ಇಸ್ಲಾಮಾಬಾದ್ : ಚೈನಾ-ಪಾಕಿಸ್ಥಾನ್ ಇಕಾನಮಿಕ್ ಕಾರಿಡಾರ್ (CPEC) ಯೋಜನೆಗೆ ಇದೀಗ ಭಾರೀ ಹಿನ್ನಡೆ ಒದಗಿದೆ. ಇದರ ಪ್ರಮುಖ ಪ್ರಾಜೆಕ್ಟ್ ಆಗಿರುವ ರಹೀಂ ಯಾರ್ ಖಾನ್ ವಿದ್ಯುತ್ ಯೋಜನೆಯನ್ನು ತಡೆಹಿಡಿಯುವಂತೆ ಮತ್ತು ಅದನ್ನು ಪಟ್ಟಿಯಿಂದಲೇ ಕಿತ್ತು ಹಾಕುವಂತೆ ಪ್ರಧಾನಿ ಇಮ್ರಾನ್ ಖಾನ್ ಅವರ ಪಾಕ್ ಸರಕಾರ ಚೀನವನ್ನು ಕೇಳಿಕೊಂಡಿದೆ.
ಈ ವಿಷಯವನ್ನು ಪಾಕಿಸ್ಥಾನದ ಪ್ರಮುಖ ಡಾನ್ ಸುದ್ದಿ ಪತ್ರಿಕೆ ಮಾಡಿದೆ. ಸಿಪಿಇಸಿ ಪ್ರಮುಖ ವಿದ್ಯುತ್ ಯೋಜನೆಯನ್ನು ಮಾತ್ರವಲ್ಲದೆ, ಪಿಎಸ್‌ಡಿಪಿ (ಪಬ್ಲಿಕ್ ಸೆಕ್ಟರ್ ಡೆವಲಪ್‌ಮೆಂಟ್ ಪ್ರೋಗ್ರಾಂ) ಅಡಿಯ ಇತರ ಅನೇಕ ಸ್ಕೀಮುಗಳನ್ನು ನಿಲ್ಲಿಸುವಂತೆಯೂ ಪಾಕಿಸ್ಥಾನ ಚೀನವನ್ನು ಕೇಳಿಕೊಂಡಿರುವುದಾಗಿ ಡಾನ್ ವರದಿ ತಿಳಿಸಿದೆ.
ಸಿಪಿಇಸಿ ಪ್ರಮುಖ ವಿದ್ಯುತ್ ಯೋಜನೆಯನ್ನು ಪಟ್ಟಿಯಿಂದಲೇ ಕಿತ್ತು ಹಾಕಬೇಕೆಂಬ ನಮ್ಮ ಕೋರಿಕೆಯನ್ನು ನಾವು ಅಧಿಕೃತವಾಗಿ ಚೀನಕ್ಕೆ ಕಳೆದ ಡಿ.20ರಂದು ನಡೆದಿದ್ದ ಸಿಪಿಇಟಿ ಜಂಟಿ ಸಮನ್ವಯ ಸಮಿತಿಯ ಸಭೆಯಲ್ಲಿ ತಿಳಿಸಿದ್ದೇವೆ ಎಂದು ಪಾಕ್ ಸರಕಾರದ ವಕ್ತಾರ ಹೇಳಿರುವುದನ್ನು ಡಾನ್ ವರದಿ ಮಾಡಿದೆ.
ವರದಿ ಪ್ರಕಾರ ಸಿಪಿಇಸಿ ಯಡಿಯ ಪ್ರಮುಖ ವಿದ್ಯುತ್ ಯೋಜನೆಯನ್ನು ಹಿಂದಿನ ಪಿಎಂಎಲ್‌ಎನ್ (ನವಾಜ್ ಷರೀಫ್) ಸರಕಾರ ಚೀನದೊಂದಿಗೆ ಅಂತಿಮಗೊಳಿಸಿತ್ತು.
ಈ ನಡುವೆ ಚೀನ “ಸಿಪಿಇಸಿ ಯೋಜನೆಯಂದ ಪಾಕ್ ಆರ್ಥಿಕತೆ ಕುಸಿದಿದೆ’ ಎಂಬ ವಾದವನ್ನು ತಳ್ಳಿಹಾಕಿದೆ. ನಿಜಕ್ಕಾದರೆ ಸಿಪಿಇಸಿ ಯಿಂದ ಪಾಕಿಸ್ಥಾನದ ಆರ್ಥಿಕತೆ ದೀರ್ಘಾವಧಿಯಲ್ಲಿ ಬಹಳಷ್ಟು ಬಲಿಷ್ಠವಾಗಲಿದೆ ಎಂದು ಅದು ಹೇಳಿದೆ.