ಬೀಜಿಂಗ್ : ಪಾಕಿಸ್ಥಾನದಲ್ಲಿ ಕಾರ್ಯಗತಗೊಳ್ಳುತ್ತಿರುವ ಬಿಲಿಯ ಗಟ್ಟಲೆ ಡಾಲರ್ ವಿನಿಯೋಗದ ಬೆಲ್ಟ್ ಆ್ಯಂಡ್ ರೋಡ್ ಯೋಜನೆಯಲ್ಲಿ ದುಡಿಯುತ್ತಿರುವ ಸಾವಿರಾರು ಮಂದಿ ಚೀನೀ ಕೆಲಸಗಾರರಿಗೆ ಬೀಜಿಂಗ್ “ಸರಣಿ ಉಗ್ರ ದಾಳಿಯ ಸಂಭಾವ್ಯತೆ”ಯ ಮುನ್ನೆಚ್ಚರಿಕೆಯನ್ನು ನೀಡಿದೆ. ಪಾಕಿಸ್ಥಾನ ತನ್ನ ಸರ್ವಋತು ಮಿತ್ರನಾಗಿರುವ ಹೊರತಾಗಿಯೂ ಚೀನಕ್ಕೆ ಈಗ ಪಾಕ್ ಇಸ್ಲಾಮಿಕ್ ಉಗ್ರರ ಕಂಟಕ ಒದಗಿರುವುದು ವಿಧಿಯ ವಿಪರ್ಯಾಸವಾಗಿದೆ.
ಚೀನದ ಬಿಲಿಯ ಗಟ್ಟಲೆ ಡಾಲರ್ ಖರ್ಚಿನಲ್ಲಿ ಪಾಕಿಸ್ಥಾನದಲ್ಲಿ ನಡೆಯುತ್ತಿರುವ ಹಲವಾರು ಬೃಹತ್ ಮೂಲ ಸೌಕರ್ಯ ಯೋಜನೆಗಳಲ್ಲಿ ಪಾಕ್ ಅಧಿಕಾರಿಗಳಿಂದ ವ್ಯಾಪಕ ಭ್ರಷ್ಟಾಚಾರ, ಸ್ವಜನ ಪಕ್ಷಪಾತ, ಸ್ವೇಚ್ಚಾಚಾರ ನಡೆಯುತ್ತಿರುವುದನ್ನು ಗಮನಿಸಿರುವ ಚೀನ ಕೆಲ ದಿನಗಳ ಹಿಂದಷ್ಟೇ ತಾನು ಈ ಯೋಜನೆಗಳಿಗೆ ಹಣ ಹಾಕುವುದನ್ನು ಸದ್ಯಕ್ಕೆ ನಿಲ್ಲಿಸಿದ್ದೇನೆ ಎಂದು ಪಾಕ್ ಅಧಿಕಾರಿಗಳ ಉನ್ನತ ಮಟ್ಟದ ಸಭೆಯಲ್ಲಿ ಹೇಳಿತ್ತು.
ಹಾಗಿದ್ದರೂ ಚೀನ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರ ಮಹತ್ವಾಕಾಂಕ್ಷೆಯ, 57 ಶತಕೋಟಿ ಡಾಲರ್ ವೆಚ್ಚದ, ಬೆಲ್ಟ್ ಆ್ಯಂಡ್ ರೋಡ್ ಯೋಜನೆಯ ನಿರ್ಮಾಣ ಕಾಮಗಾರಿಗಳು ಈಗಲೂ ಚಾಲ್ತಿಯಲ್ಲಿದ್ದು ಸಾವಿರಾರು ಚೀನೀ ಕಾರ್ಮಿಕರು ಪಾಕಿಸ್ಥಾನದಲ್ಲಿ ದುಡಿಯುತ್ತಿದ್ದಾರೆ.
ಭಯೋತ್ಪಾದಕರ ಸತತ ದಾಳಿಗಳಿಂದ ತ್ರಸ್ತಗೊಂಡಿರುವ ಪಾಕಿಸ್ಥಾನದಲ್ಲಿ ಉಗ್ರರದ್ದೇ ಮೇಲ್ಗೆ„ ಆಗಿರುವ ಕಾರಣ ಚೀನೀ ಕಾರ್ಮಿಕರು ಅವರ ಸುಲಭದ ಸರಣಿ ದಾಳಿಗಳಿಗೆ ಗುರಿಯಾಗಬಹುದು ಎಂಬ ಆತಂಕವನ್ನು ಚೀನ ವ್ಯಕ್ತಪಡಿಸಿದೆ.
ಹಾಗಾಗಿ ಚೀನೀ ಕಂಪೆನಿಗಳ ಉದ್ಯೋಗಿಗಳ ಸುರಕ್ಷೆ ಮತ್ತು ರಕ್ಷಣೆ ಈಗ ಚೀನಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಅಂತೆಯೇ ಮುನ್ನೆಚ್ಚರಿಕೆಯ ಕ್ರಮವಾಗಿ ಅದು ತನ್ನ ಕಾರ್ಮಿಕರಿಗೆ ಸಂಭಾವ್ಯ ಇಸ್ಲಾಮಿಕ್ ಉಗ್ರರ ಸರಣಿ ದಾಳಿಯ ಬಗ್ಗೆ ಜಾಗ್ರತೆಯಿಂದಿರುವಂತೆ ಸೂಚಿಸಿದೆ ಎಂದು ವರದಿಗಳು ತಿಳಿಸಿವೆ.
ಪಾಕಿಸ್ಥಾನದಲ್ಲಿನ ಚೀನ ಸಂಸ್ಥೆಗಳು, ಸಿಬಂದಿಗಳ ಮೇಲೆ ಸರಣಿ ಉಗ್ರ ದಾಳಿ ನಡೆಯುವ ಸಾಧ್ಯತೆ ಇರುವುದಾಗಿ ಪಾಕಿಸ್ಥಾನದಲ್ಲಿನ ಚೀನ ದೂತಾವಾಸ ತನ್ನ ವೆಬ್‌ಸೈಟಿನಲ್ಲಿ ಎಚ್ಚರಿಕೆ ನೀಡಿದೆ.