ಜೋಹಾನ್ಸ್‌ಬರ್ಗ್: ಇಪ್ಪತ್ತು ವರ್ಷಗಳ ಹಿಂದೆ ಎಚ್‌ಐವಿ ವಿರುದ್ಧ ಹೋರಾಡುವಲ್ಲಿ ನಿಷ್ಕಾಳಜಿ ತೋರಿದ್ದ ದಕ್ಷಿಣ ಆಫ್ರಿಕ, ಈ ಬಾರಿ ಕೋವಿಡ್ ನಿಯಂತ್ರಣಕ್ಕೆ ತುರ್ತು ಕ್ರಮ ಕೈಗೊಂಡಿದೆ. ಇತಿಹಾಸದಿಂದ ಆ ದೇಶ ಪಾಠ ಕಲಿತಿರುವುದು ಸ್ಪಷ್ಟವಾಗಿದೆ. ಎಚ್‌ಐವಿ-ಏಡ್ಸ್ ಜೀವನ ಹಾಗೂ ಆರೋಗ್ಯ ವ್ಯವಸ್ಥೆಯನ್ನು ಹಾಳು ಮಾಡುತ್ತಿದ್ದ ಸಂದರ್ಭದಲ್ಲಿ ದ. ಆಫ್ರಿಕಾದಲ್ಲಿ ನಿತ್ಯ 1,000 ಜನ ಅಸುನೀಗುತ್ತಿದ್ದರು. ಈ ವೇಳೆ ನೆಲ್ಸನ್ ಮಂಡೇಲಾ ಅವರು, ಮಾನವ ಕುಲವು ಎದುರಿಸುತ್ತಿರುವ ಅತಿದೊಡ್ಡ ಬೆದರಿಕೆಗಳಲ್ಲಿ ಇದೂ ಒಂದು ಎಂದು ಹೇಳಿ, ಅಂತಾರಾಷ್ಟ್ರೀಯ ಸಹಕಾರ ಕೋರಿದ್ದರು. ಮಂಡೇಲಾ ಅವರ ಉತ್ತರಾಧಿಕಾರಿ ಥಾಬೊ ಎಂಬೆಕಿ ಈ ನಿಟ್ಟಿನಲ್ಲಿ ನಿಷ್ಕಾಳಜಿ ವಹಿಸಿದರು. ಅವರ ಸರಕಾರದಲ್ಲಿ ಆರೋಗ್ಯ ಸಚಿವರಾಗಿದ್ದ ಮಾಂಟೋ ತ್ಸಾಬಲಾಲಾ ಎಂಸಿಮಾಂಗ್ ಅವರು ವಿಜ್ಞಾನಿಗಳನ್ನೇ ಗದರಿದ್ದರು. ಆ ವಿಜ್ಞಾನಿಗಳ ತಂಡದಲ್ಲಿ ಒಬ್ಬರಾಗಿದ್ದ ಸಲೀಮ್ ಅಬ್ದುಲ್ ಕರೀಮ್ ಈಗ ದ. ಆಫ್ರಿಕಾದ ಕೋವಿಡ್ -19 ಸಲಹಾ ತಂಡವನ್ನು ಮುನ್ನಡೆಸುತ್ತಿದ್ದು, ಅವರ ಕಾರ್ಯ ವಿಶ್ವ ಆರೋಗ್ಯ ಸಂಸ್ಥೆಯ ಮೆಚ್ಚುಗೆ ಗಳಿಸಿದೆ.
ಎಪ್ರಿಲ್ ತಿಂಗಳಲ್ಲಿ ದ. ಆಫ್ರಿಕಾದಲ್ಲಿ ಕೋವಿಡ್ ಲಾಕ್‌ಡೌನ್ ಜಾರಿಗೊಳಿಸುವ ಮುನ್ನ ಎರಡು ತಾಸುಗಳಷ್ಟು ದೀರ್ಘವಾಗಿ ಮಾತನಾಡಿದ ಸಲೀಂ, ಕಠಿನ ಕ್ರಮಗಳೇಕೆ ಅನಿವಾರ್ಯ ಎಂಬುದನ್ನು ವಿವರಿಸಿದರು. ಜನ ಮನೆಯಿಂದ ಹೊರ ಬರಬಾರದು, ಸಾರ್ವಜನಿಕ ಸ್ಥಳಗಳಲ್ಲಿ ಚಟುವಟಿಕೆ ಇರಕೂಡದು. ಮದ್ಯ ಹಾಗೂ ತಂಬಾಕು ಮಾರಾಟ ಮತ್ತು ಬಳಕೆಯನ್ನೂ ನಿಷೇಧಿಸಬೇಕೆಂದು ಸಲೀಂ ಸೂಚಿಸಿದರು. ರಾಯಲ್ ಸೊಸೈಟಿಯ ಫೆಲೋ ಕೂಡ ಆಗಿರುವ ಸಲೀಂ ಹಲವು ಸಂಶೋಧನೆಗಳಿಗೆ ಹೆಸರಾಗಿದ್ದಾರೆ. ಅವರ ಪತ್ನಿ ಖುರೈಶಾ ಅಬ್ದುಲ್ ಕರಾಂ ಅವರೂ ಏಡ್ಸ್ ಕುರಿತಾದ ಸಂಶೋಧನೆಗಳಲ್ಲಿ ತೊಡಗಿದ್ದು, ಪತಿಯೊಂದಿಗೆ ಹಲವು ಪ್ರಶಸ್ತಿಗಳನ್ನು ಗಳಿಸಿದ್ದಾರೆ. ಎಚ್‌ಐವಿ ನಿಯಂತ್ರಣ ಹಾಗೂ ಚಿಕಿತ್ಸೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದ ಕರೀಂ ಅವರಿಗೂ ಕೋವಿಡ್-19 ಕುರಿತು ಹೆಚ್ಚಿನ ಅರಿವು ಇರಲಿಲ್ಲ. ನಟಾಲ್ ವಿಶ್ವವಿದ್ಯಾಲಯದಲ್ಲಿ ಅಬ್ದುಲ್ ಕರೀಂ ಅವರ ಸಹಪಾಠಿಯಾಗಿದ್ದ ಜ್ವೇಲಿ ಮೆಖೀಜಿ ಈಗ ದಕ್ಷಿಣ ಆಫ್ರಿಕಾದ ಆರೋಗ್ಯ ಸಚಿವರಾಗಿದ್ದಾರೆ. ಅವರೇ ಅಬ್ದುಲ್ ಕರೀಂ ಅವರನ್ನು ಕೋವಿಡ್-19 ನಿಯಂತ್ರಣ ತಂಡದ ಮುಖ್ಯಸ್ಥರನ್ನಾಗಿ ಆಯ್ಕೆ ಮಾಡಿದ್ದಾರೆ.
ಇದೇ ಮೆಖೀಜಿ ಗರ್ಭಿಣಿಯಿಂದ ಮಗುವಿಗೆ ಎಚ್‌ಐವಿ ವರ್ಗಾವಣೆಯಾಗುವುದನ್ನು ತಡೆಯಲು ಲಸಿಕೆಯ ಪ್ರಯೋಗ ಮಾಡುವ ಪ್ರಯತ್ನವನ್ನು ವಿರೋಧಿಸಿದ್ದರು. ಬಳಿಕ ತಮ್ಮ ಈ ನಡೆಗೆ ಅವರು ಕ್ಷಮಾಪಣೆಯನ್ನೂ ಕೇಳಿದ್ದರು. ಮೆಖೀಜಿಯವರ ಸಹೋದ್ಯೋಗಿ, ಸ್ಥಳೀಯ ಸರಕಾರದ ಸಚಿವೆ ಎನ್‌ಕೊಸಾಝಾನಾ ಡ್ಲಾಮಿನಿ – ಝುಮಾ ಅವರು ಏಡ್ಸ್ ವಿರುದ್ಧ ದ. ಆಫ್ರಿಕಾದ ಆರಂಭಿಕ ಹೋರಾಟ ನಡೆಸಿದ ತಂಡದಲ್ಲಿದ್ದರು. ಆದರೆ, ಒಂದು ವಿಷಪೂರಿತ ಲಸಿಕೆಯನ್ನು ಏಡ್ಸ್ ಚಿಕಿತ್ಸೆಗೆ ಬಳಸುವುದನ್ನು ಬೆಂಬಲಿಸಿ ಪ್ರತಿಷ್ಠೆಯನ್ನು ಮಣ್ಣುಪಾಲು ಮಾಡಿಕೊಂಡಿದ್ದರು. 2014ರಲ್ಲಿ ಎಬೋಲಾ ಪತ್ತೆಯಾದಾಗ ಅವರು ಆಫ್ರಿಕಾ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಆ್ಯಂಡ್ ಪ್ರಿವೆನ್ಶನ್ ಎಂಬ ಕೇಂದ್ರವನ್ನು ಸ್ಥಾಪಿಸಿದರು. ಈಗ ಅದು ಕೋವಿಡ್-19 ವಿರುದ್ಧದ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ದ. ಆಫ್ರಿಕಾದಲ್ಲಿ ಅತಿಹೆಚ್ಚು ಜನ ಮಾತನಾಡುವ ಝುಲು ಭಾಷೆಯಲ್ಲಿ ಸರಕಾರದ ಯೋಜನೆಗಳನ್ನು ವಿವರಿಸುತ್ತ ಮತ್ತೆ ಜನಪ್ರಿಯತೆ ಗಳಿಸಿದ್ದಾರೆ.
ಕೋವಿಡ್-19 ಒಂದು ಸಾಮಾಜಿಕ ಪಿಡುಗು. ಅದು ವ್ಯಕ್ತಿಗಳನ್ನೇ ಬಾಧಿಸುವುದಾದರೂ ಸಾಮಾಜಿಕ ವಾಗಿಯೇ ಅದನ್ನು ನಿವಾರಿಸಬೇಕಾಗಿದೆ. ವೈಯಕ್ತಿಕ ವರ್ತನೆಗಳಿಗಿಂತಲೂ ಸಾಮುದಾಯಿಕ ಜವಾಬ್ದಾರಿ ಮಹತ್ವದ್ದು ಎಂಬ ಅಂಶಕ್ಕೆ ದ. ಆಫ್ರಿಕಾ ಒತ್ತು ನೀಡಿದೆ. ಏಡ್ಸ್‌ನಂತೆ ಕೋವಿಡ್-19ಗೂ ಸೂಕ್ತ ಲಸಿಕೆ ಸಂಶೋಧಿಸುವುದು ದೊಡ್ಡ ಸವಾಲು. ಆದರೆ ಅದು ಯಾವುದೋ ಖಾಸಗಿ ಸಂಸ್ಥೆಯ ಆಸ್ತಿಯಾಗಿ, ಪೇಟೆಂಟ್ ಪಡೆದಿರುವುದಿಲ್ಲ ಎನ್ನುವುದಕ್ಕೆ ಏನು ಖಾತ್ರಿ ಇದೆ? ಅಭಿವೃದ್ಧಿಶೀಲ ರಾಷ್ಟ್ರಗಳು ಲಸಿಕೆಗಾಗಿ ಕಾಯುತ್ತ ನಿಂತಿದ್ದೇ ಫಲ ಎಂಬಂತಾಗಬಾರದಲ್ಲವೇ? ಎಂದು ಅಲ್ಲಿನ ಪತ್ರಕರ್ತ ಹೇವುಡ್ ಪ್ರಶ್ನಿಸಿದ್ದಾರೆ.
ಏಡ್ಸ್ ಹಬ್ಬಿದಾಗ ದೊಡ್ಡ ಪ್ರಮಾಣದಲ್ಲಿ ಸಾವು-ನೋವುಗಳು ಸಂಭವಿಸಿದವು. ಪ್ರತಿ ವಾರಾಂತ್ಯದಲ್ಲೂ ಅಂತ್ಯ ಸಂಸ್ಕಾರಗಳಿಗೆ ತೆರಳುವುದೇ ಕೆಲಸವಾಗಿತ್ತು. ಆಗ ಏಡ್ಸ್‌ನಿಂದ, ಈಗ ಕೋವಿಡ್- 19ನಿಂದ ಸತ್ತವರೆಲ್ಲರೂ ಯುವಕರೇ ಆಗಿದ್ದಾರೆ ಎಂದು ಅವರು ನೋವು ವ್ಯಕ್ತಪಡಿಸಿದ್ದಾರೆ. ಕೋವಿಡ್ ಪ್ರಕರಣಗಳ ಸಂಖ್ಯೆ 550 ಆದೊಡನೆ ದ. ಆಫ್ರಿಕ ಗಡಿಗಳನ್ನು ಮುಚ್ಚಿ ಕಠಿನ ಲಾಕ್‌ಡೌನ್ ಜಾರಿಗೆ ತಂದಿತು. ಪರಿಣಾಮ ಸಾವಿನ ಸಂಖ್ಯೆ 480ಕ್ಕೆ ಸೀಮಿತಗೊಂಡಿತು. ವಿಜ್ಞಾನಕ್ಕೆ ರಾಜಕೀಯಕ್ಕಿಂತ ಪ್ರಾಮುಖ್ಯ ಕೊಟ್ಟಿದ್ದರಿಂದ ಇದು ಸಾಧ್ಯವಾಯಿತು.