Advertisement

ಎಲ್ಲಾ ಅವರಿಗೇ ಬಿಟ್ಟಿದ್ದು; ಮಕ್ಕಳ ಚಿತ್ರಜೀವನದ ಕುರಿತು ರವಿಚಂದ್ರನ್‌

12:31 PM Nov 27, 2017 | Sharanya Alva |

ರವಿಚಂದ್ರನ್‌ ಅವರು “ಕುರುಕ್ಷೇತ್ರ’ದಲ್ಲಿ ನಟಿಸಿ ಬೆಂಗಳೂರಿಗೆ ಬಂದು 40 ದಿನಗಳಾಗಿವೆ. ಆ ಚಿತ್ರದಲ್ಲಿನ ಕೃಷ್ಣನ ಪಾತ್ರಕ್ಕಾಗಿ ಮೀಸೆ ಬೋಳಿಸಿದ್ದರು ಅವರು. ಈಗ ಗಡ್ಡ-ಮೀಸೆ ಎರಡೂ ಬಂದಿದೆ. ಅಷ್ಟೇ ಅಲ್ಲ, “ಕುರುಕ್ಷೇತ್ರ’ಕ್ಕೂ ಮುನ್ನ ಶುರು ಮಾಡಿ ಹೋಗಿದ್ದ “ರಾಜೇಂದ್ರ ಪೊನ್ನಪ್ಪ’ ಚಿತ್ರವನ್ನು ಅವರು ಮತ್ತೊಮ್ಮೆ ಶುರು ಮಾಡಿದ್ದಾರೆ. ಇನ್ನು ಮೂರು ತಿಂಗಳಲ್ಲಿ ಆ ಚಿತ್ರವನ್ನು ಮುಗಿಸುವುದಷ್ಟೇ ಅಲ್ಲ, ಆ ಚಿತ್ರದಲ್ಲಿ ಹಳೆಯ ರವಿಚಂದ್ರನ್‌ ಅವರನ್ನು ನೋಡುವುದಾಗಿ ರವಿಚಂದ್ರನ್‌ ಹೇಳುತ್ತಾರೆ.

Advertisement

 “ರವಿಚಂದ್ರನ್‌ ಇತ್ತೀಚೆಗೆ ಕಮರ್ಷಿಯಲ್‌ ಚಿತ್ರಗಳನ್ನು ಮಾಡುತ್ತಿಲ್ಲ ಅಂತ ಮಾತು ಬರುತ್ತಲೇ ಇತ್ತು. ಅದಕ್ಕೇ ಕೈಗೆತ್ತಿಕೊಂಡ ಚಿತ್ರ ಈ “ರಾಜೇಂದ್ರ ಪೊನ್ನಪ್ಪ’. ಇದು “ಮಲ್ಲ’ಗಿಂಥ ಕಮರ್ಷಿಯಲ್‌ ಆಗಿರುತ್ತದೆ. ಇಲ್ಲಿ ಕ್ರಿಮಿನಲ್‌ ಲಾಯರ್‌ ಪಾತ್ರ ನನ್ನದು. ಇಲ್ಲಿ ನಾಯಕನ ಜಾಣ್ಮೆಯೇ ಹೈಲೈಟ್‌. ಈಗಾಗಲೇ ಒಂದು ಹಂತದ ಚಿತ್ರೀಕರಣ ಮುಗಿದಿದೆ. 

ಮಧ್ಯೆ ಗಡ್ಡ-ಮೀಸೆ ತೆಗೆದಿದ್ದರಿಂದ, ಅದು ಬರುವವರೆಗೂ ಕಾಯಬೇಕಾಯ್ತು. ಮೊದಲು ಗಡ್ಡ ಬಂತು. ಮೀಸೆ ಸ್ವಲ್ಪ ಲೇಟ್‌ ಆಯ್ತು. ಈಗ ಮೀಸೆ ಸಹ ಬಂದಿದೆ. ಕಂಟಿನ್ಯುಟಿಗೆ ಯಾವುದೇ ಸಮಸ್ಯೆ ಇಲ್ಲ’ ಎನ್ನುತ್ತಾರೆ ರವಿಚಂದ್ರನ್‌.

ಇನ್ನು ಅವರ ಮಕ್ಕಳಾದ ಮನು ಮತ್ತು ವಿಕ್ಕಿಯ ಚಿತ್ರಜೀವನದ ಬಗ್ಗೆ ರವಿಚಂದ್ರನ್‌ ಏನು ಹೇಳುತ್ತಾರೆ ಎಂದು ಕೇಳಿದರೆ, ಎಲ್ಲಾ ಅವರಿಗೇ ಬಿಟ್ಟಿದ್ದು, ತಾನು ತಲೆ ಹಾಕುವುದಿಲ್ಲ ಎನ್ನುತ್ತಾರೆ ರವಿಚಂದ್ರನ್‌. “ನಾನು ಅವರ ಕೆರಿಯರ್‌ನಲ್ಲಿ ಇಂಟರ್‌ಫಿಯರ್‌ ಆಗಲ್ಲ. ಎಲ್ಲಾ ಅವರಿಗೆ ಬಿಟ್ಟಿದ್ದು. ಕಥೆ ಕೇಳ್ಳೋಕೆ, ಸಿನಿಮಾ ಒಪ್ಪೋಕೆ ಅವರು ಸ್ವತಂತ್ರರು. ಅವರು ಬಂದು ಚಿತ್ರ ಮಾಡಿ ಅಂದರೂ ಖುಷಿ, ಇಲ್ಲವಾದರೂ ಓಕೆ. ಒಂದರ್ಥದಲ್ಲಿ ಅದು ಸರಿ. ನಾನು ಅವರಿಗೆ ಸಿನಿಮಾ ಮಾಡಿಕೊಟ್ಟರೆ ಅದು ನನ್ನ ಸಿನಿಮಾ ಅಂತ ಆಗತ್ತೆ. ಅವರೇ ಸ್ವತಂತ್ರರಾಗಿ ಮಾಡಿದರೆ, ಅವರಿಗೆ ಸೋಲು, ಗೆಲುವು, ವಿಮರ್ಶೆ ಎಲ್ಲವೂ ಅರ್ಥವಾಗುತ್ತೆ. ಹಾಗಾಗಿ ಅವರಿಗೇ ಅರ್ಥವಾಗಲಿ’ ಎನ್ನುತ್ತಾರೆ ರವಿಚಂದ್ರನ್‌.

ಸರಿ, ಆದರೂ ಸಲಹೆ-ಸೂಚನೆಗಳನ್ನೇನಾದರೂ ರವಿಚಂದ್ರನ್‌ ಅವರು ಮನು ಮತ್ತು ವಿಕ್ಕಿಗೆ ಕೊಡುತ್ತಾರಾ? ಎಂದರೆ, “ನನ್ನ 35 ವರ್ಷಗಳಲ್ಲಿ ಕೆರಿಯರ್‌ನಲ್ಲಿ ನಾನು ಕಲಿತಿರುವ ಬೇಸಿಕ್‌ ಮತ್ತು ದೊಡ್ಡ ಪಾಠ ಎಂದರೆ, ಸಲಹೆ ಕೊಡುವುದು ಸೂಕ್ತವಲ್ಲ ಎನ್ನುವುದು. ಯಾರಿಗಾದರೂ ಸಲಹೆಯ ಅವಶ್ಯಕತೆ ಇರುವವರೆಗೂ, ಸಲಹೆ ಕೊಡುವುದು ವೇಸ್ಟ್‌. ನೀವಾಗಿ ಬಂದು ಸಲಹೆ ಕೇಳಿದರೆ, ಅದಕ್ಕೊಂದು ಬೆಲೆ ಇರುತ್ತೆ. ನಾನು ಮೇಲೆ ಬಿದ್ದು ಸಲಹೆ ಕೊಟ್ಟರೆ, ಅದಕ್ಕೆ ಬೆಲೆ ಇರುವುದಿಲ್ಲ. ಹಾಗಾಗಿ ನಾನು ಸಲಹೆ ಕೊಡಲ್ಲ. ಮಕ್ಕಳ ವಿಷಯದಲ್ಲೂ ಅಷ್ಟೇ. ನಾನು ಸಲಹೆ ಕೊಟ್ಟರೆ ಅವರಿಗೆ ಬೇಸರ ಆಗಬಹುದು. 

Advertisement

ಅವರಿಗೆ ಬೇರೆ ತರಹ ಅರ್ಥವಾಗಬಹುದು. ಮನೆಯಲ್ಲಿ ಮೂರ್ಮೂರು ಹೀರೋಗಳು ಇದ್ದರೆ ಇದೇ ಹಿಂಸೆ. ನಾವು ಸಲಹೆ ಅಂತ ಕೊಡಬಹುದು. ಆದರೆ, ಅದು ಹಸ್ತಕ್ಷೇಪ ಅನಿಸಬಾರದು. ನಮ್ಮಪ್ಪ ನಮ್ಮನ್ನು ಯಾವುದಕ್ಕೂ ಬಿಡುವುದಿಲ್ಲ ಎನ್ನಬಾರದು. ಹಾಗಾಗಿ ನಾನು ತಲೆ ಹಾಕುವುದಕ್ಕೆ ಹೋಗುವುದಿಲ್ಲ. ನನ್ನ ಸಿನಿಮಾಗಳಲ್ಲಿ ಬಿಝಿ ಇದ್ದೇನೆ’ ಎನ್ನುತ್ತಾರೆ ರವಿಚಂದ್ರನ್‌.

 ಹೀಗೆ ತಮ್ಮ ಕೆಲಸದಲ್ಲಿ ತೊಡಗಿಸಿಕೊಂಡಿರುವ ರವಿಚಂದ್ರನ್‌, ಸದ್ಯ “ರಾಜೇಂದ್ರ ಪೊನ್ನಪ್ಪ’ ಚಿತ್ರದಲ್ಲಿ ಬಿಝಿಯಾಗಿದ್ದಾರೆ. ಅದರ ಮಧ್ಯೆ ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿರುವ “ಸಿಂಗರ್‌ – ಜ್ಯೂನಿಯರ್’ನಲ್ಲಿ ಅವರು ತೀರ್ಪುಗಾರರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. “ಬಕಾಸುರ’ ಡಬ್ಬಿಂಗ್‌ ಮಾಡಬೇಕಾಗಿದೆ. ಇನ್ನು “ಕುರುಕ್ಷೇತ್ರ’ದಲ್ಲಿ ಕೆಲಸ ಮುಗಿಸಿರುವುದಷ್ಟೇ ಅಲ್ಲ, ಆ ಚಿತ್ರದಲ್ಲಿ ನಟಿಸಿದ ಖುಷಿಯನ್ನು ಹಂಚಿಕೊಳ್ಳುತ್ತಾರೆ. 

“ಮೂರು ದಿನ ಮೇಕಪ್‌ ಟೆಸ್ಟ್‌ಗೇ ಆಯ್ತು. ಅಲ್ಲಿಯವರೆಗೂ ನಾನು ಹೊರಗೇ ಬಂದಿರಲಿಲ್ಲ. ಮೂರು ದಿನ ಒಳಗೆ ಕುಳಿತು ಒಂದಿಷ್ಟು ಪ್ರಯತ್ನ ಮಾಡಿದೆ. ಕೊನೆಗೆ ನಾಲ್ಕನೇ ದಿನ ಎಂಟ್ರಿ ಕೊಟ್ಟೆ. ಸೆಟ್‌ನಲ್ಲಿ ಇರೋರೆಲ್ಲಾ  ಭಕ್ತಿಯಿಂದ ಎದ್ದರು. ಬಹಳ ಖರ್ಚು ಮಾಡಿ ಚಿತ್ರ ಮಾಡುತ್ತಿದ್ದಾರೆ. ಬಹಳ ದೊಡ್ಡ ಚಿತ್ರವಾಗುತ್ತಿದೆ. ಬಹುಶಃ “ಶಾಂತಿ ಕ್ರಾಂತಿ’ ನಂತರ ದೊಡ್ಡ ಕ್ಯಾನ್ವಾಸ್‌ನ ಚಿತ್ರವದು’ ಎಂದು ಹೇಳುತ್ತಾರೆ ರವಿಚಂದ್ರನ್‌.

Advertisement

Udayavani is now on Telegram. Click here to join our channel and stay updated with the latest news.

Next