ಚಿಕ್ಕಮಗಳೂರು: ಮಳೆ ಪ್ರಮಾಣ ಇಳಿಮುಖವಾಗಿದ್ದರೂ ಜಿಲ್ಲೆಯಲ್ಲಿ ಅನಾಹುತಗಳು ಮಾತ್ರ ಸಂಭವಿಸುತ್ತಲೇ ಇವೆ. ನಿರಂತರ ಮಳೆ ಸುರಿಯುತ್ತಿದ್ದ ಸಂದರ್ಭದಲ್ಲಿ ಆರಂಭವಾದ ಗುಡ್ಡ ಕುಸಿತ, ರಸ್ತೆ ಬಿರುಕು ಬಿಡೋದು ಇಂದಿಗೂ ಮುಂದುವರಿದಿದೆ.
ಇದರೊಂದಿಗೆ ಈಗ ಮಲೆನಾಡು ಪ್ರದೇಶದ ಹಲವು ಮನೆಗಳಲ್ಲಿ ಬಿರುಕು ಉಂಟಾಗುತ್ತಿದ್ದು,ಜನ ಆತಂಕಕ್ಕೆ ಒಳಗಾಗಿದ್ದಾರೆ. ಜಿಲ್ಲೆಯ ಮಲೆನಾಡು ಭಾಗಗಳಾದ ಕೊಪ್ಪ, ಮೂಡಿಗೆರೆ ಹಾಗೂ ಶೃಂಗೇರಿ ತಾಲೂಕುಗಳ ಕೆಲವೆಡೆ ಮನೆಗಳಲ್ಲಿ ಬಿರುಕು ಮೂಡುತ್ತಿ
ರುವ ಪ್ರಮಾಣ ಹೆಚ್ಚಾಗಿದೆ. ಕೊಪ್ಪ ತಾಲೂಕಿನ ಸೋಮೇಶ್ವರ ಖಾನ್, ಬಸ್ರಿಕಟ್ಟೆ, ಮೇಗುಂದ ಗ್ರಾಮಗಳ ಹಲವು ಮನೆಗಳ
ಗೋಡೆಗಳು ಹಾಗೂ ನೆಲ ಬಿರುಕು ಬಿಡುತ್ತಿವೆ. ಹಲವು ಮನೆಗಳಲ್ಲಿ ದೊಡ್ಡದಾಗಿಯೇ ನೆಲ ಬಾಯ್ಬಿಡುತ್ತಿದ್ದು, ಮನೆಯವರು ಆ ಕೊಠಡಿಗಳಲ್ಲಿನ ಸಾಮಾನು ಸರಂಜಾಮುಗಳನ್ನು ಹೊರಗಡೆ ಇಡಲು ಆರಂಭಿಸಿದ್ದಾರೆ.
ಮೂಡಿಗೆರೆ ತಾಲೂಕಿನ ಬೊಗಸೆ ಗ್ರಾಮದಲ್ಲಿ ಕೃಷ್ಣಯ್ಯ ಎನ್ನುವವರಿಗೆ ಸೇರಿದ ಮನೆಯ ಗೋಡೆ, ನೆಲ ಹಾಗೂ ಮುಂಭಾಗದಲ್ಲಿ ಬಿರುಕು ಬಿಟ್ಟಿದೆ. ಶೃಂಗೇರಿ ತಾಲೂಕಿನ ಹೆಗ್ಗಾರು, ಅಡಿಗೆಬೈಲು, ಹಿರೇಗದ್ದೆ ಗ್ರಾಮಗಳಲ್ಲಿಯೂ ಮನೆಗಳು ಬಿರುಕು ಬಿಟ್ಟಿರುವ ವರದಿಯಾಗಿದೆ.
ಕಳಸ-ಮಂಗಳೂರು ಸಂಚಾರ ಬಂದ್: ಕುದುರೆಮುಖ ಘಾಟ್‌ನ ತಿರುವೊಂದರಲ್ಲಿ ಲಾರಿ ಸಿಕ್ಕಿ ಹಾಕಿಕೊಂಡ ಪರಿಣಾಮ ಕಳಸ-ಮಂಗಳೂರು ರಸ್ತೆ ಸಂಚಾರ ಬಂದ್ ಆಗಿದೆ. ರಸ್ತೆಗೆ ಅಡ್ಡಲಾಗಿ ಲಾರಿ ಸಿಕ್ಕಿಕೊಂಡಿದ್ದು, ಬೇರೆ ವಾಹನಗಳು ಸಂಚರಿಸಲು ಸ್ಥಳವೇ ಇಲ್ಲವಾಗಿದೆ.