ಬೆಂಗಳೂರು: ಸಾಕಷ್ಟು ಅಭಿವೃದ್ಧಿಯಾಗಿರುವ ಬೆಂಗಳೂರಿನ ಹೃದಯ ಭಾಗದಲ್ಲಿ ವಾಸವಿರುವ ಸುಶಿಕ್ಷಿತ ಜನರೇ ಬ್ಲಾಕ್‌ಸ್ಪಾಟ್ ಸೃಷ್ಟಿಯಾಗಲು ಕಾರಣ ಎಂಬುದು ಅಂಕಿ-ಅಂಶಗಳಿಗೆ ಬಯಲಾಗಿದೆ. ರಾತ್ರಿ ವೇಳೆ ನಗರದ ರಸ್ತೆಬದಿ, ಖಾಲಿ ನಿವೇಶನ ಹೀಗೆ ಎಲ್ಲೆಂದರಲ್ಲಿ ಕಸ ಎಸೆದು ಹೋಗುವವರ ಪತ್ತೆಗೆ ಬಿಬಿಎಂಪಿಯಿಂದ ಮಾರ್ಷಲ್‌ಗಳನ್ನು ನೇಮಿಸಲಾಗಿತ್ತು.
ಈ ವೇಳೆ ಕೇಂದ್ರ ಭಾಗದ ಪೂರ್ವ, ಪಶ್ಚಿಮ ಹಾಗೂ ದಕ್ಷಿಣ ವಲಯಗಳಲ್ಲೇ ಅತಿ ಹೆಚ್ಚು ಜನ ಎಲ್ಲೆಂದರಲ್ಲಿ ಕಸ ಎಸೆಯುವುದು ಕಂಡುಬಂದಿದೆ. ಹೀಗೆ ಕಸ ಎಸೆಯುವವರಿಗೆ ಮಾರ್ಷಲ್‌ಗಳು ದಂಡ ವಿಧಿಸಿದ್ದಾರೆ. ಈ ಸಂಬಮಧ ನಗರಾದ್ಯಂತ ಒಟ್ಟು 8401 ಪ್ರಕರಣಗಳು ದಾಖಲಾಗಿದ್ದು, ಆ ಪೈಕಿ ಶೇ.50ರಷ್ಟು ಪ್ರಕರಣಗಳು ಕೇಂದ್ರ ಭಾಗದ ಮೂರು ವಲಯಗಳಲ್ಲಿ ದಾಖಲಾಗಿವೆ.
ಸ್ವಚ್ಛ ಸರ್ವೇಕ್ಷಣ್ ಅಭಿಯಾನದ ಹಿನ್ನೆಲೆಯಲ್ಲಿ, ಎಲ್ಲೆಂದರಲ್ಲಿ ತ್ಯಾಜ್ಯ ವಿಲೇವಾರಿ ಮಾಡುವುದನ್ನು ತಪ್ಪಿಸುವ ಉದ್ದೇಶದಿಂದ ಕಳೆದ ಅಕ್ಟೋಬರ್‌ನಿಂದ ಫೆಬ್ರವರಿ 1ರವರೆಗೆ ಪ್ರಾಯೋಗಿಕವಾಗಿ ಗಸ್ತು ತಿರುಗಲು ಮಾರ್ಷಲ್‌ಗಳನ್ನು ನೇಮಿಸಿಕೊಳ್ಳಲಾಗಿತ್ತು. ಈ ವೇಳೆ ಸುಶಿಕ್ಷಿತರೇ ತ್ಯಾಜ್ಯವನ್ನು ಬೈಕ್, ಕಾರುಗಳಲ್ಲಿ ತಂದು ಎಸೆಯುವುದು ಕಂಡುಬಂದಿದೆ. ಜತೆಗೆ ಕೆಲವರು ಟ್ರ್ಯಾಕ್ಟರ್ ಹಾಗೂ ಟ್ರಕ್‌ಗಳಲ್ಲಿ ತ್ಯಾಜ್ಯ ತುಂಬಿಕೊಂಡು ಬಂದು ರಸ್ತೆ ಬದಿಯಲ್ಲಿ ಸುರಿಯುವುದು ಕಂಡಬಂದಿದೆ.
ಎಲ್ಲೆಂದರಲ್ಲಿ ತ್ಯಾಜ್ಯ ಎಸೆದವರ ವಿರುದ್ಧ ಮಾರ್ಷಲ್‌ಗಳು ಒಟ್ಟು 8401 ಪ್ರಕರಣಗಳನ್ನು ದಾಖಲಿಸಿ ದಂಡ ವಿಧಿಸಿದ್ದು, ಆ ಪೈಕಿ ಶೇ.50ರಷ್ಟು ಅಂದರೆ, 4766 ಪ್ರಕರಣಗಳು ಕೇಂದ್ರ ಭಾಗದ ಮೂರು ವಲಯಗಳಲ್ಲಿ ದಾಖಲಾಗಿವೆ. ಅದರಂತೆ ದಕ್ಷಿಣ ವಲಯದಲ್ಲಿ 1,936 ಪ್ರಕರಣಗಳು, ಪೂರ್ವ ವಲಯ 1,442 ಹಾಗೂ ಪಶ್ಚಿಮ ವಲಯದಲ್ಲಿ 1,388 ಪ್ರಕರಣ ದಾಖಲಾಗಿವೆ. ಉಳಿದಂತೆ ದಾಸರಹಳ್ಳಿಯಲ್ಲಿ 1,455, ಮಹದೇವಪುರ 609, ರಾಜರಾಜೇಶ್ವರಿ ನಗರ 853, ಯಲಹಂಕ 147 ಹಾಗೂ ಬೊಮ್ಮನಹಳ್ಳಿ ವಲಯದಲ್ಲಿ 571 ಪ್ರಕರಣಗಳು ದಾಖಲಾಗಿದ್ದು, ದಂಡದ ರೂಪದಲ್ಲಿ ಪಾಲಿಕೆಗೆ ಒಟ್ಟು 8,35,210 ರೂ. ಸಂಗ್ರಹವಾಗಿದೆ.
ಗಸ್ತು ಕಾರ್ಯಾಚರಣೆ ಸ್ಥಗಿತ: ಸ್ವಚ್ಛ ಸರ್ವೇಕ್ಷಣ್ ಅಭಿಯಾನದಲ್ಲಿ ಉತ್ತಮ ರ್‍ಯಾಂಕ್ ಪಡೆಯುವ ಉದ್ದೇಶದಿಂದ ಪಾಲಿಕೆಯಿಂದ ರಾತ್ರಿ ಗಸ್ತು ನಡೆಸಲು ಮಾರ್ಷಲ್‌ಗಳನ್ನು ನೇಮಿಸಲಾಗಿತ್ತು. ಈಗ ಅಭಿಯಾನ ಪೂರ್ಣಗೊಂಡ ಹಿನ್ನೆಲೆಯಲ್ಲಿ ಮಾರ್ಷಲ್‌ಗಳನ್ನು ಕ್ವಾರಿ ಹಾಗೂ ತ್ಯಾಜ್ಯ ಸಂಸ್ಕರಣಾ ಘಟಕಗಳ ಬಳಿಗೆ ಕಳುಹಿಸಲಾಗಿದೆ. ಪ್ರತಿ ವಾರ್ಡ್‌ಗೆ ಮಾರ್ಷಲ್‌ಗಳನ್ನು ನೇಮಿಸುವ ಪ್ರಸ್ತಾವನೆಗೆ ಸರ್ಕಾರ ಅನುಮತಿ ನೀಡಿದರೆ ಮತ್ತೆ ಕಾರ್ಯಾಚರಣೆ ಆರಂಭಿಸುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.