ರಾಜ್ಯ ಸರಕಾರದ ನಿರೀಕ್ಷೆಯಂತೆ ಗೋಹತ್ಯೆ ನಿಷೇಧ ಮಸೂದೆಗೆ ವಿಧಾನ ಪರಿಷತ್ತಿನಲ್ಲಿಯೂ ಅಂಗೀಕಾರ ದೊರೆಯುವ ಮೂಲಕ ಎರಡೂ ಸದನಗಳ ಒಪ್ಪಿಗೆ ಪಡೆದಿದೆ. ಈ ಮೂಲಕ ತನ್ನ ಚುನಾವಣ ಪ್ರಣಾಳಿಕೆಯಲ್ಲಿ ಘೋಷಿಸಿರುವಂತೆ ಬಿಜೆಪಿ ಗೋಹತ್ಯೆ ನಿಷೇಧ ಕಾಯ್ದೆಯನ್ನು ರಾಜ್ಯದಲ್ಲಿ ಯಶಸ್ವಿಯಾಗಿ ಜಾರಿಗೆ ಮುಂದಾಗಿದೆ.
ಈ ಕಾಯ್ದೆ ಜಾರಿಯಿಂದ ರಾಜ್ಯದಲ್ಲಿ ಗೋ ಸಂತತಿ ಹೆಚ್ಚಿಸುವುದು ಹಾಗೂ ಅದರ ಉಪ ಉತ್ಪನ್ನಗಳನ್ನು ಬಳಸಿಕೊಂಡು ಔಷಧ, ಸುಗಂಧ ದ್ರವ್ಯ ಸೇರಿದಂತೆ ಅನೇಕ ರೀತಿಯ ಉತ್ಪನ್ನಗಳನ್ನು ತಯಾರಿಸುವುದು, ಸ್ಥಳೀಯವಾಗಿ ಗೋ ಮೂತ್ರ ಮತ್ತು ಸಗಣಿಯಿಂದ ಬೇರೆ ಬೇರೆ ಉತ್ಪನ್ನಗಳನ್ನು ಮಾಡುವ ಮೂಲಕ ಸ್ಥಳೀಯವಾಗಿ ಉದ್ಯೋಗ ಸೃಷ್ಟಿ ಹಾಗೂ ರೈತರ ಆದಾಯವನ್ನೂ ಹೆಚ್ಚಿಸಲು ಪಶು ಸಂಗೋಪನೆ ಇಲಾಖೆ ಹೆಚ್ಚಿನ ಆದ್ಯತೆ ನೀಡುತ್ತಿದೆ.
ಗೋ ಸಂತತಿ ರಕ್ಷಣೆ ಮತ್ತು ಅವುಗಳ ಉಪ ಉತ್ಪನ್ನಗಳಿಂದ ಆದಾಯ ಗಳಿಸುವ ಯೋಜನೆ ಜತೆಗೆ ರಾಜ್ಯ ಸರಕಾರ ಈ ಕಾಯ್ದೆ ಜಾರಿಯಿಂದ ರೈತರು, ಗೋಪಾಲಕರು ವಾಸ್ತವವಾಗಿ ಎದುರಿಸುವ ಸಾಮಾನ್ಯ ಸಮಸ್ಯೆಗಳ ಬಗ್ಗೆಯೂ ಹೆಚ್ಚಿನ ಗಮನ ಹರಿಸುವ ಅಗತ್ಯವಿದೆ.
ಪ್ರಮುಖವಾಗಿ ಗೋ ಹತ್ಯೆ ನಿಷೇಧದಿಂದ ಮೊದಲು ಎದುರಾಗುವ ಸಮಸ್ಯೆ ವಯಸ್ಸಾದ ಹಸು, ಎತ್ತುಗಳನ್ನು ರೈತರು ಸಾಕಲಾಗದೇ ಸಮಸ್ಯೆಗಳನ್ನು ಎದುರಿಸುವ ಪ್ರಸಂಗಗಳು ಹೆಚ್ಚಾಗುವ ಸಾಧ್ಯತೆ ಇದೆ. ವಿಶೇಷವಾಗಿ ಗಂಡು ಕರುಗಳನ್ನು ಪಶು ಪಾಲಕರು ಮನೆಯಲ್ಲಿ ಇಟ್ಟುಕೊಳ್ಳುವುದು ಕಡಿಮೆ, ಗೋಹತ್ಯೆ ನಿಷೇಧ ಅಧ್ಯಾದೇಶ ಹೊರಡಿಸಿದ ಅನಂತರ ರಾಜ್ಯದಲ್ಲಿ ರೈತರು ಗಂಡು ಕರುಗಳನ್ನು ಸಂತೆಗಳಲ್ಲಿ ಬಿಟ್ಟು ಹೋಗುತ್ತಿರುವ ಪ್ರಸಂಗಗಳು ಬೆಳಕಿಗೆ ಬರುತ್ತಿವೆ. ಈ ಬೆಳವಣಿಗೆ ಮುಂದಿನ ದಿನಗಳಲ್ಲಿ ಸಮಸ್ಯೆಯಾಗಿ ಕಾಡುವ ಸಾಧ್ಯತೆ ಇದೆ. ರೈತರು ಗಂಡು ಕರುಗಳನ್ನು ಸಾಕಲಾಗದೇ ಬೇಕಾಬಿಟ್ಟಿಯಾಗಿ ಬೀದಿಗಳಲ್ಲಿ ಬಿಟ್ಟು ಹೋಗುವ ಪ್ರಸಂಗಗಳು ಹೆಚ್ಚಾದರೆ, ಬೀಡಾಡಿ ಜಾನುವಾರುಗಳ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಅದು ನಗರ ಪ್ರದೇಶಗಳಲ್ಲಿ ಮತ್ತೂಂದು ರೀತಿಯ ಸಮಸ್ಯೆಗೆ ಎಡೆ ಮಾಡಿಕೊಡಲಿದೆೆ.
ರಾಜ್ಯ ಸರಕಾರ ಗೋವುಗಳನ್ನು ಸಾಕಲು ಸಾಧ್ಯವಾಗದಿರುವ ರೈತರು ಹಾಗೂ ಪಶುಪಾಲಕರಿಗೆ ಅವುಗಳನ್ನು ಗೋಶಾಲೆಗಳಿಗೆ ತಂದು ಬಿಡುವಂತೆ ಮೌಖೀಕವಾಗಿ ನಿರ್ದೇಶನ ನೀಡುತ್ತಿದೆಯಾದರೂ, ರಾಜ್ಯದಲ್ಲಿ ನಿರೀಕ್ಷಿತ ಮಟ್ಟದಲ್ಲಿ ಗೋಶಾಲೆಗಳು ಕಾರ್ಯ ನಿರ್ವಹಿಸುತ್ತಿಲ್ಲ. ಅಲ್ಲದೇ ಖಾಸಗಿ ಸುಪರ್ದಿಯಲ್ಲಿರುವ ಗೋಶಾಲೆಗಳಲ್ಲಿ ತಮ್ಮ ಬಳಿ ಬರುವ ಎಲ್ಲ ಗಂಡು ಕರು ಹಾಗೂ ವಯಸ್ಸಾದ ಎತ್ತು, ಹಸುಗಳನ್ನು ತೆಗೆದುಕೊಳ್ಳಲು ಹಿಂದೇಟು ಹಾಕುವ ಸಾಧ್ಯತೆ ಹೆಚ್ಚಿರುತ್ತದೆ.
ಖಾಸಗಿ ನಿರ್ವಹಣೆಯಲ್ಲಿರುವ ಗೋಶಾಲೆಗಳಿಗೂ ಸರಕಾರ ಸಹಾಯ ಧನ ನೀಡುವ ಪ್ರಮಾಣ ಹೆಚ್ಚಳ ಮಾಡುವುದು, ನಿಗದಿತ ಅವಧಿಯಲ್ಲಿ ಸರಕಾರ ಈಗಾಗಲೇ ಘೋಷಣೆ ಮಾಡಿದಂತೆ ಪ್ರತೀ ತಾಲೂಕಿನಲ್ಲೂ ಸರಕಾರಿ ಗೋಶಾಲೆ ತೆರೆದು, ಅಗತ್ಯ ಮೂಲ ಸೌಕರ್ಯ ಕಲ್ಪಿಸಿ ಮುಂದೆ ಉದ್ಬವಿಸಬಹುದಾದ ಸಮಸ್ಯೆಗೆ ಪರಿಹಾರ ಕಂಡು ಕೊಳ್ಳುವ ತುರ್ತು ಅಗತ್ಯವಿದೆ.