ವಾಷಿಂಗ್ಟನ್: ಛತ್ರಿಯಿಂದಾಗಿ ಮಹಿಳೆಯೊಬ್ಬರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ದಕ್ಷಿಣ ಕೆರೊಲಿನಾದ ಗಾರ್ಡನ್ ಸಿಟಿ ಬೀಚ್‌ನಲ್ಲಿ ಬುಧವಾರ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಟಮ್ಮಿ ಪೆರ್ರೊಲ್ಟ್ (63) ಮೃತ ಮಹಿಳೆ ಎಂದು ತಿಳಿದುಬಂದಿದೆ.
ಮಧ್ಯಾಹ್ನ ವೇಳೆಗೆ ಬೀಚ್‌ನಲ್ಲಿ ಟಮ್ಮಿ ಪೆರ್ರೊಲ್ಟ್ ಅವರು ಬೀಚ್‌ನ ಸೌಂದರ್ಯ ಸವಿಯುತ್ತಿದ್ದರು. ಈ ವೇಳೆ ಗಾಳಿಯ ರಭಸಕ್ಕೆ ಹಾರಿಬಂದ ಛತ್ರಿಯೊಂದು ಮಹಿಳೆಯ ಎದೆಗೆ ಚುಚ್ಚಿದೆ.
ಗಂಭೀರವಾಗಿ ಗಾಯಗೊಂಡ ಮಹಿಳೆಯನ್ನು, ಆ ಪ್ರದೇಶದಲ್ಲಿದ್ದ ಜನರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಅವರು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಸಾಮಾನ್ಯವಾಗಿ ಬೀಚ್‌ನಲ್ಲಿ ಪ್ರವಾಸಿಗರು ಬಿಸಿಲಿನಿಂದ ರಕ್ಷಣೆಗಾಗಿ ಛತ್ರಿಯ ಮೊರೆ ಹೋಗುವುದು ಸಾಮಾನ್ಯ. ಬೀಚ್‌ನಲ್ಲಿ ಗಾಳಿಯ ರಭಸಕ್ಕೆ ಛತ್ರಿಗಳು ಹಾರಿ ಹೋಗಿ ಪ್ರವಾಸಿಗರು ಗಾಯಗೊಂಡಿದ್ದು ಇದೇ ಮೊದಲೇನಲ್ಲ.
ಚೂಪಾದ ತುದಿ ಹೊಂದಿರುವ ಛತ್ರಿಗಳು ಗಾಳಿಯಲ್ಲಿ ಹಾರಿ ಹೋದರೆ ಮಾರಕವಾಗಬಹುದು. ಇಂತಹ ಛತ್ರಿಗಳಿಂದ ವಾರ್ಷಿಕವಾಗಿ 3,000 ಜನರು ಗಾಯಗೊಂಡಿದ್ದಾರೆ ಎಂದು ಅಮೆರಿಕಾದ ಗ್ರಾಹಕ ಉತ್ಪನ್ನ ಸುರಕ್ಷತಾ ಆಯೋಗ ಮಂಡಿಸಿದ ವರದಿಯೊಂದರಲ್ಲಿ ತಿಳಿಸಿತ್ತು.
ಇದನ್ನೂ ಓದಿ: ನಾಗರಹಾವಿನಿಂದ ಮಗನನ್ನು ರಕ್ಷಿಸಿದ ತಾಯಿ: ವಿಡಿಯೋ ವೈರಲ್
ಗ್ರಾಹಕ ಉತ್ಪನ್ನ ಸುರಕ್ಷತಾ ಆಯೋಗದ ನೀಡಿದ ವರದಿಯ ಪ್ರಕಾರ 2008 ರಿಂದ 2017 ರ ವರೆಗೆ ಅಮೆರಿಕದಲ್ಲಿ 31,000 ಜನರು ಛತ್ರಿಯಿಂದ ಗಾಯಗೊಂಡು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿದ್ದಾರೆ ಎಂದು ಹೇಳಿಕೊಂಡಿದೆ. ಈ ಅವಘಡಕ್ಕೆ ಹೆಚ್ಚಾಗಿ 40 ವರ್ಷಕ್ಕಿಂತ ಮೇಲ್ಪಟ್ಟ ಮಹಿಳೆಯರು ಬಲಿಪಶುಗಳಾಗಿದ್ದಾರೆ ಎಂದು ತಿಳಿಸಿದೆ.