Advertisement

BJP-JDS ಮೈತ್ರಿಯಲ್ಲಿ ಬಿರುಕು?: ದಿಲ್ಲಿಗೆ ದೌಡಾಯಿಸಿದ ಬಿ.ವೈ. ವಿಜಯೇಂದ್ರ

11:42 PM Oct 21, 2024 | Team Udayavani |

ಬೆಂಗಳೂರು: ಲೋಕ ಸಭಾ ಚುನಾವಣೆಯ ಬಳಿಕ ಬಿಜೆಪಿ- ಜೆಡಿಎಸ್‌ ಮೈತ್ರಿಯಲ್ಲಿ ಇದೇ ಮೊದಲ ಬಾರಿಗೆ ಗಂಭೀರ ಸ್ವರೂಪದ ಬಿರುಕು ಕಾಣಿಸಿಕೊಂಡಿದ್ದು, ಇದು ಭವಿಷ್ಯದ ಪಥಸೂಚಕವೇ? ಎಂಬ ಪ್ರಶ್ನೆ ಉದ್ಭವವಾಗಿದೆ.

Advertisement

ಮುಡಾ ಹಗರಣಕ್ಕೆ ಸಂಬಂಧಪಟ್ಟಂತೆ ಬಿಜೆಪಿ ಆಯೋಜಿಸಿದ್ದ ಪಾದಯಾತ್ರೆಗೆ ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಆಕ್ಷೇಪ ವ್ಯಕ್ತಪಡಿಸಿದಾಗ, ಮೊದಲ ಬಾರಿಗೆ ಮೈತ್ರಿಯಲ್ಲಿ ಅಪನಂಬಿಕೆ ಕಾಣಿಸಿಕೊಂಡಿತ್ತು. ಅದಾದ ಬಳಿಕ ಚನ್ನಪಟ್ಟಣ ಕದನ ಮೈತ್ರಿಯಲ್ಲಿ ಭಾರೀ ಮಟ್ಟದ ಅಸಮಾಧಾನಕ್ಕೆ ಕಾರಣವಾಗಿದೆ. ಕೇಂದ್ರ ನಾಯಕರ ಬೆಂಬಲದ ಕಾರಣಕ್ಕೆ ಕುಮಾರಸ್ವಾಮಿ ಕೈ ಮೇಲಾದಂತೆ ಭಾಸವಾಗುತ್ತಿದೆ. ಆದರೆ ಬಿಜೆಪಿಯ ಆಂತರ್ಯದಲ್ಲಿ ಮಾತ್ರ ಯೋಗೇಶ್ವರ್‌ ಪರವಾದ ಧೋರಣೆಯಿದೆ.

ಹೀಗಾಗಿ ಈ ಚುನಾವಣೆಯ ಫ‌ಲಿತಾಂಶ ಮೈತ್ರಿ ಬಾಳುವಿಕೆಯ ಬಗ್ಗೆ ಗಂಭೀರ ಪ್ರಶ್ನೆ ಎತ್ತುವ ಎಲ್ಲ ಲಕ್ಷಣಗಳು ಇವೆ. ಮುಂದಿನ ಚುನಾವಣೆ ಸಂದರ್ಭದಲ್ಲಿ ಹಳೇ ಮೈಸೂರು ಭಾಗದ ಸಿಂಹಪಾಲು ಕ್ಷೇತ್ರ ತಮಗೆ ಬೇಕೆಂದು ಜೆಡಿಎಸ್‌ ಪಟ್ಟು ಹಿಡಿದರೆ ಕಷ್ಟವಾಗಬಹುದು ಎಂಬ ಆತಂಕ ಬಿಜೆಪಿ ನಾಯಕರನ್ನು ಕಾಡುತ್ತಿದೆ. ಹೀಗಾಗಿ ಈಗಿನಿಂದಲೇ ಜಾತ್ಯತೀತ ಜನತಾದಳವನ್ನು ಸಾಧ್ಯವಾದಲ್ಲೆಲ್ಲ ಕಟ್ಟಿ ಹಾಕಬೇಕೆಂಬ ಪ್ರಯತ್ನ ತೆರೆಮರೆಯಲ್ಲಿ ಪ್ರಾರಂಭವಾಗಿದೆ. ಇದೇ ಕಾರಣಕ್ಕಾಗಿ ಮೈತ್ರಿಗೆ ಹುಳಿ ಹಿಂಡುವ ಪ್ರಯತ್ನ ನಡೆಯುತ್ತಿದೆ ಎಂದು ಕುಮಾರಸ್ವಾಮಿ ಹಾಗೂ ನಿಖೀಲ್‌ ಪದೇಪದೆ ಉಲ್ಲೇಖೀಸುತ್ತಿದ್ದಾರೆ.

ದಿಲ್ಲಿಗೆ ದೌಡಾಯಿಸಿದ ಬಿ.ವೈ. ವಿಜಯೇಂದ್ರ
ಇದೆಲ್ಲದರ ಮಧ್ಯೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ದಿಲ್ಲಿಗೆ ಪ್ರಯಾಣ ಬೆಳೆಸಿದ್ದಾರೆ. ವಿಜಯೇಂದ್ರ ದಿಲ್ಲಿಯಲ್ಲೇ ಬೀಡು ಬಿಟ್ಟಿದ್ದು, ಚನ್ನಪಟ್ಟಣ ಬಿಕ್ಕಟ್ಟಿಗೆ ಸಂಬಂಧಪಟ್ಟಂತೆ ರಾಜ್ಯ ಬಿಜೆಪಿ ಉಸ್ತುವಾರಿ ಡಾ| ರಾಧಾಮೋಹನ್‌ ಅಗರ್ವಾಲ್‌ ಅವರ ಜತೆ ಸಂಪರ್ಕದಲ್ಲಿದ್ದಾರೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next