Advertisement
ಬೈಂದೂರಿನ ಮಟ್ಟಿಗೆ ಕಾಮಗಾರಿ ಗುತ್ತಿಗೆ ವಹಿಸಿಕೊಂಡಿರುವ ಐ.ಆರ್.ಬಿ. ಕಂಪೆನಿಯ ಅಸಮರ್ಪಕ ಕಾಮಗಾರಿ ಯಿಂದಲೇ ಮಳೆಗಾಲದಲ್ಲಿ ಸಾರ್ವಜನಿಕರು ಇಷ್ಟೊಂದು ಹೈರಾಣಾಗುವಂತೆ ಆಗಿದೆ ಎಂಬ ಆರೋಪ ಕೇಳಿಬಂದಿದೆ. ತಡೆಗೋಡೆಯ ಕಾಂಕ್ರೀಟ್ ಮತ್ತು ಗುಡ್ಡದ ಮಣ್ಣು ರಸ್ತೆಯತ್ತ ಕುಸಿಯಲಾರಂಭಿಸಿದ್ದು ವಾಹನ ಪ್ರಯಾಣಿಕರು ಎಚ್ಚರದಿಂದ ಸಾಗಬೇಕಾಗಿದೆ.
ಕಳೆದ ವರ್ಷ ಗುಡ್ಡ ಕುಸಿತ ಸಂಭವಿಸಿ ಮಳೆಗಾಲದಲ್ಲಿ ರಸ್ತೆ ತಡೆ ಉಂಟಾಗಿತ್ತು. ಮಳೆಗಾಲ ಪೂರ್ತಿ ಹೆದ್ದಾರಿ ಪ್ರಯಾಣಿಕರು ಆತಂಕದಿಂದಲೇ ಕಳೆಯುವಂತಾಗಿತ್ತು. ಈ ವರ್ಷ ಇಂತಹ ಘಟನೆ ಮರುಕಳಿಸಬಾರದು ಎಂದು ಇಲಾಖೆ ಹೊಸ ತಂತ್ರಜ್ಞಾನದ ಸ್ಲೋಪ್ ಪ್ರೊಟೆಕ್ಷನ್ ವಾಲ್ ನಿರ್ಮಿಸಿತ್ತು. ಒತ್ತಿನೆಣೆ ಗುಡ್ಡದಲ್ಲಿ ಶೇಡಿಮಣ್ಣು ಇರುವ ಕಾರಣ ಮಳೆಗಾಲದಲ್ಲಿ ಕುಸಿಯುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ ಸೂಕ್ತ ಮಣ್ಣು ಪರೀಕ್ಷೆ ಮಾಡುವ ಮೂಲಕ ಸಮರ್ಪಕವಾದ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಉದಯವಾಣಿ ವರದಿ ಪ್ರಕಟಿಸಿ ಎಚ್ಚರಿಸಿತ್ತು. ಮಳೆಗಾಲದ ಆರಂಭದಲ್ಲಿ ಗುಡ್ಡ ಕುಸಿಯುವ ಸಾಧ್ಯತೆ ಕುರಿತು ವರದಿ ಮಾಡಿರುವುದನ್ನೂ ನೆನಪಿಸಿಕೊಳ್ಳಬಹುದಾಗಿದೆ.
ಗುಡ್ಡದ ತಳಭಾಗದಲ್ಲಿ ಒಂದು ತಿಂಗಳ ಹಿಂದೆ ಕುಸಿತ ಉಂಟಾಗಿತ್ತು. ಮರಳಿನ ಚೀಲಗಳನ್ನು ಜೋಡಿಸಿ ಕುಸಿಯದಂತೆ ತಾತ್ಕಾಲಿಕ ತಡೆ ಮಾಡಲಾಗಿತ್ತು
ಸೋಮವಾರ ಸಿಮೆಂಟ್ ಬಿರುಕು ಬಿಟ್ಟಿರುವ ಜಾಗದಲ್ಲಿ ಚರಂಡಿಗೆ ಕುಸಿಯಬಾರದು ಎಂದು ದೊಡ್ಡ ದೊಡ್ಡ ಕಲ್ಲುಗಳನ್ನು ರಾಶಿ ಹಾಕಲಾಗುತ್ತಿದೆ. ಕಂಪೆನಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದು, ಹೆದ್ದಾರಿ ಸಂಚಾರಕ್ಕೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗುತ್ತಿದೆ.