ಬೆಂಗಳೂರು: ಗೋವು ನಮಗೆ ಅಗತ್ಯ ಮಾತ್ರವಲ್ಲ, ಅನಿವಾರ್ಯವೂ ಆಗಿದೆ ಎಂಬುದನ್ನು ನಾವು ತಿಳಿದುಕೊಳ್ಳಬೇಕಿದೆ ಎಂದು ಪೇಜಾವರ ಮಠದ ಶ್ರೀ ವಿಶ್ವ ಪ್ರಸನ್ನ ತೀರ್ಥ ಶ್ರೀಪಾದರು ಹೇಳಿದರು.
ಪೂರ್ಣ ಪ್ರಜ್ಞ ವಿದ್ಯಾ ಪೀಠದಲ್ಲಿ ಗೋವತ್ಸ ದ್ವಾದಶಿ ಪ್ರಯುಕ್ತ ನಡೆದ ಗೋ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಆಶೀರ್ವಚನ ನೀಡಿದರು.
ದೇಸಿ ಗೋವುಗಳನ್ನು ಉಳಿಸುವ ನಿಟ್ಟಿನಲ್ಲಿ ಸರ್ಕಾರ ಮತ್ತು ಮಠ ಮಂದಿರಗಳು ಕ್ರಮ ಕೈಗೊಳ್ಳಬೇಕು. ಗೋಶಾಲೆಗಳ ಸಂಖ್ಯೆ ಹೆಚ್ಚುತ್ತಿದ್ದು, ಪ್ರತಿಯೊಬ್ಬರೂ ಗೋಸೇವೆ ಮಾಡುವಂತಾಗಬೇಕು. ಪ್ರತಿಯೊಂದು ದೇವಸ್ಥಾನದಲ್ಲೂ ಗೋಶಾಲೆ ನಿರ್ಮಾಣವಾಗಬೇಕು. ದೇವಾಲಯದಲ್ಲಿ ಸಂಗ್ರಹವಾಗು ತ್ತಿರುವ ಆದಾಯದ ಒಂದು ಭಾಗ ಗೋಶಾಲೆಗೆ ವಿನಿಯೋಗವಾದರೆ ಹೆಚ್ಚಿನ ಅನುಕೂಲವಾಗುತ್ತದೆ ಎಂದು ಸ್ವಾಮೀಜಿ ಅಭಿಪ್ರಾಯಪಟ್ಟರು.
ಗೋವು ತಜ್ಞ ಶೈಲೇಶ ಹೊಳ್ಳ, ವ್ಯಾಸನಕೆರೆ ಪ್ರಭಂಜನಾಚಾರ್ಯ ಮೊದಲಾದವರು ಗೋವಿನ ಮಹತ್ವದ ಬಗ್ಗೆ ಮಾತನಾಡಿದರು. ಗೋವಿಗೆ ತುಲಾಭಾರ ಮಾಡುವ ಮೂಲಕ ಗೋ ವತ್ಸ ದ್ವಾದಶಿ ಆಚರಿಸಲಾಯಿತು.
ಸಭಾಭವನ ಉದ್ಘಾಟನೆ
ಇದಕ್ಕೂ ಮೊದಲು ಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿ ಉದ್ಯಮಿ ಎಚ್. ಟಿ ಮುರಳೀಧರ ರಾವ್ ಅವರು ಶೈಕ್ಷಣಿಕ ಉದ್ದೇಶದಿಂದ ನಿರ್ಮಿಸಿರುವ ಹವಾ ನಿಯಂತ್ರಿತ ಪ್ರೊಜೆಕ್ಟರ್ ಮುಂತಾದ ವಿಶೇಷ ಸೌಲಭ್ಯಗಳುಳ್ಳ 25 ಲಕ್ಷ ರೂಪಾಯಿ ವೆಚ್ಚದ ಕಲ್ಯಾಣಿ ಮತ್ತು ಎಚ್. ಟಿ. ವಾಸುದೇವ ರಾವ್ ಸ್ಮಾರಕ ಸಭಾಭವನವನ್ನು ಪೇಜಾವರ ಶ್ರೀಗಳು ಉದ್ಘಾಟಿಸಿದರು. ಶಾಸಕ ರವಿ ಸುಬ್ರಮಣ್ಯ ಉಪಸ್ಥಿತರಿದ್ದರು.