ನಂಜನಗೂಡು: ವೃದ್ಧಾಶ್ರಮ ಹೆಚ್ಚಳಕ್ಕೆ ಇಂದಿನ ವಿಭಕ್ತ ಕುಟುಂಬಗಳೇ ಕಾರಣ ಎಂದು ನ್ಯಾಯಾಧೀಶೆ ಡಿ.ಎಸ್. ವಿನುತಾ ವಿಷಾದಿಸಿದರು. ಮಿನಿ ವಿಧಾನಸೌಧದಲ್ಲಿ ಮಂಗಳವಾರ ಆಯೋಜಿಸಿದ್ದ ಹಿರಿಯ ನಾಗರಿಕರ ದಿನಾಚರಣೆಯಲ್ಲಿ ಮಾತನಾಡಿದರು.
ಹಿಂದೆ ಕೂಡು ಕುಟುಂಬದಿಂದ ಪ್ರೀತಿ, ವಿಶ್ವಾಸ, ಹೊಂದಾಣಿಕೆ ಇತ್ತು. ಇದೀಗ ವಿಭಕ್ತ ಕುಟುಂಬಗಳಿಂದ ಮನಸ್ಸುಗಳು ಒಡೆಯುತ್ತಿವೆ. ಹಿರಿಯರನ್ನು ಗೌರವಿದಿಂದ ಕಾಣಬೇಕು ಎಂದರು. ನ್ಯಾಯಾಧೀಶ ಗಣಪತಿ ಪ್ರಶಾಂತ ಮಂಜೇಶ್ವರ ಮಾತನಾಡಿ, ಹಿರಿಯರ ಅನುಭವದ ಜ್ಞಾನಾಮೃತ ಕಿರಿಯರ ಪಾಲಿನ ಕಾಮಧೇನು ಇದ್ದಹಾಗೆ ಎಂದು ಬಣ್ಣಿಸಿದರು.
ವಕೀಲ ಎಂ.ಜೆ. ಸೇತುರಾವ್, ಹಿರಿಯರು ವೃದ್ಧಾಪ್ಯದಲ್ಲಿ ಸುಖ ಜೀವನ ನಡೆಸುವಂತಹ ವಾತಾವರಣ ಸೃಷ್ಟಿಸಬೇಕು ಎಂದರು. ತಾಲೂಕು ಶಿಶು ಅಭಿವೃದ್ಧಿ ಇಲಾಖೆ ಅಧಿಕಾರಿ ಗೀತಾಲಕ್ಷ್ಮೀ, ಸಾಮಾಜಿಕ ಭದ್ರತಾ ಯೋಜನೆಗಳ ಸೌಲಭ್ಯ ಕುರಿತು ಮಾಹಿತಿ ನೀಡಿದರು. ತಾಲೂಕು ವೈದ್ಯಾಧಿಕಾರಿ ಕಲಾವತಿ ಮಾತನಾಡಿ, ಮೈಸೂರು ಜಿಲ್ಲೆ ಮೇಟಗಳ್ಳಿಯಲ್ಲಿ ಹಿರಿಯರಿಗಾಗಿ ತೆರೆಯಲಾಗಿರುವ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ ಪಡೆಯಬಹುದು ಎಂದರು.
ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಮಹೇಶ್ ಕುಮಾರ್, ನ್ಯಾಯಾಧೀಶ ಶ್ರೀನಾಥ್, ವಕೀಲರ ಸಂಘದ ಅಧ್ಯಕ್ಷ ಗಿರಿರಾಜ್, ಕಾರ್ಯದರ್ಶಿ ನಾಗೇಂದ್ರಪ್ಪ, ಸರ್ಕಾರಿ ಅಭಿಯೋಜಕ ಆರ್. ಪುರುಷೋತ್ತಮ್, ಅಪರ ಸರ್ಕಾರಿ ವಕೀಲ ರಾಚಪ್ಪ, ವಕೀಲ ಯೋಗೇಂದ್ರ ಇತರರಿದ್ದರು.
ಲಂಚ ನೀಡಿದರೆ ಮಾತ್ರ ಚಿಕಿತ್ಸೆ: ಕಾರ್ಯಕ್ರಮದಲ್ಲಿ ತಾಲೂಕು ಆರೋಗ್ಯಾಧಿಕಾರಿ ಕಲಾವತಿ ಉಚಿತ ಚಿಕಿತ್ಸೆ ಕುರಿತು ಮಾತನಾಡುತ್ತಿದ್ದಾಗ ಸಭೆಯಲ್ಲಿದ್ದ ತಾಲೂಕಿನ ಕೃಷ್ಣಾಪುರದ ವೃದ್ಧ ಬಸವಣ್ಣ (82) ಎದ್ದು ನಿಂತು, “ತಾವು ಕಳೆದ ತಿಂಗಳು ಮೇಟಗಳ್ಳಿಯ ಆಸ್ಪತ್ರೆಗೆ ಹೋಗಿದ್ದಾಗ 480 ರೂ. ಪಡೆದು ಚಿಕಿತ್ಸೆ ನೀಡಿದರು.
ಚಿಕಿತ್ಸೆಗಾಗಿ ಲಂಚಕ್ಕೆ ಬೇಡಿಕೆಯಿಟ್ಟಿದ್ದರು’ ಎಂದು ದೂರಿದರು. ಆದರೆ, ನೀವು ಉಚಿತ ಚಿಕಿತ್ಸೆ ಬಗ್ಗೆ ಮಾತನಾಡುತ್ತಿದ್ದೀರಿ, ಇದೇ ನಿಮ್ಮ ಉಚಿತ ಚಿಕಿತ್ಸೆ ಎಂದು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಧೀಶರು, ನೀವು ನೇರವಾಗಿ ಜಿಲ್ಲಾ ಕಾನೂನು ಪ್ರಾಧಿಕಾರಕ್ಕೆ ಹೋಗಿ ದೂರು ದಾಖಲಿಸಿ ಎಂದು ಸಲಹೆ ನೀಡಿದರು.