ಕೋಪನ್‌ಹೇಗನ್ : ಕೋವಿಡ್ ವೈರಸ್‌ನ ಮೂಲ ಯಾವುದು ಎಂಬುದರ ಬಗ್ಗೆ ಇನ್ನೂ ಖಚಿತವಾದ ಒಂದು ತೀರ್ಮಾನಕ್ಕೆ ಬರಲು ವಿಜ್ಞಾನ ಲೋಕಕ್ಕೆ ಸಾಧ್ಯವಾಗಿಲ್ಲ. ಬಾವಲಿ, ಚಿಪ್ಪುಹಂದಿ, ಹಾವು, ಮೀನು ಎಂದು ವಿವಿಧ ಪ್ರಾಣಗಳನ್ನು ವೈರಸ್ ಮೂಲವೆಂದು ಹೆಸರಿಸಲಾಗಿದೆ. ಈ ಸಾಲಿಗೆ ಇನ್ನೊಂದು ಸೇರ್ಪಡೆ ಮಿಂಕ್ ಎಂಬ ಸಸ್ತನಿ.
ಮಿಂಕ್ ಡೆನ್ಮಾರ್ಕ್‌ನಲ್ಲಿ ವ್ಯಾಪಕವಾಗಿ ಕಂಡು ಬರುವ ನಯವಾದ ತುಪ್ಪಳವನ್ನು ಹೊಂದಿರುವ ಒಂದು ಚಿಕ್ಕ ಪ್ರಾಣಿ. ತುಪ್ಪಳಕ್ಕಾಗಿ ಈ ಪ್ರಾಣಿಯನ್ನು ಸಾಕುತ್ತಾರೆ. ಈ ಪ್ರಾಣಿಯಿಂದಲೇ ಮನುಷ್ಯರಿಗೆ ಕೋವಿಡ್ ಹರಡಿರಬಹುದು ಎನ್ನುವುದು ಡೆನ್ಮಾರ್ಕ್ ಸರಕಾರದ ಗುಮಾನಿ. ಈ ಹಿನ್ನೆಲೆಯಲ್ಲಿ ದೇಶಾದ್ಯಂತ ಮಿಂಕ್ ಫಾರ್ಮ್ಗಳ ಪರಿಶೀಲನೆ ಪ್ರಾರಂಭವಾಗಿದೆ.
ಮಿಂಕ್‌ನಿಂದ ಮನುಷ್ಯನಿಗೆ ಸೋಂಕು ಹರಡಿರುವ ಸಾಧ್ಯತೆಯಿದೆ. ಪ್ರಯೋಗಗಳು ಕೂಡ ಈ ನಿಟ್ಟಿನಲ್ಲಿ ಬೆಳಕು ಚೆಲ್ಲುತ್ತವೆ ಎಂದಿರುವ ಡೆನ್ಮಾರ್ಕ್ ಸರಕಾರ ಮಿಂಕ್ ಫಾರ್ಮ್ಗಳ ಪರಿಶೀಲನೆಯನ್ನು ಕಡ್ಡಾಯಗೊಳಿಸಿದೆ.
ಮಿಂಕ್‌ಗಳಲ್ಲಿ ಕೋವಿಡ್ ಲಕ್ಷಣ ಕಾಣಿಸಿಕೊಳ್ಳುವುದಿಲ್ಲ ಎನ್ನುವುದು ಪ್ರಯೋಗದಿಂದ ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಮಿಂಕ್‌ಗಳ ಪ್ರತಿಕಾಯ ಪರಿಶೀಲನೆ ನಡೆಯುತ್ತಿದೆ ಮತ್ತು ಇದನ್ನು ಎಲ್ಲ ಮಿಂಕ್ ಫಾರ್ಮ್ಗಳಿಗೆ ವಿಸ್ತರಿಸಲಾಗುವುದು ಎಂದು ಸರಕಾರ ಹೇಳಿದೆ.
ಮಿಂಕ್‌ಗಳಿಗೆ ಬೆಕ್ಕು ಕೋವಿಡ್ ವೈರಸ್ ಹರಡಿರಬಹುದು ಎನ್ನುವ ಅನುಮಾನ ಡೆನ್ಮಾರ್ಕ್ ಸರಕಾರದ್ದು. ಫಾರ್ಮ್ ನಿಂದ ಫಾರ್ಮ್ಗೆ ಬೆಕ್ಕು ವೈರಸ್ ವಾಹಕ ವಾಗಿರಬಹುದು ಎನ್ನಲಾಗಿದೆ. ಎರಡು ಫಾರ್ಮ್ ಗಳಲ್ಲಿ ಪತ್ತೆಯಾಗಿರುವ ವೈರಸ್ ಒಂದೇ ರೀತಿ ಇರುವುದು ಈ ಅನುಮಾನವನ್ನು ಪುಷ್ಟೀಕರಿಸಿದೆ. ಮಿಂಕ್ ಫಾರ್ಮ್ಲ್ಲಿರುವ ಮೂರು ಬೆಕ್ಕುಗಳಲ್ಲಿ ಕೋವಿಡ್ ವೈರಸ್ ಪತ್ತೆಯಾಗಿದೆ.ಈ ಹಿನ್ನೆಲೆಯಲ್ಲಿ ಬೆಕ್ಕುಗಳನ್ನು ಮಿಂಕ್ ಫಾರ್ಮ್ ನೊಳಗೆ ಬರದಂತೆ ಅಥವಾ ಫಾರ್ಮ್ನಿಂದ ಹೊರ ಹೋಗದಂತೆ ತಡೆಯಬೇಕೆಂದು ಸರಕಾರ ಫಾರ್ಮ್ ಮಾಲಕರಿಗೆ ಸೂಚಿಸಿದೆ.
ಬಾವಲಿಗಳಿಂದ ವೈರಸ್ ಹರಡಿದೆ ಎಂದೇ ನಂಬಲಾಗಿದ್ದರೂ ಅನಂತರ ಮೃಗಾಲಯದಲ್ಲಿರುವ ಎಂಟು ಹುಲಿಗಳಲ್ಲಿ ಕೋವಿಡ್ ವೈರಸ್ ಸೋಂಕು ಪತ್ತೆಯಾಗಿರುವುದು ಹಲವು ಅನುಮಾನಗಳಿಗೆಡೆ ಮಾಡಿಕೊಟ್ಟಿದೆ.