Advertisement

ಕ್ರೇಯಾನ್‌ ಪ್ರಪಂಚ!

10:16 AM Jan 10, 2020 | mahesh |

ಕ್ರೇಯಾನ್‌ಗಳಲ್ಲಿ ಚಿತ್ರ ಬಿಡಿಸದ ಮಕ್ಕಳು ಈ ದಿನಗಳಲ್ಲಿ ಸಿಗುವುದು ವಿರಳ. ಚಿತ್ರ ಬಿಡಿಸಿ ಅದರೊಳಗೆ ಕ್ರೇಯಾನ್‌ ಬಣ್ಣ ತುಂಬುವುದೆಂದರೆ ಮಕ್ಕಳಿಗೆ ತುಂಬಾ ಇಷ್ಟ. ಹಾಗಿದ್ದರೆ ಕ್ರೇಯಾನ್‌ಗಳ ಕುರಿತಾದ ಈ ಬರಹವೂ ಇಷ್ಟವಾಗುತ್ತದೆ.

Advertisement

ಇಂದು ವಿವಿಧ ಗಾತ್ರದ ಕ್ರೇಯಾನ್‌ಗಳ ಪ್ಯಾಕೆಟ್‌ಗಳು ಅಂಗಡಿಗಳಲ್ಲಿ ಸಿಗುತ್ತವೆ. ಹನ್ನೆರಡರಿಂದ ನೂರು ಬಗೆಯ ಬಣ್ಣಗಳವರೆಗೆ ಮಕ್ಕಳು ಆರಿಸಿಕೊಳ್ಳಬಹುದು. ಆದರೆ ಬಹಳ ಹಿಂದೆ ಕ್ರೇಯಾನ್‌ಗಳ ಆವಿಷ್ಕಾರವಾದ ದಿನಗಳಲ್ಲಿ ಅದು ಕೇವಲ ಒಂದೇ ಬಣ್ಣದಲ್ಲಿ ಸಿಗುತ್ತಿತ್ತು. ಯಾವ ಬಣ್ಣ ಊಹಿಸಬಲ್ಲಿರಾ? ಕಪ್ಪು ಬಣ್ಣ! ಮುಂದೆ 8 ಬಣ್ಣಗಳಲ್ಲಿ ಕ್ರೇಯಾನ್‌ ಸಿಗತೊಡಗಿದವು. ಅಂದಿನ ಕಾಲದಲ್ಲಿ ಕ್ರೇಯಾನ್‌ಗಳನ್ನು ಮಕ್ಕಳು ಬಳಸುತ್ತಿರಲಿಲ್ಲ. ಕಾರ್ಖಾನೆಗಳಲ್ಲಿ ಮರ, ಕಬ್ಬಿಣ ಮುಂತಾದ ಮೇಲ್ಮೈಯಲ್ಲಿ ಬರೆಯಲು, ಗುರುತು ಮಾಡಲು ಕ್ರೇಯಾನ್‌ಗಳಿಂದ ಮಾತ್ರ ಸಾಧ್ಯವಿತ್ತು. 1900ರ ಪ್ರಾರಂಭದಲ್ಲಿ ಎಡ್ವಿನ್‌ ಬಿನ್ನಿ ಮತ್ತು ಹೆರಾಲ್ಡ್‌ ಸ್ಮಿತ್‌ ಎಂಬಿಬ್ಬರು ಸಹೋದರರು ಮೊದಲ ಬಾರಿಗೆ ಮಕ್ಕಳಿಗೆಂದೇ ಆಕರ್ಷಕ ಬಣ್ಣಗಳಲ್ಲಿ ಕ್ರೇಯಾನ್‌ಗಳನ್ನು ತಯಾರಿಸಿ ಮಾರುಕಟ್ಟೆಗೆ ಬಿಡುಗಡೆಗೊಳಿಸಿದರು.

ಚಾಕ್‌ಪೀಸ್‌ನಿಂದ ಕ್ರೇಯಾನ್‌ ತನಕ…
1864ರಲ್ಲಿ ಎಡ್ವಿನ್‌ ಅವರ ತಂದೆ ಜೋಸೆಫ್ ಬಿನ್ನಿ ರಾಸಾಯನಿಕ ಕಾರ್ಖಾನೆಯೊಂದನ್ನು ತೆರೆದರು. 1885ರಲ್ಲಿ ಜೋಸೆಫ್ಅವರ ನಂತರ ಅವರ ಮಕ್ಕಳಾದ ಎಡ್ವಿನ್‌ ಮತ್ತು ಜೋಸೆಫ್ ಕಾರ್ಖಾನೆಯ ಉಸ್ತುವಾರಿಯನ್ನು ವಹಿಸಿಕೊಂಡರು. ಅವರು ಬಹಳ ಮಹತ್ವಾಕಾಂಕ್ಷಿಗಳಾಗಿದ್ದರು. ಅದುವರೆಗೂ ಸಂಸ್ಥೆ ಕಾರ್ಖಾನೆಗಳಿಗೆ ಬೇಕಾಗುವ ರಾಸಾಯನಿಕ ಉತ್ಪನ್ನಗಳನ್ನು ತಯಾರಿಸುತ್ತಿದ್ದರು. ಆದರೆ ಸಹೋದರರಿಬ್ಬರಿಗೂ ತಮ್ಮ ಉದ್ಯಮವನ್ನು ವಿಸ್ತರಿಸುವ ಯೋಚನೆ ಇತ್ತು, ಯೋಜನೆಯೂ ಇತ್ತು. ಅದರ ಅಂಗವಾಗಿ ಅವರು ಶಾಲೆಗಳಲ್ಲಿ ಹಲಗೆಗಳ ಮೇಲೆ ಬರೆಯಲು ಬಳಸುವ ಧೂಳು ಉದುರದ ಚಾಕ್‌ಪೀಸ್‌ಗಳನ್ನು ತಯಾರಿಸಲು ಶುರುಮಾಡಿದರು. ಅವರ ಮುಂದಿನ ಆವಿಷ್ಕಾರ ಕ್ರೇಯಾನ್‌ ಆಗಿತ್ತು.

400 ಬಣ್ಣಗಳು
ಎಡ್ವಿನ್‌ ಹಾಗೂ ಹ್ಯಾರೋಲ್ಡ್‌ ಅವರ ಸಂಸ್ಥೆ “ಕ್ರೇಯೋಲಾ’ ಇದುವೆರಗೂ 400ಕ್ಕೂ ಅಧಿಕ ಬಣ್ಣಗಳ ಕ್ರೇಯಾನ್‌ಗಳನ್ನು ತಯಾರಿಸಿದೆ. ವಿವಿಧ ಬಗೆಯ ಸುವಾಸನೆ ಬೀರುವ, ಕತ್ತಲಲ್ಲಿ ಹೊಳೆಯುವ, ಬಟ್ಟೆಗಳಿಗೆ ಮೆತ್ತಿಕೊಳ್ಳದ ಹೀಗೆ ನಾನಾ ಗುಣವಿಶೇಷಗಳುಳ್ಳ ಕ್ರೇಯಾನ್‌ಗಳನ್ನೂ ಅವರ ಸಂಸ್ಥೆ ತಯಾರಿಸಿದೆ. ಇಂದು ನೂರಾರು ಕಂಪನಿಗಳು ಕ್ರೇಯಾನ್‌ ವ್ಯಾಪಾರದಲ್ಲಿ ತೊಡಗಿವೆ.

– ಹರ್ಷವರ್ಧನ್‌ ಸುಳ್ಯ

Advertisement
Advertisement

Udayavani is now on Telegram. Click here to join our channel and stay updated with the latest news.

Next