ಯಾದಗಿರಿ:ಜಿಲ್ಲೆಯಿಂದವಿದೇಶಕ್ಕೆಉತ್ಪನ್ನಗಳನ್ನು ರಫ್ತು ಮಾಡಲು ಜಿಲ್ಲಾ ಕೈಗಾರಿಕಾ ಕೇಂದ್ರ ಮತ್ತು ಜಂಟಿ ಕೃಷಿ ನಿರ್ದೇಶಕರ ಇಲಾಖೆಗಳು ಸಮನ್ವಯ ಸಾಧಿಸಿ ಅವಕಾಶಗಳನ್ನು ಸೃಷ್ಟಿಸಬೇಕು ಎಂದು ಜಿಲ್ಲಾಧಿಕಾರಿ ಡಾ| ರಾಗಪ್ರಿಯಾ ಆರ್. ತಿಳಿಸಿದರು.
ನಗರದ ಖಾಸಗಿ ರೆಸಿಡೆನ್ಸಿ ಹೋಟೆಲ್‌ನಲ್ಲಿ ಜಿಲ್ಲಾ ಕೈಗಾರಿಕ ಕೇಂದ್ರದ ವತಿಯಿಂದ 75ನೇ ಸ್ವಾತಂತ್ರೋತ್ಸವ ಪ್ರಯುಕ್ತ ಆಜಾದಿ ಕಾ ಅಮೃತ ಮಹೋತ್ಸವ ಭಾಗವಾಗಿ ಮಂಗಳವಾರ ಆಯೋಜಿಸಿದ್ದ ವಾಣಿಜ್ಯ ಸಪ್ತಾಹದಡಿ ರಫ್ತು ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
ಕಲ್ಯಾಣ ಕರ್ನಾಟಕ ಭಾಗದಲ್ಲಿ ರಫ್ತು ಮಾಡುವುದು ಬಹಳಷ್ಟು ಕಡಿಮೆಯಾಗಿದ್ದು, ಅದರಲ್ಲಿ ಯಾದಗಿರಿ ಜಿಲ್ಲೆಯಲ್ಲಿ ರಫ್ತು ಮಾಡುವಂತಹ ಉತ್ಪನ್ನಗಳನ್ನು ಉತ್ಪಾದಿಸುತ್ತಿಲ್ಲ. ಹೀಗಾಗಿ ಜಿಲ್ಲಾ ಕೈಗಾರಿಕಾ ಕೇಂದ್ರ ಕೈಗಾರಿಕೋದ್ಯಮದಾರರಿಗೆ ಇದರ ಕುರಿತು ತಿಳಿವಳಿಕೆ ನೀಡಿ ಉತ್ತೇಜಿಸುವುದು ಬಹುಮುಖ್ಯವಾಗಿದೆ ಎಂದರು.
ಕಡೇಚೂರು ಕೈಗಾರಿಕಾ ಪ್ರದೇಶದಲ್ಲಿ ರಫ್ತುವಿನ ಭಾಗವಾಗಿ ಕೆಲ ಕೈಗಾರಿಕೆಗಳು ಸ್ಥಾಪನೆಯಾಗುತ್ತಿದ್ದು, ಇದರ ಲಾಭ ಪಡೆದು ಅಂತಾರಾಷ್ಟ್ರೀಯ ಸಂಬಂಧಗಳನ್ನು ಬೆಸೆದು ನಮಗೆ ಅವಶ್ಯವಿರುವ ವಿದೇಶ ವಸ್ತುಗಳನ್ನು ಆಮದು ಮಾಡಿಕೊಳ್ಳಬಹುದಾಗಿದೆ ಎಂದು ಸಲಹೆ ನೀಡಿದರು. ವಿದೇಶಗಳಲ್ಲಿ ಬೇಡಿಕೆಯಾಗಿರುವ ಪದಾರ್ಥಗಳ ಬಗ್ಗೆ ತಿಳಿದುಕೊಂಡು ಜಿಲ್ಲೆಯಲ್ಲಿ ಹೆಚ್ಚಾಗಿ ಉತ್ಪಾದಿಸಿ ರಫ್ತು ಮಾಡಬೇಕು. ಮಸಾಲೆ ಪದಾರ್ಥಗಳು ಶೇಂಗಾ ಬೀಜಗಳು, ಹತ್ತಿಗಳನ್ನು ಬೆಳೆದು ವಿದೇಶಕ್ಕೆ ರಫ್ತು ಮಾಡಬಹುದಾಗಿದೆ ಎಂದರು. ಜಿಲ್ಲೆಯ ಉದ್ಯಮದಾರರಿಗೆ ಮಾಹಿತಿ ನೀಡಿ ರಫ್ತು ಕೈಗೊಳ್ಳಲು ಮುಂದೆ ಬರಲಿ ಮತ್ತು ನಮ್ಮ ಜಿಲ್ಲೆಯು ರಫ್ತು ಜಿಲ್ಲೆಗಳಲ್ಲಿ ಗುರುತಿಸುವಂತಾಗಲಿ ಎಂದು ಆಶಯ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಯಾದಗಿರಿ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಮಾಣಿಕ್ ರಘೋಜಿ ಮಾತನಾಡಿ, ಸರಕಾರದಿಂದ ಪ್ರತಿಯೊಂದಕ್ಕೂ ಸಹಕಾರ ಮತ್ತು ಯೋಜನೆಗಳಿದ್ದು, ಇದರ ಲಾಭ ಪಡೆಯಬೇಕು. ಕೈಗಾರಿಕಾ ಕ್ಷೇತ್ರದಲ್ಲಿನ ಸಮಸ್ಯೆಗಳನ್ನು ಅರಿಯಲು ಮತ್ತು ರಫ್ತುವಿನ ಕುರಿತು ಮಾಹಿತಿ ನೀಡಲು ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ತಿಳಿಸಿದರು. ಜಿಲ್ಲಾ ಕೈಗಾರಿಕಾ ಕೇಂದ್ರದ ಉಪ ನಿರ್ದೇಶಕಿ ರೇಖಾ ಎನ್. ಮ್ಯಾಗೇರಿ ಪ್ರಸ್ತಾವಿಕವಾಗಿ ಮಾತನಾಡಿ, ಜಿಲ್ಲೆಯಲ್ಲಿ ಕೃಷಿ ಬೆಳೆಗಳಲ್ಲಿ ಹತ್ತಿ 1,52,798 ಹೆಕ್ಟೇರ್‌ನಲ್ಲಿ 2,56,612 ಮೆ. ಟನ್ ಬೆಳೆಯಲಾಗುತ್ತಿದ್ದು, ಅದು ಉತ್ತಮ
ಗುಣಮಟ್ಟದಿಂದ ಕೂಡಿದೆ. ಆ ಹತ್ತಿಯನ್ನು ಸ್ವಲ್ಪ ಪ್ರಮಾಣದಲ್ಲಿ ಸಂಸ್ಕರಿಸಿದರೆ ನಾವು ಸಹ ರಫ್ತು ಮಾಡಬಹುದಾಗಿದೆ ಎಂದು ತಿಳಿಸಿದರು.
ಯಾದಗಿರಿ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಹನುಮಾನ್ ದಾಸ್ ಮುಂದಡ, ರೈಸ್ ಮಿಲ್ ಅಸೋಷಿಯೇಷನ್ ಅಧ್ಯಕ್ಷ ಲಾಯಖ್ ಹುಸೇನ್ ಬಾದಲ್, ಜಿಲ್ಲಾ ಲೀಡ್ ಬ್ಯಾಂಕ್ ವ್ಯವಸ್ಥಾಪಕ ಕೆ.ಎನ್. ಸಿದೇಶ್ವರ ಇದ್ದರು. ಸಹಾಯಕ ನಿರ್ದೇಶಕ ಎಂ.ಎ. ಸಲೀಂ ಸ್ವಾಗತಿಸಿದರು. ಅಧೀಕ್ಷಕ ಷಣ್ಮುಖ ವಂದಿಸಿದರು.