ನವದೆಹಲಿ: ಕೋವಿಡ್-19 ಮಹಾಮಾರಿಗೆ ಇಡೀ ವಿಶ್ವವೇ ಅಕ್ಷರಶಃ ನಲುಗಿ ಹೋಗಿದೆ. ಹಲವು ದೇಶಗಳಲ್ಲಿ ಲಾಕ್ ಡೌನ್ ಮಾಡಲಾಗಿದ್ದರೂ ಈ ವೈರಸ್ ಮರಣಮೃದಂಗವನ್ನೇ ಬಾರಿಸುತ್ತಿದ್ದು, ಮಿಲಿಯನ್ ಗಟ್ಟಲೇ ಜನರು ಉದ್ಯೋಗ ಕಳೆದುಕೊಂಡಿದ್ದಾರೆ. ಮತ್ತೊಂದೆಡೆ ಬಡವರು ತುತ್ತು ಅನ್ನಕ್ಕೂ ಪರದಾಡುವ ಸ್ಥಿತಿ ಎದುರಾಗಿದೆ. ಏತನ್ಮಧ್ಯೆ ನಾಯಿಗಳು ಮತ್ತು ವ್ಯಕ್ತಿಯೋರ್ವ ರಸ್ತೆಯಲ್ಲಿ ಚೆಲ್ಲಿದ್ದ ಹಾಲನ್ನು ಸಮಾನಾಗಿ ಹಂಚಿಕೊಳ್ಳುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ಲಾಕ್ ಡೌನ್ ಬಡವರ ಮೇಲೆ ಬೀರಿದ ಕ್ರೂರತೆಗೆ ಈ ದೃಶ್ಯ ಸಾಕ್ಷಿಯಾಗುವಂತಿದೆ.
ಈಗ ವೈರಲ್ ಆಗಿರುವ ಈ ವಿಡಿಯೋದಲ್ಲಿ, ಬಡವನೋರ್ವ ತನ್ನ ಸಣ್ಣ ಮಣ್ಣಿನ ಪಾತ್ರೆಯಲ್ಲಿ ರಸ್ತೆಯಲ್ಲಿ ಚೆಲ್ಲಿದ್ದ ಹಾಲನ್ನು ತೆಗೆಯಲು ಪ್ರಯತ್ನಿಸುತ್ತಿರುವುದನ್ನು ಕಾಣಬಹುದು. ಅದೇ ವೇಳೆಯಲ್ಲಿ ರಸ್ತೆಯಲ್ಲಿದ್ದ ಶ್ವಾನಗಳು ಕೂಡ ಹಾಲನ್ನು ಕುಡಿಯುತ್ತಿರುತ್ತವೆ.
ಈ ಹೃದಯಸ್ಪರ್ಶಿ ದೃಶ್ಯಗಳು ಕಂಡುಬಂದಿದ್ದು ಆಗ್ರಾದ ರಾಂಬಾಗ್ ಬಳಿಯ ಚೌರಾಹದಲ್ಲಿ. ತಾಜ್ ಮಹಲ್ ನಿಂದ ಕೇವಲ 6 ಕಿಮೀ ದೂರದಲ್ಲಿರುವ ಈ ಗ್ರಾಮದಲ್ಲಿ ಬೆಳಗ್ಗೆ ಹಾಲನ್ನು ಕೊಂಡೊಯ್ಯಲು ಬಂದಿದ್ದ ವ್ಯಕ್ತಿಯೊಬ್ಬನ ಬೈಕು ಅಪಘಾತಕ್ಕೆ ಒಳಗಾಗುತ್ತದೆ. ಪರಿಣಾಮವಾಗಿ ಹಾಲಿನ ಪಾತ್ರೆ ರಸ್ತೆಯ ಮೇಲೆ ಬಿದ್ದು ಸುತ್ತಲೂ ಹರಡುತ್ತದೆ. ಕೆಲವೇ ಕ್ಷಣಗಳಲ್ಲಿ, ಹತ್ತಿರದಲ್ಲಿದ್ದ ನಾಯಿಗಳು ಚೆಲ್ಲಿದ ಹಾಲನ್ನು ಕುಡಿಯಲು ಪ್ರಾರಂಭಿಸಿದವು. ಇದೇ ವೇಳೆ ಬಡವನಂತೆ ಕಾಣುವ ವ್ಯಕ್ತಿಯೂ ಆಗಮಿಸಿ ರಸ್ತೆಯಲ್ಲಿದ್ದ ಹಾಲನ್ನು ತನ್ನ ಬಳಿಯಿದ್ದ ಮಡಕೆಗೆ ತುಂಬಿಸಿಕೊಳ್ಳಲು ಯತ್ನಿಸುತ್ತಾನೆ.
ಈ ವಿಡಿಯೋವನ್ನು ಸ್ಥಳೀಯರು ಚಿತ್ರಿಕರಿಸಿದ್ದು, ಅಧಿಕಾರಿಗಳು ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ. ಇದೇ ವೇಳೆ ನಿರ್ಗತಿಕರಿಗೆ ಆಹಾರ ವಿತರಿಸುವ ಕೆಲಸ ಸ್ಥಳೀಯ ಪೊಲೀಸ್ ಠಾಣೆಗಳದ್ದು ಎಂದು ಅಲ್ಲಿನ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಲಾಕ್ ಡೌನ್ ಘೋಷಿಸಿದಾಗಿನಿಂದ ಲಕ್ಷಾಂತರ ವಲಸೆ ಕಾರ್ಮಿಕರು ಮತ್ತು ಅವರ ಕುಟುಂಬಗಳು ಆದಾಯದ ಮೂಲಗಳಿಲ್ಲದೆ ತಮ್ಮ ಹಳ್ಳಿಗಳಿಗೆ ಕಾಲ್ನಡಿಗೆಯಲ್ಲಿ ಮರಳಿದ ದೃಶ್ಯವನ್ನೂ ಕೂಡ ಇದೇ ಸಂದರ್ಭದಲ್ಲಿ ನೆನಪಿಸಿಕೊಳ್ಳಬಹುದು.