ಬೆಂಗಳೂರು: ಆನೇಕಲ್ ತಾಲೂಕಿನ ಅತ್ತಿಬೆಲೆ-ಹೊಸೂರು ಗಡಿಯಲ್ಲಿರುವ ಗೋದಾಮಿನಲ್ಲಿ ಶನಿವಾರ ಸಂಜೆ ಪಟಾಕಿ ಬಾಕ್ಸ್ ಗಳನ್ನು ಲಾರಿಯಿಂದ ಇಳಿಸುವ ವೇಳೆ ಆಕಸ್ಮಿಕ ಬೆಂಕಿ ಕಾಣಿಸಿಕೊಂಡು ಭೀಕರ ಅವಘಡ ಸಂಭವಿಸಿದ್ದು ಕನಿಷ್ಠ 13 ಮಂದಿ ಸಜೀವ ದಹನಗೊಂಡಿದ್ದಾರೆ.
ಅಗ್ನಿ ಶಾಮಕ ದಳದ ಹಲವು ವಾಹನಗಳು ಸ್ಥಳಕ್ಕಾಗಮಿಸಿದ್ದು ಬೆಂಕಿ ನಂದಿಸಲು ಹರಸಾಹಸ ಪಟ್ಟವು. ರಾಷ್ಟ್ರೀಯ ಹೆದ್ದಾರಿ 44 ರ ಬದಿಯಲ್ಲೇ ಘಟನೆ ನಡೆದಿದ್ದು ಭಾರೀ ಹೊಗೆ ಆವರಿಸಿಕೊಂಡಿತ್ತು.ಜನರನ್ನು ನಿಯಂತ್ರಿಸಲು ಪೊಲೀಸರು ಕಾರ್ಯಾಚರಣೆಗಿಳಿದಿದ್ದರು.
ಸ್ಥಳದಲ್ಲಿದ್ದ 20 ಮಂದಿ ಕಾರ್ಮಿಕರ ಪೈಕಿ ನಾಲ್ಕು ಮಂದಿ ಬಚಾವ್ ಆಗಿದ್ದು, ಈಗಾಗಲೇ 13 ಮಂದಿಯ ಶವಗಳು ಪತ್ತೆಯಾಗಿವೆ. ಇನ್ನೂ ಮೂವರಿಗಾಗಿ ಶೋಧ ಕಾರ್ಯ ನಡೆಸಲಾಗುತ್ತಿದೆ.
ಪಟಾಕಿ ಗೋದಾಮು ಸುಟ್ಟು ಭಸ್ಮವಾಗಿದ್ದು, ಅಕ್ಕಪಕ್ಕದ ಕೆಲವು ಅಂಗಡಿಗಳು ಮತ್ತು 9 ವಾಹನಗಳು ಜಖಂಗೊಂಡಿವೆ.
ಅವಘಡದಲ್ಲಿ ಪಟಾಕಿ ಗೋದಾಮಿನ ಮಾಲಕ ಸೇರಿ ಐವರು ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲು ಮಾಡಿರುವ ಬಗ್ಗೆ ವರದಿಯಾಗಿದೆ. ಮೃತರ ವಿವರ ಇನ್ನಷ್ಟೇ ತಿಳಿದುಬರಬೇಕಿದೆ. ಹೆಚ್ಚಿನ ವಿವರ ನಿರೀಕ್ಷಿಸಲಾಗುತ್ತಿದೆ.