ಬೆಳಗಾವಿ: ಮಹಿಳಾ ಕಾರ್ಮಿಕರಿಗೆ ಇರುವ ಹಕ್ಕುಗಳ ಕುರಿತು ಬಹಳಷ್ಟು ಜನರಿಗೆ ಮಾಹಿತಿ ಇರುವುದಿಲ್ಲ. ಆಂತರಿಕ ದೂರು ನಿರ್ವಹಣಾ ಸಮಿತಿ ಸೇರಿದಂತೆ ವಿವಿಧ ಬಗೆಯ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸುವ ಕೆಲಸವನ್ನು ಕಾರ್ಮಿಕ ಇಲಾಖೆ ಅಧಿಕಾರಿಗಳು ಮಾಡಬೇಕು ಎಂದು ಮಹಿಳಾ ಆಯೋಗದ ಅಧ್ಯಕ್ಷೆ ಪ್ರಮೀಳಾ ನಾಯ್ಡು ನಿರ್ದೇಶನ ನೀಡಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ಆಂತರಿಕ ದೂರು ನಿರ್ವಹಣಾ ಸಮಿತಿ ರಚಿಸಬೇಕು. ಅನ್ಯಾಯಕ್ಕೊಳಗಾದ ಮಹಿಳೆ ಮೊದಲು ಸಮಿತಿಗೆ ದೂರು ಸಲ್ಲಿಸಬೇಕು. ಅಲ್ಲಿ ಬಗೆಹರಿಯದಿದ್ದರೆ ಕೂಡಲೇ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಬೇಕು ಎಂದರು.
ಸರ್ಕಾರಿ ಮತ್ತು ಖಾಸಗಿ ಸ್ಥಳಗಳಲ್ಲಿ ಕೆಲಸ ಮಾಡುವ ಮಹಿಳೆಯರ ಮೇಲೆ ಲೈಂಗಿಕ ಕಿರುಕುಳ ಪ್ರಕರಣಗಳು ಹೆಚ್ಚಾಗಿ ಕಂಡುಬರುತ್ತಿದ್ದು, ಹೀಗಾಗಿ ಪ್ರತಿಯೊಂದು ಸ್ಥಳದಲ್ಲಿ ಆಂತರಿಕ ದೂರು ನಿರ್ವಹಣಾ ಸಮಿತಿ ಕಡ್ಡಾಯವಾಗಿ ರಚಿಸಬೇಕು. ಲೈಂಗಿಕ ಕಿರುಕುಳ ನಡೆದ ವೇಳೆ ಮಹಿಳೆಯರು ಏನು ಮಾಡಬೇಕು ಎಂಬುದರ ಕುರಿತು ಜಾಗೃತಿ ಕಾರ್ಯಕ್ರಮಗಳನ್ನು ನಿಯಮಿತವಾಗಿ ಹಮ್ಮಿಕೊಳ್ಳಬೇಕು. ಇತ್ತೀಚಿನ ಮಕ್ಕಳಲ್ಲಿ ಆತ್ಮಹತ್ಯೆ ಪ್ರವೃತ್ತಿ ಹೆಚ್ಚಾಗುತ್ತಿದೆ. ಹೀಗಾಗಿ ಶಿಕ್ಷಣ ಸಂಸ್ಥೆ ಸೇರಿದಂತೆ ವಿವಿಧ ಕಡೆಗಳಲ್ಲಿ ಆತ್ಮಹತ್ಯೆ ತಡೆ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ನಡೆಸಬೇಕು ಎಂದರು. ಕಾನೂನು ಸೇವಾ ಪ್ರಾಧಿಕಾರದಿಂದ ಮಹಿಳೆಯರಿಗೆ ಉಚಿತ ಕಾನೂನು ನೆರವು ಒದಗಿಸಲಾಗುತ್ತಿದೆ. ಇದರ ಪ್ರಯೋಜನ ಪಡೆದುಕೊಳ್ಳುವ ನಿಟ್ಟಿನಲ್ಲಿ ಮಹಿಳೆಯರಿಗೆ ಮಾಹಿತಿ ನೀಡಬೇಕು. ಅತ್ಯಾಚಾರಕ್ಕೆ ಒಳಗಾದ ಹಾಗೂ ಲೈಂಗಿಕ ದೌರ್ಜನ್ಯದಿಂದ ನೊಂದ ಬಾಲಕಿಯರು ಅಥವಾ ಮಕ್ಕಳಿಗೆ ಪರಿಹಾರ ಮೊತ್ತವನ್ನು ತಕ್ಷಣ ವಿತರಿಸಬೇಕು. ಉಳಿದ ಮೊತ್ತವನ್ನು ಪ್ರಕರಣ ಇತ್ಯರ್ಥಗೊಂಡ ನಂತರ ಒದಗಿಸಬೇಕು ಎಂದು ನಿರ್ದೇಶನ ನೀಡಿದರು. ಸರ್ಕಾರಿ ಆಸ್ಪತ್ರೆಗಳಿಗೆ ದಾಖಲಾಗುವ ಮಹಿಳಾ ರೋಗಿಗಳಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸುವುದರ ಜತೆಗೆ ಮಹಿಳಾ ವಾರ್ಡುಗಳು ಮತ್ತು ಶೌಚಾಲಯಗಳ ಸ್ವತ್ಛತೆಗೆ ಆದ್ಯತೆ ನೀಡಬೇಕು. ಹೊರಗೆ ಬಂದು ಕೆಲಸ ಮಾಡುವ ಮಹಿಳೆಯರಿಗೆ ಸುರಕ್ಷತೆ ಸೇರಿದಂತೆ ಎಲ್ಲ ಬಗೆಯ ನೆರವು ಒದಗಿಸುವ ನಿಟ್ಟಿನಲ್ಲಿ ಅ ಧಿಕಾರಿಗಳು ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದರು.
ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ಕಟ್ಟುನಿಟ್ಟಿನ ಕಾನೂನು ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಪೊಲೀಸ್ ಇಲಾಖೆಗೆ ನಿರ್ದೇಶನ ನೀಡಿದ ಅವರು, ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಮಹಿಳೆಗೆ ಹಾಗೂ ಪೋಕ್ಸೋ ಪ್ರಕರಣಗಳಿಗೆ ಸಂಬಂಧಿಸಿದಂತೆ ಬಾಲಕಿಯರಿಗೆ ಒಂದೇ ಸೂರಿನಡಿ ವೈದ್ಯಕೀಯ, ಕಾನೂನು ನೆರವು ನೀಡುವ ಉದ್ಧೇಶದಿಂದ ಆರಂಭಿಸಲಾಗಿರುವ ಸಖೀ ಒನ್ ಸ್ಟಾಪ್ ಸೆಂಟರ್ ಸಮರ್ಪಕವಾಗಿ ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಮಾತನಾಡಿ, ಮಹಿಳೆಯರ ದೌರ್ಜನ್ಯ ಕುರಿತು ಸ್ಥಳೀಯ ಪೊಲೀಸರು ಸ್ಪಂದಿಸದಿದ್ದರೆ ಹಿರಿಯ ಅಧಿಕಾರಿಗಳ ಗಮನಕ್ಕೆ ತರಬೇಕು. ಕೆಲವು ಪ್ರಕರಣಗಳಲ್ಲಿ ಕಾನೂನು ಸೇವಾ ಪ್ರಾಧಿಕಾರದಿಂದ ನೆರವು ಒದಗಿಸಲಾಗಿದೆ. ಮಹಿಳೆಯರ ಮೇಲಿನ ದೌರ್ಜನ್ಯ ಅಥವಾ ಆರೋಗ್ಯ ಸಂಬಂಧ ಏನೇ ದೂರು ಬಂದರೆ ತ್ವರಿತವಾಗಿ ಸ್ಪಂದಿಸುವ ಕೆಲಸ ಜಿಲ್ಲಾಡಳಿತ ಮಾಡುತ್ತಿದೆ ಎಂದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಬಸವರಾಜ ವರವಟ್ಟಿ ಮಾತನಾಡಿ, 2021-22ನೇ ಸಾಲಿನಲ್ಲಿ 136 ಕೌಟುಂಬಿಕ ದೌರ್ಜನ್ಯ ಪ್ರಕರಣಗಳು ದಾಖಲಾಗಿದ್ದು, ಇದರಲ್ಲಿ ಸಮಾಲೋಚನೆ ಮೂಲಕ ಒಂದು ಪ್ರಕರಣ ಇತ್ಯರ್ಥಗೊಂಡಿದೆ. ಇನ್ನೊಂದು ಪ್ರಕರಣ ನ್ಯಾಯಾಲಯದಲ್ಲಿ ಇತ್ಯರ್ಥಗೊಂಡಿದೆ ಎಂದು ವಿವರಿಸಿದರು.
ಡಿಸಿಪಿ ಸ್ನೇಹಾ ಪಿ.ವಿ., ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಸ್.ವಿ. ಮುನ್ಯಾಳ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಎಲ್ಲ ತಾಲೂಕು ಮಟ್ಟದ ಅಧಿ ಕಾರಿಗಳು, ಮಹಿಳಾ ಕಲ್ಯಾಣ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ವಿವಿಧ ಸ್ವಯಂ ಸೇವಾ ಸಂಸ್ಥೆ ಪದಾಧಿಕಾರಿಗಳು ಇದ್ದರು.