ಬಾಗಲಕೋಟೆ: ಮಹಾಮಾರಿ ಕೋವಿಡ್ ಸೋಂಕಿಗಾಗಿ ವ್ಯಾಕ್ಸಿನ್ ಹಾಕುವ ಅಭಿಯಾನ ಜಿಲ್ಲೆಯಾದ್ಯಂತ ಯಶಸ್ವಿಯಾಗಿ ನಡೆಯುತ್ತಿದ್ದು, ಈವರೆಗೆ ವ್ಯಾಕ್ಸಿನ್ ತೆಗೆದುಕೊಂಡವರು 2ನೇ ಬಾರಿಯ ವ್ಯಾಕ್ಸಿನ್‌ಗೆ ಸಜ್ಜಾಗಿದ್ದಾರೆ. ಜಿಲ್ಲೆಯಲ್ಲಿ ಮೊದಲ ಬಾರಿಗೆ ಪ್ರಾಯೋಗಿಕವಾಗಿ 7 ಕಡೆ ಮಾತ್ರ ಕೊರೊನಾ ವ್ಯಾಕ್ಸಿನ್ ಹಾಕಲಾಗುತ್ತಿತ್ತು. ಇದೀಗ ಜಿಲ್ಲೆಯ 9 ತಾಲೂಕು ವ್ಯಾಪ್ತಿಯ ಒಟ್ಟು 60 ಸ್ಥಳದಲ್ಲಿ ವ್ಯಾಕ್ಸಿನ್ ಹಾಕಲಾಗುತ್ತಿದೆ. ಗುರುವಾರ ಸಂಜೆಯವರೆಗೆ 4897 ಜನ ಕೋವಿಡ್ ಲಸಿಕೆ ಹಾಕಿಸಿಕೊಂಡಿದ್ದಾರೆ.
ಅಡ್ಡ ಪರಿಣಾಮ ಇಲ್ಲ: ಕೋವಿಡ್ ವ್ಯಾಕ್ಸಿನ್ ಹಾಕಿಸಿಕೊಂಡರೆ ಅಡ್ಡ ಪರಿಣಾಮ ಬೀರುತ್ತದೆ ಎಂಬ ತಪ್ಪು ಕಲ್ಪನೆ ಬಹಳಷ್ಟು ಜನರಲ್ಲಿತ್ತು. ಹೀಗಾಗಿ ಆರಂಭದಲ್ಲಿ ಬಹುಕೇತ ಆರೋಗ್ಯ ಸಿಬ್ಬಂದಿ, ವ್ಯಾಕ್ಸಿನ್ ಹಾಕಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದರು. ಇದೀಗ ನಾನೂ ವ್ಯಾಕ್ಸಿನ್ ಹಾಕಿಸಿಕೊಂಡೇ ಎಂಬ ಮಾತು ಬೇರೊಬ್ಬರಿಂದ ಕೇಳಿದ ಬಳಿಕ ಅವರಿಂದ ಮಾಹಿತಿ ಪಡೆದು ತಾವೂ ವ್ಯಾಕ್ಸಿನ್ ಹಾಕಿಸಿಕೊಳ್ಳಲು ಮುಂದೆ ಬರುತ್ತಿದ್ದಾರೆ.
ಮೊದಲ ಹಂತದಲ್ಲಿ ಜಿಲ್ಲೆಯ ಸರ್ಕಾರಿ, ಖಾಸಗಿ ವೈದ್ಯರು, ಆರೋಗ್ಯ ಸಿಬ್ಬಂದಿ ಸೇರಿದಂತೆ 17 ಸಾವಿರ ಜನರಿಗೆ ವ್ಯಾಕ್ಸಿನ್ ಹಾಕಲು ಗುರಿ ಹಾಕಿಕೊಳ್ಳಲಾಗಿದೆ. ಅದರಲ್ಲಿ ಈಗಾಗಲೇ 5 ಸಾವಿರ ಜನ ಲಸಿಕೆ ಪಡೆದಿದ್ದಾರೆ. ಜಿಲ್ಲಾ ಆಸ್ಪತ್ರೆಯಲ್ಲಿ ನಿತ್ಯ 300 ಜನರು ವ್ಯಾಕ್ಸಿನ್ ಪಡೆಯುತ್ತಿದ್ದಾರೆ. ಲಸಿಕೆ ಹಾಕುವ ವಿಷಯದಲ್ಲಿ ಜಿಲ್ಲೆಯಲ್ಲಿ ಶಿಸ್ತುಬದ್ಧ ಕಾರ್ಯ ನಿರ್ವಹಣೆ ನಡೆಯುತ್ತಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|ಅನಂತ ದೇಸಾಯಿ “ಉದಯವಾಣಿ’ಗೆ ತಿಳಿಸಿದ್ದಾರೆ.
ಮೈ-ಕೈ ನೋವು-ಜ್ವರ ಸಾಮಾನ್ಯ: ಮೊದಲ ಬಾರಿಗೆ ಕೊರೊನಾ ವ್ಯಾಕ್ಸಿನ್ ಪಡೆದ ಬಾಗಲಕೋಟೆ ತಾಲೂಕು ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿ ಬಸವರಾಜ ಹೊಸಳ್ಳಿ ಅವರು ಹೇಳುವಂತೆ, ಲಸಿಕೆಯಿಂದ ಯಾವುದೇ ಅಡ್ಡ ಪರಿಣಾಮವಿಲ್ಲ. ಯಾರಿಗೆ ರೋಗ ನಿರೋಧಕ ಶಕ್ತಿ ಹೆಚ್ಚಿರುತ್ತದೆಯೋ ಅವರಿಗೆ ಯಾವ ಸಮಸ್ಯೆಯೂ ಇಲ್ಲ. ವ್ಯಾಕ್ಸಿನ್ ಪಡೆದ ಬಳಿಕ ಒಂದು ದಿನ ಮನೆಯಲ್ಲಿ ವಿಶ್ರಾಂತಿ ಪಡೆದರೆ ಸಾಕು. ಕೆಲವೇ ಕೆಲವರಿಗೆ ಮೈ-ಕೈ ನೋವು, ಕೆಲವರಿಗೆ ಜ್ವರ ಬರುತ್ತದೆ. ಅದಕ್ಕಾಗಿ ವ್ಯಾಕ್ಸಿನ್ ಪಡೆದ ದಿನವೇ ಜ್ವರ-ಮೈ-ಕೈ ನೋವಿಗೆ ಮಾತ್ರೆ ಪಡೆಯಬೇಕು. ಇದರಿಂದ ಯಾವ ಸಮಸ್ಯೆಯೂ ಆಗುವುದಿಲ್ಲ. ನಾನು ವ್ಯಾಕ್ಸಿನ್ ತೆಗೆದುಕೊಂಡ ಮರುದಿನ ಮೈ-ಕೈ ನೋವು ಮಾತ್ರ ಬಂದಿತ್ತು. ಒಂದು ದಿನ ವಿಶ್ರಾಂತಿ ಪಡೆದು ಮತ್ತೆ ಕರ್ತವ್ಯಕ್ಕೆ ಹಾಜರಾಗಿದ್ದೇನೆ. 2ನೇ ಬಾರಿಯ ವ್ಯಾಕ್ಸಿನ್ 28 ದಿನಗಳ ಬಳಿಕ ಬರಲಿದೆ. ಅದಕ್ಕಾಗಿ ಹೆಸರು ನೋಂದಾಯಿಸಿದವರಿಗೆ ನೇರವಾಗಿ ಮೊಬೈಲ್ ಸಂದೇಶ, ಕರೆ ಬರುತ್ತದೆ. ಯಾವ ಸ್ಥಳದಲ್ಲಿ ವ್ಯಾಕ್ಸಿನ್ ಪಡೆಯಬೇಕು ಎಂಬ ವಿವರ ಕೊಡುತ್ತಾರೆ ಎಂದರು.
ಇದನ್ನೂ ಓದಿ:ಈ ಬಜೆಟ್ ನಲ್ಲಿ ರೈಲ್ವೆಗೆ ಸಿಕ್ಕಿದೆಷ್ಟು? ಬೆಂಗಳೂರು ಮೆಟ್ರೋಗೆ 14 ಸಾವಿರ ಕೋಟಿ ರೂ.
ಖಾಸಗಿ ವೈದ್ಯ ಸಿಬ್ಬಂದಿಯೇ ಹಿಂದೇಟು: ಈವರೆಗೆ ಕೊರೊನಾ ವ್ಯಾಕ್ಸಿನ್‌ಗಾಗಿ ಹೆಸರು ನೋಂದಾಯಿಸಿದವರಲ್ಲಿ ಸರ್ಕಾರಿ ವೈದ್ಯರು, ಸರ್ಕಾರಿ ಆಸ್ಪತ್ರೆಗಳ ಸಿಬ್ಬಂದಿ ಪಡೆಯುತ್ತಿದ್ದಾರೆ. ಕೆಲವೇ ಕೆಲವರು ನಿರಂತರ ಔಷಧ ಪಡೆಯುತ್ತಿದ್ದರೆ, ಬೇರೆ ಬೇರೆ ಕಾಯಿಲೆಗಳಿದ್ದರೆ ಅಂತವರು ವ್ಯಾಕ್ಸಿನ್ ಪಡೆದಿಲ್ಲ. ಜಿಲ್ಲೆಯ ಖಾಸಗಿ ಆಸ್ಪತ್ರೆಗಳ ವೈದ್ಯರು, ಸಿಬ್ಬಂದಿಗೂ ವ್ಯಾಕ್ಸಿನ್‌ಗಾಗಿ ಹೆಸರು ನೋಂದಾಯಿಸಿದ್ದು, ಒಂದೊಂದು ಕಡೆ 100 ವ್ಯಾಕ್ಸಿನ್ ಕೊಟ್ಟರೂ ಕೇವಲ25ರಿಂದ 30 ಜನ ಮಾತ್ರ ಪಡೆದಿರುತ್ತಾರೆ. ಅಂತವರ ಮನವೊಲಿಸಿ ವ್ಯಾಕ್ಸಿನ್‌ನಿಂದ ಯಾವುದೇ ಅಡ್ಡ ಪರಿಣಾಮವಿಲ್ಲ ಎಂದು ಹೇಳುವ ಕಾರ್ಯವನ್ನೂ ಆರೋಗ್ಯ ಇಲಾಖೆ ಮಾಡುತ್ತಿದೆ.
ವ್ಯಾಕ್ಸಿನ್ ಪಡೆದ ಡಿಎಚ್ಒ: ವ್ಯಾಕ್ಸಿನ್ ಪಡೆಯಲು ಹಿಂದೇಟು ಹಾಕುತ್ತಿದ್ದವರಿಗೆ ಪ್ರೇರಣೆ ನೀಡಲು ಹಾಗೂ ಹೆಸರು ನೋಂದಾಯಿಸಿದ ಬಳಿಕ ತಮ್ಮ ಸರತಿ ಬಂದ ಹಿನ್ನೆಲೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|ಅನಂತ ದೇಸಾಯಿ ಕೊರೊನಾ ವ್ಯಾಕ್ಸಿನ್ ಪಡೆದಿದ್ದಾರೆ. ವ್ಯಾಕ್ಸಿನ್ ಪಡೆದು ಸಂಜೆಯವರೆಗೆ ಮಾತ್ರ ವಿಶ್ರಾಂತಿ ಪಡೆದು ಮತ್ತೆ ಸೇವೆಗೆ ಹಾಜರಾಗಿದ್ದಾರೆ. ಇದು ಇಲಾಖೆಯ ಇತರೆ ಸಿಬ್ಬಂದಿಯೂ ವ್ಯಾಕ್ಸಿನ್ ಪಡೆಯಲು ಪ್ರೇರಣೆ ಎಂಬಂತಾಗಿದೆ.
ಶ್ರೀಶೈಲ ಕೆ. ಬಿರಾದಾರ