Advertisement

ಬದಲಿ ಮೇವಿನ ಸಂಶೋಧನೆಗೆ ಐವತ್ತು ವರ್ಷ!

09:18 AM Apr 16, 2019 | Hari Prasad |

ಬದಲಿ ಮೇವಿನ ಬಗ್ಗೆ ಐದು ದಶಕಗಳ ಸಂಶೋಧನೆ ನಡೆದಿದ್ದರೂ, ಗ್ರಾಮಮಟ್ಟದಲ್ಲಿ ಅದರಿಂದ ಯಾವುದೇ ಪ್ರಯೋಜನ ಆಗಿಲ್ಲ. ಕಿಂಗ್ಸ್‌ಲೇ ಏನಂತಾರೆ ಗೊತ್ತೇ? ಹೈಡ್ರೊಫೋನಿಕ್ಸ್‌ ದುಬಾರಿ ತಂತ್ರಜ್ಞಾನ; ಆ ಘಟಕ ಶುರು ಮಾಡಲು 25,000 ರೂಪಾಯಿ ಖರ್ಚು ಮಾಡಿ, 12 ದಿನಗಳ ನಂತರ ನನಗೆ ಸಿಕ್ಕಿದ್ದು ಕೇವಲ ಎಂಟು ಕಿ.ಲೋ ಜೋಳ ಎನ್ನುತ್ತಾರೆ. ಒಂದು ದನಕ್ಕೆ ದಿನವೊಂದಕ್ಕೆ 15 -20 ಕಿ.ಲೋ ಜೋಳ ತಿನ್ನಲು ಬೇಕು; ಹಾಗಿರುವಾಗ ಇದೆಲ್ಲಿಗೆ ಸಾಕಾಗುತ್ತದೆ?

Advertisement

ತಮಿಳುನಾಡಿನಲ್ಲಿ 2016-17ರಲ್ಲಿ ಕಾಣಿಸಿಕೊಂಡ ಬರಗಾಲವನ್ನು ಶತಮಾನದ ಅತ್ಯಂತ ದಾರುಣ ಬರಗಾಲ ಎನ್ನಲಾಗಿದೆ. ಆಗ, ತೂತುಕುಡಿಯ ಮಂಗಳಗಿರಿ ಗ್ರಾಮದ ಡಿ. ಕಿಂಗ್ಸ್‌ಲೆ ಅವರಿಗೆ ತಮ್ಮ 15 ದನಗಳಿಗೆ ಮೇವು ಒದಗಿಸುವುದು ಹೇಗೆಂಬುದೇ ಚಿಂತೆಯಾಗಿತ್ತು. ಹಾಗಾಗಿ ನಾನು ಹೈಡ್ರೊಫೋನಿಕ್ಸ್‌ ಜೋಳ ಬೆಳೆಸಲು ನಿರ್ಧರಿಸಿದೆ ಎನ್ನುತ್ತಾರೆ ಕಿಂಗ್ಸ್‌ಲೇ. ಈ ತಂತ್ರಜ್ಞಾನದ ಅನುಸಾರ, ಮಣ್ಣಿಲ್ಲದೆ ಜೋಳ ಬೆಳೆಸಬಹುದು; ನೀರಿನಲ್ಲಿ ಕರಗಿಸಿದ ಖನಿಜ ಪೋಷಕಾಂಶಗಳನ್ನು ಸಸ್ಯಗಳಿಗೆ ಒದಗಿಸಿದರಾಯಿತು. ಹೀಗೆ ಯೋಚಿಸಿದ ಕಿಂಗ್ಸ್‌ಲೆ, ಹೈಡ್ರೊಫೋನಿಕ್ಸ್‌ ಘಟಕ ಶುರು ಮಾಡಲಿಕ್ಕಾಗಿ, ಕೃಷಿ ವಿಜ್ಞಾನ ಕೇಂದ್ರದಿಂದ 16 ಪ್ಲಾಸ್ಟಿಕ್‌ ಟ್ರೇಗಳನ್ನು ತಂದರು.

ಅವನ್ನು ಪೋಷಕಾಂಶಭರಿತ ನೀರಿನಿಂದ ತುಂಬಿಸಿ, ಮೊಳಕೆ ಬರಿಸಿದ ಜೋಳದ ಬೀಜಗಳನ್ನು ಆ ನೀರಿಗೆ ಚಿಲ್ಲಿದರು. ಕೇವಲ ಹತ್ತು ದಿನಗಳಲ್ಲಿ ಜೋಳದ ಸಸಿಗಳು 30 ಸೆಂ.ಮೀ. ಎತ್ತರಕ್ಕೆ ಬೆಳೆದು, ಎಳೆ ಕಾಳುಗಳು ಮೂಡಿ, ಕೊಯ್ಲಿಗೆ ತಯಾರಾದವು.

ಜೋಳ ಬೆಳೆದರು
ಜಾನುವಾರುಗಳಿಗೆ ಬದಲಿಮೇವು ಶೋಧಿಸಲಿ­ಕ್ಕಾಗಿ ಕಳೆದ 50 ವರ್ಷಗಳಿಂದ ಅಖಿಲ ಭಾರತ ಸಂಯೋ­ಜಿತ ಸಂಶೋಧನಾ ಯೋಜನೆ ಚಾಲ್ತಿಯಲ್ಲಿದೆ. ನವದೆಹಲಿಯ ಭಾರತೀಯ ಕೃಷಿ ಸಂಶೋಧನ ಮಂಡಲಿ (ಐಸಿಎಆರ್‌) ಮತ್ತು ಝಾನ್ಸಿಯ ಭಾರತೀಯ ಹುಲ್ಲುಗಾವಲು ಮತ್ತು ಮೇವು ಸಂಶೋಧನಾ ಸಂಸ್ಥೆಗಳ ಆಶ್ರಯದಲ್ಲಿ. ಆ ಯೋಜನೆಯಲ್ಲಿ ಅಭಿವೃದ್ಧಿ ಪಡಿಸಲಾದ ಸುಮಾರು 200 ಬದಲಿ ಮೇವುಗಳಲ್ಲಿ ಹೈಡ್ರೊಫೋನಿಕ್ಸ್‌ ದಿಢೀರ್‌ ಜೋಳವೂ ಸೇರಿದೆ

ಆ ಯೋಜನೆಯ ಬಹುಪಾಲು ಅನುಶೋಧನೆ­ಗಳ ಉದ್ದೇಶ, ಮೇವಿನ ಬೆಳೆಗಳ ಪೋಷಕಾಂಶ ಪ್ರಮಾಣ ಮತ್ತು ಉತ್ಪಾದಕತೆ ಹೆಚ್ಚಿಸುವುದು. ಉದಾಹರಣೆಗೆ ಅಜೋಲಾ. ನೀರು ನಿಂತ ಹೊಂಡಗಳಲ್ಲಿ ಮತ್ತು ಭತ್ತದ ಹೊಲಗಳಲ್ಲಿ ಬೆಳೆಯುತ್ತದೆ ಈ ಸಸ್ಯ. ಇತರ ಹಲವು ಮೇವಿನ ಬೆಳೆಗಳಿಗೆ ಹೋಲಿಸಿದಾಗ ಇದರಲ್ಲಿ ಪ್ರೊಟೀನಿನ ಪ್ರಮಾಣ ಶೇ. 19ರಿಂದ ಶೇ.30ರಷ್ಟು ಜಾಸ್ತಿ. ಇದರ ತಾಜಾ ಅಥವಾ ಒಣಗಿಸಿದ ಎಲೆಗಳನ್ನು ದನ, ಕರುಗಳಿಗೆ ಆಹಾರವಾಗಿ ತಿನ್ನಿಸಬಹುದು. ಆದರೆ ಇದನ್ನು ದೀರ್ಘಾವಧಿ ಸಂಗ್ರಹಿಸಿಡಲು ಸಾಧ್ಯವಿಲ್ಲ.

Advertisement

ಅಪಾಯಕಾರಿ ಸಸ್ಯ
ಎರಡನೆಯ ಬದಲಿಮೇವು ಮೆಸ್‌-ಕ್ವಟ್‌ ಕೋಡುಗಳು. ಈ ಸಸ್ಯ ಒಣ ಮತ್ತು ಅರೆಒಣ ಪ್ರದೇಶಗಳಲ್ಲಿ ಬೆಳೆಯುತ್ತದೆ. ಶೇ.12ರಷ್ಟು ಪ್ರೋಟಿನ್‌ ಮತ್ತು ಶೇ.15ರಷ್ಟು ಸಕ್ಕರೆಯಂಶ ಹೊಂದಿರುವ ಇದರ ಕೋಡುಗಳನ್ನು ಧಾನ್ಯದ ಹುಡಿಗಳ ಬದಲಾಗಿ ಪಶುಗಳಿಗೆ ತಿನಿಸಬಹುದು. ಆದರೆ ಇದನ್ನು ಬೆಳೆಯಲು ಜಾಸ್ತಿ ನೀರು ಬೇಕು.

ಅದೇನಿದ್ದರೂ, ಮಂಗಳಗಿರಿಯಿಂದ ಕೆಲವೇ ಕಿ.ಮೀ ದೂರದಲ್ಲಿರುವ ವಿಲಾತಿಕುಲಂ ತಾಲೂಕಿನ ರೈತರು ಮೆಸ್‌ಕ್ವಟ್‌ ಸೃಷ್ಟಿಸಿದ ವಿಷಮಚಕ್ರದಲ್ಲಿ ಸಿಲುಕಿದರು. ಈ ಸಸ್ಯವು ತನ್ನ ಬೇರುಗಳನ್ನು ಮಣ್ಣಿನಾಳಕ್ಕೆ ಇಳಿಸುವ ಮೂಲಕ ಅಂತರ್ಜಲಮಟ್ಟ ಕ್ಷಿಪ್ರವಾಗಿ ಕುಸಿಯುವಂತೆ ಮಾಡುವ ಅನಾಹುತಕಾರಿ ಸಸ್ಯ. ದನಗಳಿಗೆ ಬಲಿತ ಮೆಸ್‌ಕ್ವಟ್‌ ಕೋಡುಗಳೆಂದರೆ ಪಂಚಪ್ರಾಣ.

ಆದರೆ, ಅದರ ಗಡುಸಾದ ಬೀಜಗಳನ್ನು ದನಗಳು ಜೀರ್ಣಿಸಿಕೊಳ್ಳಲಾರವು. ಹಾಗಾಗಿ, ಆ ಬೀಜಗಳು ಸೆಗಣಿಯಲ್ಲಿ ಹೊರಕ್ಕೆ ಬಂದು, ಆ ಸಸ್ಯದ ಪ್ರಸಾರಕ್ಕೆ ಕಾರಣವಾಗುತ್ತವೆ ಎಂದು ಮಾಹಿತಿ ನೀಡುತ್ತಾರೆ ತೂತು ಕುಡಿಯ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ವಿ. ಶ್ರೀನಿವಾಸನ್‌. ಅಲ್ಲಿನ ಸಮುದ್ರತೀರ ಪ್ರದೇಶದಲ್ಲಿ ವೇಗವಾಗಿ ಹರಡುತ್ತಿದೆ ಈ ಸಸ್ಯ.

ಈ ವಿಷಮ ಚಕ್ರವನ್ನು ಕೊನೆಗಾಣಿಸಲಿಕ್ಕಾಗಿ 2007ರಲ್ಲಿ ಅಲ್ಲಿನ ವಿಜ್ಞಾನಿಗಳು ಶೋಧಿಸಿದ ತಂತ್ರ: ಬಲಿತ ಮೆಸ್‌-ಕ್ವಟ್‌ ಕೋಡುಗಳನ್ನು ಹುಡಿ ಮಾಡಿ ಪಶುಗಳಿಗೆ ಆಹಾರವಾಗಿ ನೀಡುವುದು. ಮೆಸ್‌-ಕ್ವಟ್‌ ಕೋಡಿನ ಹುಡಿಯನ್ನು ಪಶು ಆಹಾರವಾಗಿ ಕೊಡಲು ಶುರು ಮಾಡಿದ ನಂತರ ನನ್ನ ಹಸುಗಳು ದಿನಕ್ಕೆ ಅರ್ಧ ಲೀಟರ್‌ ಹಾಲು ಜಾಸ್ತಿ ಕೊಡುತ್ತಿವೆ. ಅದಲ್ಲದೆ, ಹಾಲು ಹೆಚ್ಚು ದಪ್ಪವಾಗಿದೆ ಎನ್ನುತ್ತಾರೆ ವಿಲಾತಿಕುಲಂ ತಾಲೂಕಿನ ಕೃಷಿಕ ಎಂ. ಮಾದಸ್ವಾಮಿ. ಮೆಸ್‌-ಕ್ವಟ್‌ ಕೋಡಿನ ಮಾರಾಟದಿಂದಲೂ ಆದಾಯಗಳಿಸಲು ಅವರಿಗೆ ಸಾಧ್ಯವಾಗಿದೆ.

ಪ್ರತಿದಿನ ಮೆಸ್‌-ಕ್ವಟ್‌ ಕೋಡುಗಳನ್ನು ಸಂಗ್ರಹಿಸಿ, ಸ್ಥಳೀಯ ಮಿಲ್ಲಿನ ಮಾಲೀಕನಿಗೆ ಕಿ.ಲೋಕ್ಕೆ ರೂ.6 ದರದಲ್ಲಿ ಅವರು ಮಾರುತ್ತಿದ್ದಾರೆ. ಜಿಲ್ಲೆಯ ಬಹುಪಾಲು ರೈತರು ಈಗ ದನಗಳಿಗೆ ಮೆಸ್‌-ಕ್ವಟ್‌ ಕೋಡಿನ ಹುಡಿಯನ್ನೇ ತಿನಿಸುತ್ತಿದ್ದಾರೆ. ಏಕೆಂದರೆ, ಇದು ಬೆಲೆ ಕಿಲೋಕ್ಕೆ 16 ರೂಪಾಯಿ ಬೆಲೆಗೆ ಸಿಗುತ್ತದೆ. ಗೋಧಿ ಅಥವಾ ಸಜ್ಜೆ ಹುಡಿಗೆ ಬೆಲೆ ಜಾಸ್ತಿ, ಕಿಲೋಕ್ಕೆ 22 ರೂಪಾಯಿ ಎನ್ನುತ್ತಾರೆ ಶ್ರೀನಿವಾಸನ್‌.

ಮುಳ್ಳಿಲ್ಲದ ಕಳ್ಳಿಯಿಂದ ಲಾಭ
ಇತರ ದೇಶಗಳು ಪಶುಮೇವಿನ ಕೊರತೆ ನಿವಾರಿಸಲು ಕಾರಣವಾದ ಬದಲಿ ಮೇವುಗಳ ಬಗ್ಗೆಯೂ ಸಂಶೋಧನೆಗಳು ನಡೆಯುತ್ತಿವೆ. ಉದಾಹರಣೆಗೆ, ಮುಳ್ಳಿಲ್ಲದ ಕಳ್ಳಿ ಗಿಡ. ಪುಣೆಯ ಲಾಭರಹಿತ ಸಂಸ್ಥೆ ಬೈಫ್ ಅಭಿವೃದ್ಧಿ ಸಂಶೋಧನಾ ಪ್ರತಿಷ್ಠಾನವು 2015ರಲ್ಲಿ ಇದರ ಬಗ್ಗೆ ಸಂಶೋಧನೆ ಆರಂಭಿಸಿತು. ಈ ಕಳ್ಳಿ ತಿಂದರೆ ದನಗಳು ಕಡಿಮೆ ನೀರು ಕುಡಿಯುತ್ತವೆ ಎಂಬುದು ಗಮನಾರ್ಹ.

1970ರಲ್ಲಿ ಅಖಿಲ ಭಾರತ ಸಂಶೋಧನಾ ಯೋಜನೆಯನ್ನು ಐಸಿಎಆರ್‌ ಶುರು ಮಾಡಿದಾಗ ಅದರ ಉದ್ದೇಶ: ವಿಭಿನ್ನ ಕೃಷಿ ಪ್ರದೇಶಗಳಲ್ಲಿ ಮೇವಿನ ಬೆಳೆಗಳ ಉತ್ಪಾದನೆ ಹೆಚ್ಚಿಸುವುದು. ಆದರೆ, ಅರ್ಧ-ಶತಮಾನದ ನಂತರವೂ ನಮ್ಮ ದೇಶದಲ್ಲಿ ಮೇವಿನ ಕೊರತೆ ಕಡಿಮೆಯಾಗಿಲ್ಲ. ಝಾನ್ಸಿಯ ಸಂಶೋಧನಾ ಸಂಸ್ಥೆಯ ಅಂಕಿಸಂಖ್ಯೆಗಳ ಪ್ರಕಾರ, ನಮ್ಮ ದೇಶವು ಮೇವಿನ ಬೇಡಿಕೆಯ ಶೇ.63ರಷ್ಟು ಕೊರತೆ ಎದುರಿಸುತ್ತಿದೆ. ಈ ಸಂಶೋಧನಾ ಯೋಜನೆ­ಯಲ್ಲಿ ಕೆಲಸ ಮಾಡುತ್ತಿರುವ ಅಧಿಕಾರಿಗಳು ಮೇವಿನ ಕೊರತೆಗೆ ಹಲವು ಕಾರಣಗಳನ್ನು ನೀಡುತ್ತಾರೆ. ಮುಖ್ಯವಾಗಿ, ಅನಿಶ್ಚಿತ ಮಳೆಯಿಂದಾಗಿ ಹಲವು ಪ್ರದೇಶಗಳು ನೆರೆ ಮತ್ತು ಬರದ ಸಂಕಟ ಎದುರಿಸುತ್ತಿವೆ. ಇದರಿಂದಾಗಿ ಮೇವಿನ ಲಭ್ಯತೆಯೂ ಕಡಿಮೆಯಾಗಿದೆ.

ಸಂಶೋಧನೆಗೆ ಫ‌ಲ ಸಿಗುತ್ತಿಲ್ಲ
ಅಂತೂ, ನಮ್ಮ ದೇಶದಲ್ಲಿ ಬದಲಿಮೇವಿನ ಬಗ್ಗೆ ಐದು ದಶಕಗಳ ಸಂಶೋಧನೆ ನಡೆದಿದ್ದರೂ, ಗ್ರಾಮಮಟ್ಟದಲ್ಲಿ ಅದರಿಂದ ಯಾವುದೇ ಪ್ರಯೋಜನ ಆಗಿಲ್ಲ. ಕಿಂಗ್ಸ್‌ಲೇ ಏನಂತಾರೆ ಗೊತ್ತೇ? ಹೈಡ್ರೊಫೋನಿಕ್ಸ್‌ ದುಬಾರಿ ತಂತ್ರಜ್ಞಾನ; ಆ ಘಟಕ ಶುರು ಮಾಡಲು 25,000 ರೂಪಾಯಿ ಖರ್ಚು ಮಾಡಿ, 12 ದಿನಗಳ ನಂತರ ನನಗೆ ಸಿಕ್ಕಿದ್ದು ಕೇವಲ ಎಂಟು ಕಿ.ಲೋ ಜೋಳ ಎನ್ನುತ್ತಾರೆ. ಒಂದು ದನಕ್ಕೆ ದಿನವೊಂದಕ್ಕೆ 15 -20 ಕಿ.ಲೋ ಜೋಳ ತಿನ್ನಲು ಬೇಕು; ಹಾಗಿರುವಾಗ ಇದೆಲ್ಲಿಗೆ ಸಾಕು? ಎರಡನೇ ಸುತ್ತಿನಲ್ಲಿ ನನಗೆ ಕೊಟ್ಟ ಜೋಳದ ಬೀಜಗಳು ಮೊಳಕೆ ಬರಲೇ ಇಲ್ಲ ಎಂದು ಅವಲತ್ತುಕೊಳ್ಳುತ್ತಾರೆ ಅವರು. ಈ ನಷ್ಟಕ್ಕೆ ಅವರಿಗೆ ಪರಿಹಾರವೇನೋ ಸಿಕ್ಕಿದೆ. ಆದರೆ, ಹೈಡ್ರೊಫೋನಿಕ್ಸಿನ ಸಹವಾಸ ಸಾಕಪ್ಪಾ ಸಾಕು ಎನ್ನುತ್ತಾರೆ ಕಿಂಗ್ಸ್‌ಲೇ.

ಇಂಥ ತಳಮಟ್ಟದ ಸಮಸ್ಯೆಗಳನ್ನು ಪರಿಹರಿಸ ಬೇಕಾದರೆ, ಬದಲಿ ಮೇವಿನ ಕೃಷಿ ಬಗ್ಗೆ ಲಕ್ಷಗಟ್ಟಲೆ ಕೃಷಿಕರಿಗೆ ತರಬೇತಿ ನೀಡಬೇಕು. ಆದರೆ, ಸಮಸ್ಯಾ ಪರಿಹಾರಕ್ಕೆ ಅಡ್ಡಿಯಾಗಿದೆ ಅನುದಾನದ ಕೊರತೆ. ಅಂತೂ, ಐವತ್ತು ವರ್ಷಗಳ ಅಖಿಲ ಭಾರತ ಸಂಶೋಧನೆಯ ಫ‌ಲ ಕೃಷಿಕರನ್ನು ತಲಪುತ್ತಿಲ್ಲ.

— ಅಡ್ಡೂರು ಕೃಷ್ಣರಾವ್‌

Advertisement

Udayavani is now on Telegram. Click here to join our channel and stay updated with the latest news.

Next