Advertisement

ಮಂಗಳೂರು ಮೂಲದ ಕೋವಿಡ್‌ ಸೇನಾನಿಗಳು

02:16 PM May 10, 2020 | sudhir |

ವೈದ್ಯಕೀಯ ಉಪಕರಣ ಸಾಗಿಸಿದ ಕ್ಯಾ| ಸಫ್ರಾಜ್‌
ಮಂಗಳೂರು: ಮಂಗಳೂರು ಮೂಲದ ಪೈಲಟ್‌ ಕ್ಯಾಪ್ಟನ್‌ ಸಫ್ರಾಜ್‌ ಝಾಕಿರ್‌ ಅವರು ಸರಕಾರದ ಪರವಾಗಿ ಇಂಡಿಗೊ ವಿಮಾನವನ್ನು ಬೆಂಗಳೂರಿನಿಂದ ಸಿಂಗಾಪುರಕ್ಕೆ ಕೊಂಡೊಯ್ದುಕೋವಿಡ್ ನಿಯಂತ್ರಣ ಸಂಬಂಧಿತ ವೈದ್ಯಕೀಯ ಉಪಕರಣಗಳನ್ನು ತರುವ ಮೂಲಕ ಕೋವಿಡ್‌ ಸೇನಾನಿ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ.

Advertisement

ಗುರುವಾರ ಮಧ್ಯರಾತ್ರಿ ಬೆಂಗಳೂರಿನಿಂದ ಸಿಂಗಾಪುರಕ್ಕೆ ಅವಶ್ಯ ಸರಕು ಸಾಗಿಸಿದ್ದ ಸಫ್ರಾಜ್‌ ಅವರು ವೈದ್ಯಕೀಯ ಉಪಕರಣಗಳನ್ನು ತುಂಬಿಸಿಕೊಂಡು ಶುಕ್ರವಾರ ಮಧ್ಯಾಹ್ನ 2 ಗಂಟೆಗೆ ವಾಪಸ್‌ ಬೆಂಗಳೂರಿನಲ್ಲಿ ಬಂದಿಳಿದಿದ್ದಾರೆ. ಅವರ ಜತೆ ಮೂವರು ಕೋ ಪೈಲಟ್‌ಗಳು ಮತ್ತು ಇಬ್ಬರು ಎಂಜಿನಿಯರುಗಳಿದ್ದರು.

15 ವರ್ಷಗಳಿಂದ ಅವರು ಪೈಲಟ್‌ ವೃತ್ತಿಯಲ್ಲಿರುವ ಅವರು ಮಾಜಿ ರಾಜ್ಯಸಭಾ ಸದಸ್ಯ ಹಾಗೂ ಹಿರಿಯ ವಕೀಲ ಮಂಗಳೂರಿನ ಬಿ. ಇಬ್ರಾಹಿಂ ಅವರ ಪುತ್ರರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಡೆಕ್ಕನ್‌ ಏರ್‌ಲೈನ್ಸ್‌ನಲ್ಲಿ ವೃತ್ತಿಜೀವನ ಆರಂಭಿಸಿ ಬಳಿಕ ಕಿಂಗ್‌ಫಿಶರ್‌, ಜೆಟ್‌ ಏರ್‌ವೆಸ್‌ನಲ್ಲಿ ಪೈಲಟ್‌ ಆಗಿದ್ದರು.

ಕೋವಿಡ್ ವಿರುದ್ಧದ ಹೋರಾಟದ  ಭಾಗವಾಗಿ ಕೇಂದ್ರ ಸರಕಾರ ಅವಶ್ಯ ವಸ್ತುಗಳ ಸಾಗಾಟ ಸೇವೆಗೆ ಖಾಸಗಿ ವಿಮಾನ ಸಂಸ್ಥೆಗಳಿಗೆ ಅವಕಾಶ ನೀಡಿದಾಗ ಇಂಡಿಗೊ ಸಂಸ್ಥೆ ಪ್ರಥಮವಾಗಿ ಮುಂದೆ ಬಂದಿತ್ತು. ನನ್ನ ಪುತ್ರ ಸಂಸ್ಥೆಯ ಮೇಲಧಿಕಾರಿಗಳನ್ನು ಸಂಪರ್ಕಿಸಿ ಕೋವಿಡ್  ನಿಯಂತ್ರಣ ಪರಿಹಾರ ಕಾರ್ಯಗಳಲ್ಲಿ ವೈಮಾನಿಕ ಕಾರ್ಯಾಚರಣೆಗೆ ಮುಂದೆ ಬಂದಿದ್ದ. ಕೋವಿಡ್ ವಿರುದ್ಧದ ಹೋರಾಟದಲ್ಲಿ ಆತ ಭಾಗವಹಿಸಿದ ಬಗ್ಗೆ ನನಗೆ ಹೆಮ್ಮೆ ಎನಿಸುತ್ತಿದೆ.
– ಬಿ. ಇಬ್ರಾಹಿಂ
(ಕ್ಯಾ| ಸಫ್ರಾìಜ್‌ ಝಾಕಿರ್‌ ಅವರ ತಂದೆ)

***

Advertisement

ಪ್ರಯಾಣಿಕರನ್ನು ಕರೆತಂದ ಕ್ಯಾ| ಮೈಕೆಲ್‌ ಸಲ್ಡಾನ್ಹಾ
ಮಂಗಳೂರು: ಕೋವಿಡ್ ನಿಂದಾಗಿ ವಿದೇಶದಲ್ಲಿ ಸಿಲುಕಿಕೊಂಡಿರುವ ಭಾರತೀಯರನ್ನು ಸ್ವದೇಶಕ್ಕೆ ಕರೆ ತರುವ ಐತಿಹಾಸಿಕ “ವಂದೇ ಭಾರತ್‌ ಮಿಷನ್‌ ಏರ್‌ಲಿಫ್ಟ್ ನ  ಭಾಗವಾಗಿ ದುಬಾೖಯಿಂದ ಕೇರಳಕ್ಕೆ ಬಂದ 2ನೇ ವಿಮಾನವನ್ನು ಚಲಾಯಿಸಿದ ಪೈಲಟ್‌ ಮಂಗಳೂರಿನವರು ಎನ್ನುವುದು ಕರಾವಳಿಯ ಜನರಿಗೆ ಅಭಿಮಾನದ ಸಂಗತಿ.

ದುಬಾೖಯಿಂದ 182 ಪ್ರಯಾಣಿರನ್ನು ಹೊತ್ತ ಏರ್‌ ಇಂಡಿಯಾ ವಿಮಾನ ಗುರುವಾರ ರಾತ್ರಿ 10.32ಕ್ಕೆ ಕೇರಳದ ಕೋಯಿಕ್ಕೋಡ್‌ನ‌ಲ್ಲಿ ಬಂದಿಳಿದಿದ್ದು, ಅದನ್ನು ಮಂಗಳೂರಿನ ಕ್ಯಾ|ಮೈಕೆಲ್‌ ಸಲ್ಡಾನ್ಹಾ ಚಲಾಯಿಸಿದ್ದರು.

ಗರ್ಭಿಣಿಯರು ಮತ್ತು ಅಂಗವಿಕಲರಿಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ಈ ವಿಮಾನದಲ್ಲಿ 8 ಮಂದಿ ಗರ್ಭಿಣಿಯರು ಹಾಗೂ 9 ಮಂದಿ ಗಾಲಿಕುರ್ಚಿಯ ಪ್ರಯಾಣಿಕರು ಸೇರಿದಂತೆ 177 ಮಂದಿ ವಯಸ್ಕ ಪ್ರಯಾಣಿಕರು ಮತ್ತು 5 ಮಂದಿ ಮಕ್ಕಳಿದ್ದರು.ಮೈಕೆಲ್‌ ಅವರು 12 ವರ್ಷ ಗಳಿಂದ ಏರ್‌ ಇಂಡಿಯಾದಲ್ಲಿ ಪೈಲಟ್‌ ಆಗಿದ್ದು, ಮಧ್ಯಪ್ರಾಚ್ಯದ ವಿವಿಧ ದೇಶಗಳು,ಸಿಂಗಾಪುರ, ಢಾಕಾ, ಕೊಲಂಬೊ ಮುಂತಾದ ದೇಶಗಳಿಗೆ ಹಾರಾಟ ನಡೆಸಿದ ಅನುಭವ ಹೊಂದಿದ್ದಾರೆ.

ತುರ್ತು ಕರೆ ಬಂದಿತ್ತು
“ಕೋವಿಡ್ ನಿಂದಾಗಿ ವಿದೇಶದಲ್ಲಿ ಸಿಲುಕಿಕೊಂಡಿರುವ ಭಾರತೀಯರನ್ನು ಸ್ವದೇಶಕ್ಕೆ ಕರೆ ತರುವ ಕೇಂದ್ರ ಸರಕಾರದ “ವಂದೇ ಭಾರತ್‌ ಮಿಷನ್‌ ಏರ್‌ಲಿಫ್ಟ್‌’ ಗೆ ಪೈಲಟ್‌ ಕೊರತೆ ಇದ್ದ ಕಾರಣ ನನಗೆ ತುರ್ತು ಕರೆ ಬಂದಿತ್ತು. ನಾನು ಮೇ 6ರಂದು ಮಂಗಳೂರಿನಿಂದ ಕಾರಿನಲ್ಲಿ ಹೊರಟು ಐದೂವರೆ ಗಂಟೆ ಆವಧಿಯಲ್ಲಿ ಕೋಯಿಕ್ಕೋಡ್‌ ವಿಮಾನ ನಿಲ್ದಾಣಕ್ಕೆ ತಲುಪಿದೆನು. ಮೇ 7ರಂದು ವಿಮಾನವನ್ನು ದುಬಾೖಗೆ ಕೊಂಡೊಯ್ದು ಅದೇ ದಿನ ಪ್ರಯಾಣಿಕರೊಂದಿಗೆ ಮರಳಿದ್ದೇನೆ’ ಎಂದು ಕ್ಯಾ| ಮೈಕೆಲ್‌ ಉದಯವಾಣಿಗೆ ತಿಳಿಸಿದ್ದಾರೆ.

ವಿಮಾನ ಏರುವ ಮೊದಲು ನನ್ನನ್ನು ಕೋವಿಡ್‌ ಪರೀಕ್ಷೆಗೆ ಒಳಪಡಿಸಿದ್ದು, ವರದಿ ನೆಗೆಟಿವ್‌ ಎಂದು ದೃಢವಾದ ಬಳಿಕ ವಿಮಾನ ಹಾರಾಟಕ್ಕೆ ಅವಕಾಶ ನೀಡಿದ್ದರು. ದುಬಾೖಯಿಂದ ಮರಳಿದಾಗ ಮತ್ತೆ ಪರೀಕ್ಷೆಗೆ ಒಳಪಡಿಸಲಾಗಿದೆ.ವಿದೇಶದಲ್ಲಿ ಸಿಲುಕಿಕೊಂಡಿದ್ದ ಭಾರತೀಯರನ್ನು ಕರೆತಂದಿರುವ ಬಗ್ಗೆ ಹೆಮ್ಮೆ ಎನಿಸುತ್ತಿದೆ.
– ಕ್ಯಾ| ಮೈಕೆಲ್‌ ಸಲ್ಡಾನ್ಹಾ

Advertisement

Udayavani is now on Telegram. Click here to join our channel and stay updated with the latest news.

Next