ಬೆಂಗಳೂರು: ರಾಜಧಾನಿ ಬೆಂಗಳೂರಿನ ಹಲವಾರು ವಾರ್ಡ್‌ಗಳಲ್ಲಿ ಗುತ್ತಿಗೆದಾರರು ತ್ಯಾಜ್ಯ ಸಂಗ್ರಹ ಪ್ರಕ್ರಿಯೆ ಸ್ಥಗಿತಗೊಳಿಸಿದ್ದು, ಲೋಕಸಭಾ ಚುನಾವಣೆ ವೇಳೆಗೆ ನಗರದಲ್ಲಿ ಕೃತಕ ತ್ಯಾಜ್ಯ ಸಮಸ್ಯೆ ಸೃಷ್ಟಿಯಾಗುವ ಆತಂಕ ಎದುರಾಗಿದೆ.
ಕಳೆದ ಹದಿನೈದು ದಿನಗಳಿಂದ ಷರತ್ತುಗಳ ನೆಪ ಒಡ್ಡಿ ತ್ಯಾಜ್ಯ ವಿಲೇವಾರಿ ಗುತ್ತಿಗೆದಾರರು ಮನೆ ಮನೆಯಿಂದ ತ್ಯಾಜ್ಯ ಸಂಗ್ರಹಿಸುವುದನ್ನು ಸ್ಥಗಿತಗೊಳಿಸಿದ್ದಾರೆ. ಪರಿಣಾಮ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದು, ಎರಡು-ಮೂರು ದಿನಗಳ ತ್ಯಾಜ್ಯ ಮನೆಯಲ್ಲಿಟ್ಟುಕೊಳ್ಳಲು ಸಾಧ್ಯವಾಗದೆ, ರಸ್ತೆಬದಿ ಹಾಗೂ ಖಾಲಿ ನಿವೇಶನಗಳಲ್ಲಿ ಸುರಿಯಯುತ್ತಿದ್ದಾರೆ.
ಜನರು ಎಲ್ಲೆಂದರಲ್ಲಿ ತ್ಯಾಜ್ಯ ವಿಲೇವಾರಿ ಮಾಡುತ್ತಿರುವುದರಿಂದ ರಸ್ತೆಬದಿ ಹಾಗೂ ಖಾಲಿ ನಿವೇಶನಗಳಲ್ಲಿ ತ್ಯಾಜ್ಯ ರಾಶಿಗಳು ಕಂಡುಬರುತ್ತಿವೆ. ಇನ್ನು ತ್ಯಾಜ್ಯ ರಾಶಿಯಲ್ಲಿ ಆಹಾರ ಹುಡುಕಲು ಮುಗಿ ಬೀಳುವ ಬಿಡಾಡಿ ಹಸುಗಳು ಹಾಗೂ ಬೀದಿ ನಾಯಿಗಳು ತ್ಯಾಜ್ಯವನ್ನು ರಸ್ತೆಗಳಿಗೆ ಎಳೆದು ತರುತ್ತಿದ್ದು, ವಾಹನ ಸವಾರರ ಮೇಲೆ ದಾಳಿ ನಡೆಸಲು ಮುಂದಾದ ಘಟನೆಗಳು ನಡೆಯುತ್ತಿವೆ.
ವೈಜ್ಞಾನಿಕ ತ್ಯಾಜ್ಯ ವಿಂಗಡಣೆ ಹಾಗೂ ವಿಲೇವಾರಿಗಾಗಿ ಪಾಲಿಕೆಯಿಂದ ಕೇವಲ ಹಸಿ ತ್ಯಾಜ್ಯ ವಿಲೇವಾರಿಗೆ ಟೆಂಡರ್ ಆಹ್ವಾನಿಸಲಾಗಿದೆ. ಈ ವೇಳೆ ಗುತ್ತಿಗೆದಾರರಿಗೆ ಹಲವಾರು ಷರತ್ತುಗಳನ್ನು ವಿಧಿಸಲಾಗಿದೆ. ಅದರಲ್ಲೂ ಪ್ರಮುಖವಾಗಿ ಗುತ್ತಿಗೆದಾರರು ಗೂಡ್ಸ್ ಆಟೋಗಳಲ್ಲಿ ತ್ಯಾಜ್ಯ ಸಂಗ್ರಹ ಮಾಡುವಂತಿಲ್ಲ. ಕಡ್ಡಾಯವಾಗಿ ಆಟೋ ಟಿಪ್ಪರ್‌ಗಳನ್ನು ಬಳಸಬೇಕೆಂಬ ನಿಯಮ ಗುತ್ತಿಗೆದಾರರ ಕೋಪಕ್ಕೆ ಕಾರಣವಾಗಿದೆ.
ಪರಿಣಾಮ ಟೆಂಡರ್ ಪ್ರಕ್ರಿಯೆ ಮುಗಿದ ನಂತರವೇ ಹೊಸ ಆಟೋಗಳೊಂದಿಗೆ ತ್ಯಾಜ್ಯ ಸಂಗ್ರಹ ಪ್ರಕ್ರಿಯೆಯಲ್ಲಿ ಭಾಗಿಯಾಗುತ್ತೇವೆ ಎಂದು ಕಳೆದ ಹದಿನೈದು ದಿನಗಳಿಂದ ತ್ಯಾಜ್ಯ ಸಂಗ್ರಹಿಸುತ್ತಿಲ್ಲ. ಈ ಕುರಿತು ಅಧಿಕಾರಿಗಳನ್ನು ಪ್ರಶ್ನಿಸಿದರೆ, ಪಾಲಿಕೆಯಿಂದ ಹೊಸದಾಗಿ ಟೆಂಡರ್ ಕರೆಯುತ್ತಿರುವುದರಿಂದ ಕೆಲವು ಕಡೆಗಳಲ್ಲಿ ಗುತ್ತಿಗೆದಾರರು ತ್ಯಾಜ್ಯ ವಿಲೇವಾರಿ ಪ್ರಕ್ರಿಯೆಯಲ್ಲಿ ಭಾಗಿಯಾಗುತ್ತಿಲ್ಲ. ಇದರಿಂದಾಗಿ ಬ್ಲಾಕ್‌ಸ್ಪಾಟ್‌ಗಳ ಸಂಖ್ಯೆ ಹೆಚ್ಚಾಗಿದೆ. ಗುತ್ತಿಗೆದಾರರು ವಿಲೇವಾರಿ ಪ್ರಕ್ರಿಯೆಯಲ್ಲಿ ಭಾಗವಹಿಸಿದರೆ ಮಾತ್ರವೇ ಅವರಿಗೆ ಬಿಲ್ ಪಾವತಿಸುವಂತೆ ಜಂಟಿ ಆಯುಕ್ತರಿಗೆ ಸೂಚಿಸಲಾಗಿದೆ ಎನ್ನುತ್ತಾರೆ.
ನಗರದ ಕೆಲವು ವಾರ್ಡ್‌ಗಳಲ್ಲಿ ಕಾರ್ಯಾದೇಶ ಪಡೆದಿರುವ ಗುತ್ತಿಗೆದಾರರು ತ್ಯಾಜ್ಯ ವಿಲೇವಾರಿ ಮಾಡುತ್ತಿಲ್ಲ. ಆ ಹಿನ್ನೆಲೆಯಲ್ಲಿ ಪಾಲಿಕೆಯ ವಾಹನಗಳನ್ನು ಬಳಸಿ ತ್ಯಾಜ್ಯ ವಿಲೇವಾರಿಗೆ ಮುಂದಾಗುವಂತೆ ಅಧಿಕಾರಿಗಳಿಗೆ ಸೂಚಿಸಿದ್ದು, ತ್ಯಾಜ್ಯ ವಿಲೇವಾರಿಯಲ್ಲಿ ಪಾಲ್ಗೊಳ್ಳದ ಗುತ್ತಿಗೆದಾರರಿಗೆ ಬಿಲ್ ಪಾವತಿಸದಂತೆ ಜಂಟಿ ಆಯುಕ್ತರಿಗೆ ಸೂಚನೆ ನೀಡಲಾಗಿದೆ.
-ರಂದೀಪ್, ವಿಶೇಷ ಆಯುಕ್ತರು (ಘನತ್ಯಾಜ್ಯ ನಿರ್ವಹಣೆ)