ಶಹಾಬಾದ: ನಗರದಲ್ಲಿ ಕೇವಲ ಮೂರು ದಿನಗಳಲ್ಲಿ 16ಕ್ಕೂ ಹೆಚ್ಚು ಜನರಲ್ಲಿ ಕೊರೊನಾ ಪಾಸಿಟಿವ್ ಕಂಡು ಬಂದಿದ್ದು, ಕೋವಿಡ್-19 ಮೂರನೇ ಅಲೆ ಶಹಾಬಾದ ನಗರಕ್ಕೆ ಬಿಸಿ ತಟ್ಟಿದ್ದು, ನಗರದಲ್ಲಿ ಆತಂಕದ ಮನೆ ಮಾಡಿದೆ.
ಮೂರು ದಿನಗಳ ಹಿಂದಷ್ಟೇ ಎರಡು ಕೊರೊನಾ ಪಾಸಿಟಿವ್ ಕಂಡು ಬಂದಿತ್ತು. ಅದರ ಬೆನ್ನಲ್ಲೆ ನಗರದ ಕೆನರಾ ಬ್ಯಾಂಕ್‌ನಲ್ಲಿ 4 ಹಾಗೂ ಎಸ್‌ಬಿಐ ಬ್ಯಾಂಕ್‌ನ 5 ಸಿಬ್ಬಂದಿಗಳಿಗೆ ಕೊರೊನಾ ಪಾಸಿಟಿವ್ ಕಂಡು ಬಂದಿದೆ ಎಂದು ಹೇಳಲಾಗುತ್ತಿದ್ದು, ಎರಡು ಬ್ಯಾಂಕ್‌ಗಳನ್ನು ಮುಚ್ಚಲಾಗಿದೆ. ಅಲ್ಲದೇ ಸೋಮವಾರದಂದು ಪಿಲೀಸರಿಗೆ ಕೋವಿಡ್-19 ಪರೀಕ್ಷೆಗೆ ಒಳಪಡಿಸಿದಾಗ ಇಬ್ಬರು ಪೊಲೀಸ್ ಪೇದೆಗಳಿಗೆ ಕೊರೊನಾ ದೃಢಪಟ್ಟಿದೆ. ಎಲ್ಲ ಸಿಬ್ಬಂದಿಗೆ ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ. ಆದರೂ ದಿನದಿಂದ ದಿನಕ್ಕೆ ಕೊರೊನಾ ಸೋಂಕಿರ ವ್ಯಕ್ತಿಗಳು ಪತ್ತೆಯಾಗುತ್ತಿದ್ದು, ನಗರದಲ್ಲಿ ಆತಂಕ ಸೃಷ್ಟಿಸುತ್ತಿದೆ.
ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಸೋಂಕಿತ ವ್ಯಕ್ತಿಗಳನ್ನು ಪತ್ತೆ ಮಾಡಿ ಅವರನ್ನು ಹೋಮ್ ಕ್ವಾರಂಟೈನ್ ಮಾಡಿಸಲು ಮುಂದಾಗಿದ್ದಾರೆ. ಅಲ್ಲದೇ ಶಾಲಾ-ಕಾಲೇಜುಗಳಿಗೆ ತೆರಳಿ 15-18 ವರ್ಷದೊಳಗಿನ ಮಕ್ಕಳಿಗೆ ಲಸಿಕೆಗಳನ್ನು ಹಾಕಲು ಮುಂದಾಗಿದ್ದಾರೆ. 60 ವರ್ಷ ಮೇಲ್ಪಟ್ಟವರಿಗೆ ಮುನ್ನೆಚ್ಚರಿಕಾ ಲಸಿಕೆ ಕೂಡ ನೀಡಲಾಗುತ್ತಿದೆ. ಇದರ ಮಧ್ಯೆಯೂ ಕೊರೊನಾ ಹೆಚ್ಚಾಗುತ್ತಿರುವುದು ಮಾತ್ರ ಆತಂಕಕ್ಕೆ ಎಡೆ ಮಾಡಿಕೊಟ್ಟಿದೆ.
ದಿನದಿಂದ ದಿನಕ್ಕೆ ಕೊರೊನಾ ಹೆಚ್ಚಾಗುತ್ತಿದ್ದರೂ ಸಾರ್ವಜನಿಕರು ಮಾತ್ರ ಯಾವುದೇ ಮುಂಜಾಗ್ರತ ಕ್ರಮ ಕೈಗೊಳ್ಳುತ್ತಿಲ್ಲ ಎಂಬುದೇ ಖೇದದ ಸಂಗತಿ. ಮಾಸ್ಕ್ ಧರಿಸದೇ ಎಲ್ಲೆಂದರಲ್ಲಿ ಓಡಾಡುತ್ತಿದ್ದಾರೆ. ಅವರನ್ನು ಯಾರು ಹೇಳ್ಳೋರು ಕೆಳ್ಳೋರು ಇಲ್ಲದಂತಾಗಿದೆ. ಮತ್ತೆ ತಾಲೂಕಾಡಳಿತ ಎರಡನೇ ಅಲೆ ಸಂದರ್ಭದಲ್ಲಿ ಕೈಗೊಂಡ ಕಟ್ಟು ನಿಟ್ಟಿನ ಕ್ರಮ ಮತ್ತೆ ಕೈಗೊಳ್ಳಬೇಕಾಗಿದೆ.
ನಗರದಲ್ಲಿ ಕೊರೊನಾ ಪಾಸಿಟಿವಿಟಿ ದರ ಹೆಚ್ಚಾಗುತ್ತಿದ್ದು, ಆತಂಕ ಮನೆಮಾಡಿದೆ. ಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಸಾಮಾಜಿಕ ಅಂತರ ಕಾಪಾಡಿ. ನಮ್ಮ ಸ್ವಾಸ್ಥ್ಯದ ಜತೆಗೆ ಸಾಮಾಜಿಕ ಸ್ವಾಸ್ಥ್ಯ ಕಾಪಾಡುವುದು ನಮ್ಮೆಲ್ಲರ ಜವಾಬ್ದಾರಿ. ಮಾಸ್ಕ್ ಧರಿಸದ ಜನರಿಗೆ ದಂಡ ಹಾಕಲು ಮುಂದಾಗುತ್ತಿದ್ದೇವೆ. ಅದಕ್ಕಾಗಿ ತಂಡ ರಚಿಸುತ್ತಿದ್ದೇವೆ. ಕೂಡಲೇ ಕೊರೊನಾ ತಡೆಗಟ್ಟಲು ಎಲ್ಲ ಕ್ರಮಕೈಗೊಳ್ಳುತ್ತೇವೆ.
-ಸುರೇಶ ವರ್ಮಾ, ತಹಶೀಲ್ದಾರ್