗ್ರಾಪಂನಲ್ಲಿ ಪಿಡಿಒ ಇ-ಸ್ವತ್ತು ಖಾತೆ ಮಾಡಲು ಜಿಲ್ಲಾಧಿಕಾರಿಗಳಿಂದ ಭೂ ಪರಿವರ್ತನೆ ಮಾಡದೆ ಇರುವ ಜಮೀನು ಗಳನ್ನು ರಿಯಲ್ ಎಸ್ಟೇಟ್ ದಂಧೆ ಮಾಡುವವರ ಪರವಾಗಿ ಅಕ್ರಮವಾಗಿ ಇ-ಖಾತೆಗಳನ್ನು ಮಾಡುವುದರ ಮೂಲಕ ಅಕ್ರಮ ವೆಸಗುತ್ತಿದ್ದಾರೆ. ಕೆಜಿಎಫ್ ನಗರಾಭಿವೃದ್ದಿ ಇಲಾಖೆಯಿಂದಲೂ ಅನುಮೋದನೆ ಪಡೆಯದೇ ಅಕ್ರಮವಾಗಿ ಖಾತೆಗಳನ್ನು ಮಾಡುತ್ತಿ ದ್ದಾರೆ ಎಂದು ಆರೋಪಿದರು.
ತಾಲೂಕಿನ ಆಲಂಬಾಡಿ ಜ್ಯೋತೆನಹಳ್ಳಿ ಗ್ರಾಪಂ ನಲ್ಲಿ ಪಿಡಿಒ ಅಕ್ರಮವಾಗಿ ಸರ್ಕಾರಿ ಜಮೀನುಗಳಿಗೆ ಇ-ಸ್ವತ್ತು ಖಾತೆಗಳನ್ನು ಮಾಡುವುದರ ಮೂಲಕ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ಪಂಚಾಯತ್ ರಾಜ್ ಕಾಯ್ದೆಯ ಕಾನೂನುಗಳನ್ನು ಬದಿಗೊತ್ತಿ ಅಕ್ರಮವಾಗಿ ಸುಳ್ಳು ದಾಖಲೆಗಳಿಗೆ ಖಾತೆಗಳನ್ನು ಮಾಡುತ್ತಿರುವುದಕ್ಕೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದರು.
ಪುರಸಭೆ ವ್ಯಾಪ್ತಿಯಲ್ಲಿ ಪಿಎಡಿ ನಂಬರ್‌ಗಳು ಇಲ್ಲದೇ ಇದ್ದರೂ ಇ-ಸ್ವತ್ತು ಖಾತೆಗಳನ್ನು ಮಾಡುತ್ತಿದ್ದಾರೆ. ಬಂಗಾರಪೇಟೆ ಪಟ್ಟಣದ ಸುತ್ತಲೂ ಇರುವ ರೈತರ ಜಮೀನುಗಳು ಹಾಗೂ ಸರ್ಕಾರಿ ಜಮೀನುಗಳಿಗೆ ಯಾವುದೇ ದಾಖಲೆಗಳಿಲ್ಲದೇ ಇದ್ದರೂ ಪುರಸಭೆ ಅಧಿಕಾರಿಗಳು ಅಕ್ರಮವಾಗಿ ಖಾತೆಗಳನ್ನು ಮಾಡುತ್ತಿದ್ದಾರೆ. ಅಕ್ರಮವಾಗಿರುವ ಜಮೀನುಗಳಲ್ಲಿ ಖಾತೆ ಮಾಡಲು ಪಿಎಡಿ ನಂಬರ್ ಅಗತ್ಯವಾಗಿದ್ದು, ಈ ನಂಬರ್ ಇಲ್ಲದೇ ಇದ್ದರೂ ಬೇರೆ ಜಮೀನುಗಳ ಪಿಎಡಿ ನಂಬರ್ ನೀಡಿ ಅಕ್ರಮವಾಗಿ ಇ-ಖಾತೆ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ತಾಲೂಕಿನ ಚಿನ್ನಕೋಟೆ, ಆಲಂಬಾಡಿ ಜ್ಯೋತೇನಹಳ್ಳಿ ಗ್ರಾಪಂಗಳಲ್ಲಿ ಹಾಗೂ ಪುರಸಭೆ ವ್ಯಾಪ್ತಿಯಲ್ಲಿ ಅಕ್ರಮವಾಗಿ ಇ-ಖಾತೆಗಳನ್ನು ಮಾಡಿರುವುದಕ್ಕೆ ದಾಖಲೆಗಳು ಹಾಗೂ ಈ ಅಕ್ರಮ ಖಾತೆಗಳನ್ನು ಮಾಡಲು ಸಂಬಂಧಪಟ್ಟ ವರೊಂದಿಗೆ ಲಕ್ಷ ಲಕ್ಷ ವಸೂಲಿ ಮಾಡಿರುವ ಬಗ್ಗೆ ಮೊಬೈಲ್ ಸಂಭಾಷಣೆ ದಾಖಲೆಗಳಿವೆ. ಈ ಎಲ್ಲಾ ಅಕ್ರಮಗಳನ್ನು ಪತ್ತೆ ಹಚ್ಚಿ ಸೂಕ್ತ ಕ್ರಮಕೈಗೊಳ್ಳಲು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ಮಾಡಲಾಗುವುದು ಎಂದು
ಎಚ್ಚರಿಕೆ ನೀಡಿದರು.
ರಿಪಬ್ಲಿಕ್ ಸೇನೆಯ ರಾಜ್ಯ ಯುವ ಘಟಕದ ಪ್ರಧಾನ ಕಾರ್ಯದರ್ಶಿ ಜಿ.ರಾಮಚಂದ್ರ, ರಾಜ್ಯ ಸಂಘಟನಾ ಕಾರ್ಯದರ್ಶಿ ಎಂ.ನವೀನ್‌ಕುಮಾರ್, ಕಾರ್ಮಿಕ ಘಟಕ ಜಿಲ್ಲಾ ಕಾರ್ಯದರ್ಶಿ ಅಮರೇಶ್, ತಾಲೂಕು ಅಧ್ಯಕ್ಷ ಮಂಜುನಾಥ್ ಇತರರು ಹಾಜರಿದ್ದರು.