ನಂಜನಗೂಡು: ತಾಲೂಕಾದ್ಯಂತ ಉಪ ಚುನಾವಣೆಯ ರಾಜಕಾರಣದ ಗಾಳಿ ಬೀಸಿದಾಗ ಕ್ಷೇತ್ರದ ಅಭಿವೃದ್ಧಿಗೆಂದು 600 ಕೋಟಿ ಹಣ ಬಿಡುಗಡೆಯಾಗಿದ್ದು ಆ ಹಣದಲ್ಲಿ ನಂಜನಗೂಡು ವಿಧಾನ ಸಭಾ ಕ್ಷೇತ್ರಾದ್ಯಂತ ನಡೆದ ಅಭಿವೃದ್ಧಿ ಕಾಮಗಾರಿಗಳ ಬಣ್ಣ ಎರಡೇ ತಿಂಗಳಲ್ಲಿ ಬಯಲಾಗತೊಡಗಿದೆ.
ತಾಲೂಕಿನ ಮಲ್ಕುಂಡಿ ಗ್ರಾಮದಲ್ಲಿ ಮುಖ್ಯಮಂತ್ರಿಗಳ ವಿಶೇಷ ಅನುದಾನದ ಅಡಿಯಲ್ಲಿ ನಡೆಸಿದ ಈ ಕಾಮಗಾರಿ ಅರವತ್ತೇ ದಿನದಲ್ಲಿ ಬಿರುಕು ಬಿಟ್ಟು ಇನ್ನು ಒಂದೇ ವರ್ಷದಲ್ಲಿ ನಡೆಯಬಹುದಾದ ಚುನಾವಣೆಗೆ ಮತ್ತೆ ದುರಸ್ಥಿಯಾಗಲೇ ಬೇಕಾದ ಹಂತ ತಲುಪಿದೆ.
ಉಪ ಚುನಾವಣೆಯ ಭರಾಟೆಯಲ್ಲಿ ಈ ಗ್ರಾಮದ ಚರಂಡಿ ಹಾಗೂ ಕಾಂಕ್ರೀಟ್ ರಸ್ತೆಗೆ 80 ಲಕ್ಷ ರೂ ಹಣ ಮಂಜೂರಿಯಾಗಿತ್ತು. ಕಾವೇರಿ ನೀರಾವರಿ ನಿಗಮದ ಹುಲ್ಲಹಳ್ಳಿಯ ನೀರಾವರಿ ವಿಭಾಗದ ನೇತೃತ್ವದಲ್ಲಿ ಈ ಕಾಮಗಾರಿ ಪ್ರಾರಂಭಿಸಿ ಚುನಾವಣೆಗೂ ಪೂರ್ವದಲ್ಲೇ ಕಾಮಗಾರಿ ಪೂರ್ಣಗೊಳಿಸಲಾಗಿತ್ತು.
ಕಾಮಗಾರಿಗಳೆಲ್ಲ ಹಣ ಮಾಡುವ ಕಾಮಗಾರಿಗಳಾಗಿದ್ದು ಕಳಪೆಯಿಂದ ಕೂಡಿದೆ ಎಂಬ ಅಂದಿನ ಆರೋಪಕ್ಕೆ ಈಗ ನೀರಾವರಿ ನಿಗಮದ ಉಸ್ತುವಾರಿಯಲ್ಲಿ ನಡೆದ ಕಾಮಗಾರಿ ಎರಡೇ ತಿಂಗಳಲ್ಲಿ ಸಾಕ್ಷಿ ದೊರೆತಿದೆ. ಈ ಕುರಿತು ನೀರಾವರಿ ಹೆಸರು ಹೇಳಿದ ಅಧಿಕಾರಿಯೊಬ್ಬರು ಮಾತನಾಡಿ, ನಾವೆಲ್ಲಿ ಉಸ್ತುವಾರಿ ಮಾಡಿದ್ದೆವೇ?
ಅಧಿಕಾರಸ್ಥರು ಹೇಳಿದವರಿಗೆ ಇಲಾಖೆಯ ಹೆಸರಿನಲ್ಲಿದ್ದ ಆ ಕಾಮಗಾರಿ ನೀಡಿದ್ದರು ಎಂದರು. ಕಾಮಗಾರಿ ಪೂರ್ಣಗೊಂಡ ಮೇಲೆ ಬಿಲ್ ಸಹ ಈಗಾಗಲೇ ಪಾವತಿಯಾಗಿದೆ ಎಂದು ಹೇಳಿದ್ದಾರೆ. ಕೂಡಲೇ ಸಂಬಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಬೇಕೆಂಬುದು ಸಾರ್ವಜನಿಕರ ಒತ್ತಾಯ.