ಅಫಜಲಪುರ: ಪಟ್ಟಣದ ಹೊರವಲಯದಲ್ಲಿರುವ ಬಿರುಕು ಬಿಟ್ಟ ಕೆರೆ ಒಡ್ಡು ಸರಿಪಡಿಸದಿದ್ದಲ್ಲಿ ಒಡ್ಡು ಒಡೆದು ಜಮೀನುಗಳು ಹಾಳಾಗುವುದಲ್ಲದೇ ಅಂತರ್ಜಲಮಟ್ಟ ಕುಸಿಯುವುದು, ಹೀಗಾಗಿ ಅಧಿಕಾರಿಗಳು ಕೂಡಲೇ ದುರಸ್ತಿ ಕಾಮಗಾರಿ ಕೈಗೊಳ್ಳಬೇಕು ಎಂದು ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ ಹೇಳಿದರು.
“ಹರ್ ಘರ್ ತಿರಂಗಾ’ ಅಭಿಯಾನದ ಬಳಿಕ ಪಟ್ಟಣದ ಹೊರ ವಲಯದಲ್ಲಿರುವ ಕೆರೆಗೆ ಭೇಟಿ ನೀಡಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಪಟ್ಟಣದ ಜನರ ಜೀವನಾಡಿಯಾಗಿರುವ ಅಫಜಲಪುರ ಕೆರೆ ಒಡ್ಡು ಪ್ರತಿ ವರ್ಷ ಮಳೆಗಾಲ ಬಂದ ಸಂದರ್ಭದಲ್ಲಿ ಬಿರುಕು ಬಿಟ್ಟು ಒಡೆಯುವ ಹಂತಕ್ಕೆ ಬಂದು ನಿಲ್ಲುತ್ತದೆ. ಈಗಾಗಲೇ ನಮಗೆ ಬಂದ ಮಾಹಿತಿ ಪ್ರಕಾರ ಸುಮಾರು 65ರಿಂದ 80ಲಕ್ಷ ರೂ. ವರೆಗೆ ಕೆರೆ ದುರಸ್ತಿ ಕಾಮಗಾರಿಗಾಗಿ ಖರ್ಚು ಮಾಡಿರುವುದಾಗಿ ತಿಳಿದುಬಂದಿದೆ. ಆದರೂ ತಳಮಟ್ಟದಿಂದ ದುರಸ್ತಿ ಕಾರ್ಯವನ್ನು ಸಮರ್ಪಕವಾಗಿ ಮಾಡದ ಕಾರಣ ಕೆರೆ ಒಡೆಯುವ ಹಂತಕ್ಕೆ ಬಂದು ನಿಂತಿದೆ. ಈಗಾಗಲೇ ನಾನು ಸಂಬಂಧಪಟ್ಟ ಅಧಿಕಾರಿಗಳಿಗೆ ಕೆರೆ ದುರಸ್ತಿ ಕಾರ್ಯ ಕೈಗೊಳ್ಳಲು ಸೂಚಿಸಿದ್ದೇನೆ. ಈ ಕುರಿತು ಶಾಸಕರೊಂದಿಗೆ ಮಾತನಾಡಿದ್ದೇನೆ. ಹೀಗಾಗಿ ಕೂಡಲೇ ಈ ಕೆರೆ ದುರಸ್ತಿ ಕಾರ್ಯವನ್ನು ಅಧಿಕಾರಿಗಳು ವೈಜ್ಞಾನಿಕವಾಗಿ ಕೈಗೊಳ್ಳಬೇಕು ಎಂದರು.
ಜಿ.ಪಂ ಮಾಜಿ ಅಧ್ಯಕ್ಷ ನಿತೀನ್ ಗುತ್ತೇದಾರ, ಬಿಜೆಪಿ ತಾಲ್ಲೂಕು ಅಧ್ಯಕ್ಷ ಶೈಲೇಶ ಗುಣಾರಿ, ಮುಖಂಡರಾದ ಮಳೇಂದ್ರ ಡಾಂಗೆ, ಅಶೋಕ ಬಗಲಿ, ಬೀರಣ್ಣ ಕಲ್ಲೂರ, ಪಾಶಾ ಮಣೂರ, ಮಂಜೂರ್ ಅಹ್ಮದ್ ಅಗರಖೇಡ, ಚಂದ್ರಶೇಖರ ನಿಂಬಾಳ, ಮಲ್ಲಿಕಾರ್ಜುನ ನಿಂಗದಳ್ಳಿ, ದತ್ತಾತ್ರೇಯ ದೇವರನಾದಗಿ, ದೇವಿಂದ್ರ ಜಮಾದಾರ, ಶಂಕರ ಮ್ಯಾಕೇರಿ, ಶ್ರೀಶೈಲ ಬಳೂರ್ಗಿ, ಸುನೀಲ ಶೆಟ್ಟಿ, ಭೀಮರಾಯ ಕಲಶೆಟ್ಟಿ, ಸಿದ್ಧು ಮ್ಯಾಕೇರಿ, ತನ್ವೀರ ಮಣ್ಣೂರ, ಭಾಗೇಶ ಬೋರೆಗಾಂವ ಇತರರು ಇದ್ದರು.