ಮುಂಬಯಿ: ಟ್ರಾನ್ಸ್ ಹಾರ್ಬರ್ ಲಿಂಕ್ (MTHL) ಅಟಲ್ ಸೇತುವಿನಲ್ಲಿ ನವಿ ಮುಂಬೈನ ಉಲ್ವೆ ಕಡೆಗೆ ನಿರ್ಗಮನ ಟಾರ್ ರಸ್ತೆಯಲ್ಲಿ ಬಿರುಕುಗಳು ಕಾಣಿಸಿಕೊಂದಿರುವುದು ಕಂಡು ಬಂದಿದೆ. ದೇಶದ ಅತಿ ಉದ್ದದ ಸಮುದ್ರ ಸೇತುವೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಅಟಲ್ ಸೇತುವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಐದು ತಿಂಗಳ ಹಿಂದೆಯಷ್ಟೇ ಉದ್ಘಾಟಿಸಿದ್ದರು.
ಹೊಸದಾಗಿ ಉದ್ಘಾಟನೆಗೊಂಡ ಸೇತುವೆಯ ಬಿರುಕುಗಳ ಬಗ್ಗೆ ಕಾಂಗ್ರೆಸ್ ಪಕ್ಷ ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಆರೋಪವನ್ನು ಮಾಡಿದೆ. ಮಹಾರಾಷ್ಟ್ರ ಸರ್ಕಾರದ ಅಧಿಕಾರಿಗಳು ಅಟಲ್ ಸೇತು ಸಂಪರ್ಕಿಸುವ ಮಾರ್ಗದಲ್ಲಿ ಸಣ್ಣ ಬಿರುಕುಗಳು ಕಂಡುಬಂದಿವೆ ಮತ್ತು ಪಾದಚಾರಿ ಮಾರ್ಗವು ಮುಖ್ಯ ಸೇತುವೆಯ ಭಾಗವಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷ ನಾನಾ ಪಟೋಲೆ ಶುಕ್ರವಾರ ಘಟನಾ ಸ್ಥಳಕ್ಕೆ ಭೇಟಿ ನೀಡಿ ಬಿರುಕುಗಳನ್ನು ಪರಿಶೀಲಿಸಿದರು. ಕಾರ್ಮಿಕರು ಬಿರುಕುಗಳನ್ನು ಟಾರ್ ಹಾಕಿ ಮುಚ್ಚಿದ್ದಾರೆ.
ಅಟಲ್ ಸೇತು ಸೇತುವೆಯ ಮುಖ್ಯ ಭಾಗದಲ್ಲಿ ಯಾವುದೇ ಬಿರುಕು ಇಲ್ಲದಿರುವುದು ಗಮನಕ್ಕೆ ಬಂದಿದೆ ಆದರೆ ವದಂತಿಗಳು ಹರಡುತ್ತಿವೆ. ದಯವಿಟ್ಟು ವದಂತಿಗಳನ್ನು ನಂಬಬೇಡಿ. ಅಟಲ್ ಸೇತುಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಸಣ್ಣಪುಟ್ಟ ಬಿರುಕುಗಳು ಕಂಡುಬಂದಿವೆ. ಹೇಳಲಾದ ಕಾಲುದಾರಿ ಮುಖ್ಯ ಸೇತುವೆಯ ಭಾಗವಾಗಿರದೆ ಸೇತುವೆಯನ್ನು ಸಂಪರ್ಕಿಸುವ ಸರ್ವಿಸ್ ರಸ್ತೆಯಾಗಿದೆ. ಯೋಜನೆಯಲ್ಲಿನ ರಚನಾತ್ಮಕ ದೋಷಗಳಿಂದಾಗಿ ಬಿರುಕುಗಳು ಉಂಟಾಗಿಲ್ಲ ಮತ್ತು ಸೇತುವೆಯ ರಚನೆಗೆ ಯಾವುದೇ ಅಪಾಯವನ್ನು ಉಂಟುಮಾಡುವುದಿಲ್ಲ ಎಂಬುದನ್ನು ಗಮನಿಸುವುದು ಬಹಳ ಮುಖ್ಯ ಎಂದು ಮುಂಬೈ ಮಹಾನಗರ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ( MMRDA) ಹೇಳಿಕೆ ನೀಡಿದೆ.
17,840 ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಲಾದ MTHL ಅನ್ನು ಈ ವರ್ಷದ ಜನವರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಿದ್ದರು.