Advertisement

ಮೈಮೇಲೆ ದೇವ್ರು ಬಂದ್ರೂ ನಿಲ್ಲದ ಕೊರೊನಾ ಲಸಿಕೆ ನೀಡಿಕೆ!

02:49 PM Oct 24, 2021 | Team Udayavani |

ರಾಯಚೂರು: ಕೇಂದ್ರ ಸರ್ಕಾರ ದೇಶದಲ್ಲಿ 100 ಕೋಟಿಗೂ ಅಧಿಕ ಡೋಸ್‌ ಕೋವಿಡ್‌ ಲಸಿಕೆಯನ್ನು ನೀಡುವ ಮೂಲಕ ಸಾಧನೆ ಮಾಡಿದ್ದರೆ, ಜಿಲ್ಲೆಯಲ್ಲಿ ಜನ ಇಂದಿಗೂ ಲಸಿಕೆ ಹಾಕಿಸಿಕೊಳ್ಳಲು ಹೈಡ್ರಾಮಾ ನಡೆಸುತ್ತಿದ್ದಾರೆ.

Advertisement

ಮನೆ-ಮನೆಗೆ ಹೋಗಿ ಲಸಿಕೆ ಹಾಕಲು ಮುಂದಾದರೂ ಜನ ಮಾತ್ರ ನಾನಾ ರೀತಿಯಲ್ಲಿ ಪ್ರತಿರೋಧ ಒಡ್ಡುವ ಮೂಲಕ ಅಸಹಕಾರ ಮುಂದುವರಿಸಿದ್ದಾರೆ.

ಕೊರೊನಾ ನಿಯಂತ್ರಣಕ್ಕೆ ಸರ್ಕಾರ ಕೋವ್ಯಾಕ್ಸಿನ್‌ ಹಾಗೂ ಕೋವಿಶೀಲ್ಡ್‌ ಲಸಿಕೆ ಹಾಕಲು ಮುಂದಾದಾಗ ಸಾಕಷ್ಟು ವಿದ್ಯಾವಂತರೇ ಹಿಂಜರಿದರು. ಆದರೆ, ಕ್ರಮೇಣ ಲಸಿಕೆ ಪ್ರಭಾವದ ಬಗ್ಗೆ ಎಲ್ಲೆಡೆ ಸುದ್ದಿಯಾಗುತ್ತಿದ್ದಂತೆ ಜನ ನಾ ಮುಂದು ತಾ ಮುಂದು ಎಂದು ಹಾಕಿಸಿಕೊಂಡರು. ಕೊರೊನಾ 2ನೇ ಅಲೆಯ ವೇಳೆ ಲಸಿಕೆ ಬೇಕು ಎಂದು ಸರತಿಯಲ್ಲಿ ನಿಂತರೂ ಸಿಗಲಿಲ್ಲ. ಈಗ ಸರ್ಕಾರ ಲಸಿಕೆ ಹಾಕಲು ಮನೆಗೆ ಬಂದರೂ ನಮಗೆ ಬೇಡವೇ ಬೇಡ ಎಂದು ಹಠ ಹಿಡಿಯುವ ಮೂಲಕ ಅಧಿಕಾರಿಗಳಿಗೆ ಕಿರಿಕಿರಿ ಮಾಡುತ್ತಿದ್ದಾರೆ.

ಜಿಲ್ಲೆಯಲ್ಲಿ ಈವರೆಗೆ ಮೊದಲ ಶೇ.73.5ರಷ್ಟು ಮೊದಲ ಡೋಸ್‌ ಲಸಿಕೆ ನೀಡಿದ್ದರೆ, ಶೇ.30ರಷ್ಟು ಜನರಿಗೆ 2ನೇ ಡೋಸ್‌ ಲಸಿಕೆ ನೀಡಲಾಗಿದೆ. ಫ್ರಂಟ್‌ ಲೈನ್‌ ವಾರಿಯರ್ಗಳಿಗೆ ಶೇ.100ರಷ್ಟು ಲಸಿಕೆ ನೀಡಲಾಗಿದೆ. ಈಗ ಸಾರ್ವಜನಿಕರ ಸರದಿ ಬಂದಿದ್ದು, ಎಲ್ಲರೂ ಲಸಿಕೆ ಹಾಕಿಸಿಕೊಳ್ಳುತ್ತಿಲ್ಲ. ಅದರಲ್ಲೂ ಗ್ರಾಮೀಣ ಭಾಗದ ಜನ ಲಸಿಕೆ ಬೇಡವೇ ಬೇಡ ಎಂದು ಚಿಕ್ಕ ಮಕ್ಕಳಂತೆ ಹಠ ಹಿಡಿಯುತ್ತಿದ್ದಾರೆ.

ಇದನ್ನೂ ಓದಿ: ಗೋಲ್ಡನ್ ಸ್ಟಾರ್ ನಟನೆಯ ‘ಸಖತ್’ ಚಿತ್ರದ ಟೀಸರ್ ಬಿಡುಗಡೆ

Advertisement

ಮೈ ಮೇಲೆ ದೇವ್ರು ಬರುತ್ತೆ

ಹಿಂದಿನ ಡಿಸಿ ಡಾ| ಬಿ.ಸಿ.ಸತೀಶ ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಿದ್ದು, ಆಶಾ, ಅಂಗನವಾಡಿ ನೌಕರರು, ಆರೋಗ್ಯ ಸಹಾಯಕರು ಹಳ್ಳಿಗಳಿಗೆ ಲಸಿಕೆ ಹಾಕಿಸುತ್ತಿದ್ದಾರೆ. ಆದರೆ, ಇವರಿಗೆ ಕೆಲವರು ಮಣಿಯದೆ ನಮಗೆ ಲಸಿಕೆ ಬೇಡ ಹೋಗಿ ಎಂದು ಕಳುಹಿಸುತ್ತಿದ್ದಾರೆ. ಅಂಥದ್ದಲ್ಲಿಯೇ ಖುದ್ದು ಎಸಿ, ತಹಶೀಲ್ದಾರ್‌ ಸೇರಿದಂತೆ ಎಲ್ಲ ಅಧಿಕಾರಿಗಳು ಹೋಗಿ ಲಸಿಕೆ ಪಡೆಯಲು ಮನವೊಲಿಸುತ್ತಿದ್ದಾರೆ. ಇಂಥ ವೇಳೆ ಕೆಲ ಮಹಿಳೆಯರು ಮೈ ಮೇಲೆ ದೇವ್ರು ಬಂದವರಂತೆ ಮಾಡುತ್ತಿದ್ದಾರೆ. “ಅದ್ಯಾವ ದೊಡ್ಡ ರೋಗ ನನ್ನ ಏನು ಮಾಡೊದಿಲ್ಲ. ದೇವರಿಗೆ ಸೂಜಿ ಮಾಡ್ತಿರಾ ಎಂದು ಧಮಕಿ ಹಾಕುತ್ತಿದ್ದಾರೆ’ ಪಕ್ಕದಲ್ಲಿ ಹೋದರೆ ಮತ್ತಷ್ಟು ಆವೇಶಭರಿತವಾಗುತ್ತಾರೆ. ದೇವದುರ್ಗ ತಾಲೂಕಿನ ಪಲಕನಮರಡಿಯಲ್ಲಿ ಶುಕ್ರವಾರ ಇದೇ ರೀತಿ ಘಟನೆ ನಡೆದಿದೆ.

ಇನ್ನೂ ಇದೇ ಊರಿನಲ್ಲಿ ಯುವಕನೊಬ್ಬ ಲಸಿಕೆ ಬೇಡ ಎಂದು ಟ್ರ್ಯಾಕ್ಟರ್‌ ಟಾಪ್‌ ಏರಿ ಕುಳಿತು ಬಿಟ್ಟಿದ್ದ. ಎಷ್ಟು ಹೇಳಿದರೂ ಕೆಳಗೆ ಇಳಿದು ಬರಲೇ ಇಲ್ಲಿ. ಆದರೂ ಆರೋಗ್ಯ ಇಲಾಖೆ ಸಿಬ್ಬಂದಿ ಪಟ್ಟು ಬಿಡದೆ ಲಸಿಕೆ ನೀಡಿದ್ದಾರೆ.

ಕಂಡ-ಕಂಡಲ್ಲಿ ಡೋಸ್‌!

ಜಿಲ್ಲೆಯಲ್ಲಿ ಈವರೆಗೆ 14 ಲಕ್ಷ ಡೋಸ್‌ ಲಸಿಕೆ ನೀಡಲಾಗಿದೆ. 9.94 ಲಕ್ಷ ಜನರಿಗೆ ಮೊದಲ ಡೋಸ್‌ ಹಾಗೂ 4.06 ಜನರಿಗೆ ಎರಡನೇ ಡೋಸ್‌ ನೀಡಲಾಗಿದೆ. ಆದರೆ, ಗುರಿ ತಲುಪಲು ಇನ್ನೂ ಶೇ.25ರಷ್ಟು ಜನರಿಗೆ ಲಸಿಕೆ ನೀಡಬೇಕಿದೆ. ಸರ್ಕಾರ ಕೂಡ ಅಧಿಕಾರಿಗಳಿಗೆ ಗುರಿ ನೀಡುತ್ತಿರುವುದರಿಂದ ಇಲಾಖೆ ಅಧಿಕಾರಿಗಳು ಹಳ್ಳಿಗಳತ್ತ ಮುಖ ಮಾಡಿದ್ದಾರೆ. ಜನ ಕಂಡಲ್ಲಿಯೇ ಲಸಿಕೆ ನೀಡಲು ಮುಂದಾಗುತ್ತಿದ್ದಾರೆ. ಕೃಷಿ ಚಟುವಟಿಕೆ ನಡೆದಿರುವ ಕಾರಣ ಜನ ಮನೆಯಲ್ಲಿ ಸಿಗುತ್ತಿಲ್ಲ. ಇದರಿಂದ ಬೆಳ್ಳಂಬೆಳಗ್ಗೆಯೇ ಗ್ರಾಮಗಳಿಗೆ ಹೋಗುತ್ತಿದ್ದಾರೆ. ಮನೆಯಲ್ಲಿ ಇದ್ದರೂ ಇಲ್ಲ ಎಂದು ಹೇಳುವುದು, ಹಿತ್ತಲ ಬಾಗಿಲಿಂದ ತಪ್ಪಿಸಿಕೊಂಡು ಹೋಗುವ ಮೂಲಕ ಅಸಹಕಾರ ತೋರುತ್ತಿದ್ದಾರೆ. ಇನ್ನೂ ಮನೆಯಲ್ಲಿ ಸಿಗದಿದ್ದರೂ ಹೊಲಗಳಿಗೆ ಹೋಗಿ ಲಸಿಕೆ ಹಾಕುವ ಮೂಲಕ ಗುರಿಸಾಧನೆಯತ್ತ ಮುನ್ನುಗ್ಗುತ್ತಿದೆ.

ಲಸಿಕೆ ಗುರಿ ತಲುಪಲು ಸಾಕಷ್ಟು ಒತ್ತು ನೀಡುತ್ತಿದ್ದೇವೆ. ಜನ ಅಸಹಕಾರ ತೋರುತ್ತಿರುವುದು ನಿಜ. ಸಿಬ್ಬಂದಿ ಮನೆಗೆ ಹೋದಾಗ ಜನ ತಪ್ಪಿಸಿಕೊಂಡು ಹೋಗುತ್ತಾರೆ. ಆದರೂ ನಮ್ಮ ಸಿಬ್ಬಂದಿ ಪಟ್ಟು ಬಿಡದೆ ಲಸಿಕೆ ನೀಡುತ್ತಿದ್ದಾರೆ. ಸ್ಥಳೀಯ ಜನಪ್ರತಿನಿಧಿಗಳು, ಧಾರ್ಮಿಕ ಮುಖಂಡರ ನೆರವಿನೊಂದಿಗೆ ಜನರ ಮನವೊಲಿಕೆಗೆ ಒತ್ತು ನೀಡಿದ್ದೇವೆ. ಲಸಿಕೆ ಹಾಕದವರ ವಿರುದ್ಧ ಯಾವುದೇ ಕಠಿಣ ಕ್ರಮಕ್ಕೆ ಮುಂದಾಗಿಲ್ಲ.

-ಡಾ| ನಾಗರಾಜ್‌ ಜಿಲ್ಲಾ ಆರೋಗ್ಯಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next