ಹರಿಹರ: ಕೋವಿಡ್-19 ನಿಮಿತ್ತಆರೋಗ್ಯ ಇಲಾಖೆ ಗುತ್ತಿಗೆ ಆಧಾರಿತವಾಗಿನೇಮಿಸಿಕೊಂಡ ಲ್ಯಾಬ್ ಟೆಕ್ನಿಷಿಯನ್ ಮತ್ತು ಕಂಪ್ಯೂಟರ್ ಆಪರೇಟರ್‌ಗಳು ಕಳೆದೆರಡು ತಿಂಗಳಿನಿಂದ ಸಂಬಳವಿಲ್ಲದೆ ಸಂಕಷ್ಟಕ್ಕೀಡಾಗಿದ್ದಾರೆ.
ಸಾರ್ವತ್ರಿಕ ಕೋವಿಡ್ ತಪಾಸಣೆಕಾರ್ಯಕ್ಕೆ ಸರ್ಕಾರ ರಾಜ್ಯಾದ್ಯಂತ ಸಾವಿರಕ್ಕೂ ಹೆಚ್ಚು ಲ್ಯಾಬ್ ಟೆಕ್ನಿಷಿಯನ್‌ಮತ್ತು ಕಂಪ್ಯೂಟರ್ ಆಪರೇಟರ್‌ಗಳನ್ನುಮಾಸಿಕ 10 ಸಾವಿರ ರೂ. ಗೌರವಧನಹಾಗೂ ಪ್ರತಿ ತಪಾಸಣೆಗೆ 15 ರೂ.ಇನ್ಸೆಂಟಿವ್ ನೀಡುವುದಾಗಿ ಹೇಳಿ ಗುತ್ತಿಗೆಆಧಾರದಲ್ಲಿ ನೇಮಿಸಿಕೊಳ್ಳಲಾಗಿದೆ. ಇದು ಅಲ್ಪಾವಧಿಯ ನೇಮಕವಾದರೂ ಸೂಕ್ತ ಕೆಲಸವಿಲ್ಲದವರು, ಲಾಕ್‌ಡೌನ್ ನಿಂದ ನಿರುದ್ಯೋಗಿಗಳಾಗಿದ್ದವರು ತಾತ್ಕಾಲಿಕವಾದರೂ ಬದುಕಿಗೆ ಆಧಾರವಾಯ್ತಲ್ಲ ಎಂದು ಕೆಲಸಕ್ಕೆಸೇರಿಕೊಂಡಿದ್ದರು.
ನಗರ ಮಾತ್ರವಲ್ಲದೆ ಹಳ್ಳಿ ಹಳ್ಳಿಗೂ ತೆರಳಿ ಕೋವಿಡ್ ಪರೀಕ್ಷೆಗೆ ಮೂಗುಮತ್ತು ಗಂಟಲು ದ್ರವ ಸಂಗ್ರಹ, ಕೋವಿಡ್ ಸಂಬಂಧಿ ಅಂಕಿ-ಅಂಶ ಕಲೆ ಹಾಕುವ ಕಾರ್ಯವನ್ನು ಸಮರೋಪಾದಿಯಲ್ಲಿ ಮಾಡುತ್ತಿದ್ದಾರೆ. ಕೋವಿಡ್‌ಎಂದರೆ ಮೂಗು ಮುರಿಯುವ ಜನರಿಂದ ಎಡರು-ತೊಡರುಗಳನ್ನು ಎದುರಿಸಿ,ಜಾಗೃತಿ ಮೂಡಿಸಿ, ಬಿಸಿಲು, ಗಾಳಿ, ಮಳೆ ಲೆಕ್ಕಿಸದೆ ಬಯಲಲ್ಲಿ ಕುಳಿತು ತಪಾಸಣೆ ಮಾಡುತ್ತಿದ್ದಾರೆ. ನೈಪುಣ್ಯತೆ ಹೊಂದಿದ್ದರೂ ಇವರಿಗೆ ನೀಡುತ್ತಿರುವುದು ಅಲ್ಪ ಸಂಬಳ. ಕಳೆದ ಸೆಪ್ಟಂಬರ್, ಅಕ್ಟೋಬರ್ ತಿಂಗಳಲ್ಲಿ ಅದನ್ನೂ ನೀಡದೆ ಸರ್ಕಾರ, ಗುತ್ತಿಗೆ ಆಧಾರಿತ ನೌಕರರ ಕುಟುಂಬಗಳನ್ನುಸಂಕಷ್ಟಕ್ಕೆ ದೂಡಿದೆ. ಹಲವು ಸಿಬ್ಬಂದಿ ತಮ್ಮ ಸ್ವಂತ ಖರ್ಚಿನಲ್ಲಿ 20-30 ಕಿಮೀ ದೂರ ಪ್ರಯಾಣಿಸಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಬರುವ ಅರ್ಧ ಸಂಬಳ ಪ್ರಯಾಣ ವೆಚ್ಚ,ಚಹಾ, ತಿಂಡಿಗೆ ಖರ್ಚಾಗುತ್ತದೆ. ಈಗ ಎರಡು ತಿಂಗಳಿನಿಂದ ಸಂಬಳವಿಲ್ಲದೆ ಈಖರ್ಚನ್ನು ನಿಭಾಯಿಸುವುದು ಕಷ್ಟವಾಗಿದೆ. ಕೆಲಸವನ್ನು ಬಿಡಲೂ ಆಗದೆ, ನಿರ್ವಹಿಸಲೂ ಆಗದ ಸ್ಥಿತಿಯಲ್ಲಿ ಇವರಿದ್ದಾರೆ. ದಾವಣಗೆರೆ ಜಿಲ್ಲೆಯಲ್ಲಿ ತಲಾ 36ಲ್ಯಾಬ್ ಟೆಕ್ನಿಷಿಯನ್ ಮತ್ತು ಕಂಪ್ಯೂಟರ್ ಆಪರೇಟರ್‌ಗಳಿದ್ದಾರೆ. ರಾಜ್ಯದ 36 ಜಿಲ್ಲೆಗಳಲ್ಲಿ ಇವರ ಸಂಖ್ಯೆ ಸಾವಿರ ದಾಟುತ್ತದೆ. ಕೋವಿಡ್-19 ನಿರ್ವಹಣೆಗೆ ಅನುದಾನದ ಕೊರತೆ ಇಲ್ಲ ಎನ್ನುವ ಸಚಿವರು, ಕೂಡಲೇ ಬಾಕಿ ಸಂಬಳ ಹಾಗೂ ಇನ್ಸೆಂಟಿವ್ ಬಿಡುಗಡೆ ಮಾಡಬೇಕಿದೆ.
ಎರಡು ತಿಂಗಳ ಬಾಕಿ ಸಂಬಳ ಹಾಗೂ ಇನ್ಸೆಂಟಿವ್ ಬಿಡುಗಡೆ ಮಾಡಲು ಆರೋಗ್ಯ ಇಲಾಖೆ ಆಯುಕ್ತರಿಗೆ ಪತ್ರ ಬರೆದಿದ್ದೇವೆ. ಕೆಲ ದಿನಗಳಲ್ಲಿ ಅನುದಾನ ಬರುವ ನಿರೀಕ್ಷೆಯಿದೆ.
–ಡಾ| ಎಲ್. ನಾಗರಾಜ್, ಡಿಎಚ್ಒ