Advertisement

ಚರಂಡಿಯಿದ್ದರೂ ಸರಾಗವಾಗಿ ನೀರು ಹರಿಯದೆ ಕೃತಕ ನೆರೆ ಸೃಷ್ಟಿ

06:10 AM Jul 03, 2018 | Team Udayavani |

ವಿಶೇಷ ವರದಿ– ಹಟ್ಟಿಯಂಗಡಿ: ಚರಂಡಿಯಿದ್ದರೂ, ನೀರು ಹರಿದು ಹೋಗುತ್ತಿಲ್ಲ. ಮನೆಗೆ ಹೋಗಲು ರಸ್ತೆಯಿದ್ದರೂ ಅಸಮರ್ಪಕ ಚರಂಡಿ ವ್ಯವಸ್ಥೆಯಿಂದ ವಾಹನವನ್ನು ಬೇರೆಲ್ಲೋ ಇಟ್ಟು ಹೋಗಬೇಕಾದ ಪರಿಸ್ಥಿತಿ. ಜೋರಾಗಿ ಮಳೆ ಬಂದರಂತೂ ಮನೆಯಿಂದ ಹೊರಬರಲು ಸಾಧ್ಯವಿಲ್ಲದಷ್ಟು ನೀರು ಅಂಗಳದಲ್ಲಿದ್ದು, ನೆರೆ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಇದು ಹಟ್ಟಿಯಂಗಡಿ ಗ್ರಾ.ಪಂ. ವ್ಯಾಪ್ತಿಯ ಕರ್ಕಿಯ 4 ಕುಟುಂಬಗಳು ಮಳೆಗಾಲ ಪ್ರಾರಂಭವಾದ ಅನುಭವಿಸುತ್ತಿರುವ ನಿತ್ಯದ ಯಾತನೆ. 

Advertisement

ಕರ್ಕಿಯ ತುರಾಯಿ, ರಾಜೀವಿ ಶೆಟ್ಟಿ, ರಾಜು ದೇವಾಡಿಗ ಹಾಗೂ ಸೀತಾರಾಮ ಶೆಟ್ಟಿ ಅವರ ಮನೆಗೆ ಮಳೆ ನೀರು ನಿಂತು ಕೃತಕ ನೆರೆ ಸೃಷ್ಟಿಯಾಗಿ, ಸಮಸ್ಯೆ ಅನುಭವಿಸುತ್ತಿರುವ ಕುಟುಂಬಗಳು. 

ಚರಂಡಿಯಿದೆ. ಆದರೆ ಎರಡೂ ಬದಿಯಲ್ಲಿ ಮಳೆ ನೀರು ಸರಾಗವಾಗಿ ಹರಿದು ಹೋಗಲು ಸರಿಯಾದ ವ್ಯವಸ್ಥೆಯಿಲ್ಲ. ಆಚೆ ಬದಿ ಮತ್ತು ಈಚೆ ಬದಿ ಎತ್ತರದ ಪ್ರದೇಶವಾಗಿದ್ದು, ಈ 4 ಮನೆಗಳಿರುವುದು ತಗ್ಗು ಪ್ರದೇಶದಲ್ಲಿ. ಇದರಿಂದ ಚರಂಡಿ ನೀರೆಲ್ಲ ಈ 4 ಮನೆಗಳಿರುವ ಪ್ರದೇಶದಲ್ಲಿ ನಿಂತು ಕೃತಕ ನೆರೆ ಸೃಷ್ಟಿಯಾಗುತ್ತದೆ. 

ಪ್ರತ್ಯೇಕ ವ್ಯವಸ್ಥೆಯಿಲ್ಲ
ಈ 4 ಮನೆಗಳಿರುವ ಪ್ರದೇಶದಲ್ಲಿ ಎರಡು ಹೆಂಚಿನ ಕಾರ್ಖಾನೆಗಳಿದ್ದು, ಇದರ ನೀರು ಕೂಡ ಈ ಚರಂಡಿಯಲ್ಲೇ ಹರಿದು ಹೋಗುತ್ತದೆ. ಅದರ ನೀರ ಹರಿವಿಗೆ ಪ್ರತ್ಯೇಕ ವ್ಯವಸ್ಥೆ ಮಾಡಿದರೆ ಈ ಚರಂಡಿಯಲ್ಲಿ ಇಷ್ಟೊಂದು ಪ್ರಮಾಣದ ನೀರು ಹರಿಯಲು ಸಾಧ್ಯವಿಲ್ಲ. ಇದರಿಂದ ಸಮಸ್ಯೆಯೂ ಪರಿಹಾರವಾಗಬಹುದು ಎನ್ನುವುದು ಇಲ್ಲಿನ ನಿವಾಸಿಗರ ಅಭಿಪ್ರಾಯ. 

ಸಾಂಕ್ರಮಿಕ ರೋಗ ಭೀತಿ
ಚರಂಡಿಯಲ್ಲಿ ನೀರು ಅಲ್ಲಲ್ಲಿ ನಿಂತಿದ್ದು, ಒಂದೆಡೆ ಮೋರಿಯು ಮಣ್ಣಿನಡಿ ಹೂತು ಹೋಗಿರುವುದರಿಂದ ಮಳೆ ನೀರು ಅಲ್ಲೇ ಶೇಖರಣೆಯಾಗಿದೆ. ಇದರಿಂದ ಭವಿಷ್ಯದಲ್ಲಿ ಈ ಪ್ರದೇಶ ಸೊಳ್ಳೆ ಉತ್ಪತ್ತಿ ಕೇಂದ್ರವಾಗಿ ಮಾರ್ಪಟ್ಟು ಸಾಂಕ್ರಮಿಕ ರೋಗ ಇಲ್ಲಿ ವ್ಯಾಪಿಸಬಹುದು ಎನ್ನುವ ಭೀತಿ ಇಲ್ಲಿನ ಸ್ಥಳೀಯ ನಿವಾಸಿಗಳದ್ದು.

Advertisement

ದೂರು ನೀಡಿದರೂ ಪ್ರಯೋಜನವಾಗಿಲ್ಲ
ಈ ಸಮಸ್ಯೆ ಕುರಿತು ಸಂಬಂಧಪಟ್ಟ ಹಟ್ಟಿಯಂಗಡಿ ಹಾಗೂ ಗುಲ್ವಾಡಿ ಗ್ರಾ.ಪಂ., ಪಿಡಬ್ಲೂÂಡಿ ಇಲಾಖೆಗೂ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಇದು ನಮಗೆ ಸಂಬಂಧಪಡುವುದಿಲ್ಲ ಎಂದು ಸಮಜಾಯಿಸಿ ನೀಡಿ ಜಾರಿಕೊಳ್ಳುತ್ತಾರೆ ಕರ್ಕಿಯ ಜನರ ಅಳಲು. 

ಅಂಗಳ ಪೂರ್ತಿ ನೀರು
ಈ ಹೊಸ ಮನೆ ಕಟ್ಟಿ 2 ತಿಂಗಳಾಗಿದ್ದಷ್ಟೇ. ಸಂಬಂಧಪಟ್ಟ ಅನೇಕ ಮಂದಿಗೆ ದೂರು ಕೊಟ್ಟಿದ್ದೇವೆ. ಅವರೆಲ್ಲ ನಮಗಿದು ಸಂಬಂಧಪಡುವುದಿಲ್ಲ ಎಂದು ಹೇಳಿ ಹೋಗುತ್ತಾರೆ. ಜೋರಾಗಿ ಮಳೆ ಬಂದರೆ ಮನೆಯಿಂದ ಹೊರಗೆ ಬರುವುದಕ್ಕಾಗುವುದಿಲ್ಲ. ಮನೆಯ ಅಂಗಳ ಪೂರ್ತಿ ನೀರು ತುಂಬಿರುತ್ತದೆ. ಅದಕ್ಕೆ ಮನೆಯಂಗಳಕ್ಕೆ ನೀರು ಬರಬಾರದೆಂದು ಗೇಟಿನ ಹತ್ತಿರ ಮಣ್ಣು-ಕಲ್ಲಿನ ಎತ್ತರದ ದಂಡೆ ಮಾಡಿದ್ದೇವೆ. 
– ರಾಜೀವಿ ಶೆಟ್ಟಿ , ಕರ್ಕಿ

ಗಮನಕ್ಕೆ ಬಂದಿದೆ
ಕರ್ಕಿಯಲ್ಲಿ ಓಎಫ್‌ಸಿ ಟೆಲಿಫೋನ್‌ ಪೈಪ್‌ಲೈನ್‌ ಕಾಮಗಾರಿ ಇತ್ತೀಚೆಗಷ್ಟೇ ಮುಗಿದಿದ್ದು, ಅವರು ಮಣ್ಣನ್ನೆಲ್ಲ ಚರಂಡಿಗೆ ಹಾಕಿದ್ದು, ಅದಲ್ಲದೆ ಈಗ ಅಲ್ಲಿ ಹೊಸ ಮನೆಗಳಾಗಿರುವುದರಿಂದ ನೀರು ಹರಿಯಲು ಇಳಿಜಾರು ಪ್ರದೇಶಗಳಿಲ್ಲ. ಪಿಡಬ್ಲ್ಯೂಡಿ ಎಂಜಿನಿಯರನ್ನು ಕಳುಹಿಸಲಾಗಿದೆ. ಈಗ ಪಂಚಾಯತ್‌ನಲ್ಲಿ ಅನುದಾನವಿಲ್ಲ. ಅಲ್ಲಿರುವ ಮನೆಯವರು ಜಾಗ ಕೊಟ್ಟರೆ, ಅನುದಾನ ತೆಗೆದಿಟ್ಟು  ಮೋರಿ ಅಥವಾ ರಿವಿಟ್‌ಮೆಂಟ್‌ ಮಾಡಬಹುದು. 
– ರಾಜು ಶೆಟ್ಟಿ,  ಹಟ್ಟಿಯಂಗಡಿ ಗ್ರಾ.ಪಂ. ಅಧ್ಯಕ್ಷ 

Advertisement

Udayavani is now on Telegram. Click here to join our channel and stay updated with the latest news.

Next