ಚಾಮರಾಜನಗರ: ಜಿಲ್ಲೆಯಲ್ಲೂ ಕೋವಿಡ್ ಲಸಿಕೆ ಅಭಿಯಾನಕ್ಕೆ ಚಾಲನೆ ದೊರೆತಿದ್ದು ಜಿಲ್ಲೆಯ ಎಲ್ಲಾ 6 ಲಸಿಕಾ ಕೇಂದ್ರಗಳಲ್ಲಿ ಕೋವಿಡ್ ಲಸಿಕೆ ನೀಡುವ ಪ್ರಕ್ರಿಯೆ ಸುಗಮವಾಗಿ ನಡೆಯಿತು. ಮೊದಲ ದಿನ 378 ಮಂದಿಗೆ ಲಸಿಕೆ ಹಾಕಲಾಯಿತು.
ನಗರದ ಚಾಮರಾಜನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಸಿಮ್‌ಸ್), ಗುಂಡ್ಲುಪೇಟೆ, ಯಳಂದೂರು, ಕೊಳ್ಳೇಗಾಲ ಪಟ್ಟಣಗಳಲ್ಲಿರುವ ತಾಲೂಕು ಆಸ್ಪತ್ರೆ, ಕೊಳ್ಳೇಗಾಲದ ನಗರ ಆರೋಗ್ಯ ಕೇಂದ್ರ, ಹನೂರು ತಾಲೂಕಿನ ರಾಮಾಪುರದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ತೆರೆಯಲಾಗಿರುವ ಕೋವಿಡ್ ಲಸಿಕಾ ಕೇಂದ್ರಗಳಲ್ಲಿ ಲಸಿಕೆ ಅಭಿಯಾನ ಆರಂಭವಾಯಿತು.
ಕೊರೊನಾ ವಾರಿಯರ್ಸ್‌ಗಳೆಂದು ಗುರುತಿಸಲಾಗಿರುವ ವೈದ್ಯರು ಸೇರಿದಂತೆ ಆರೋಗ್ಯ ಸೇವೆಯಲ್ಲಿ ತೊಡಗಿಕೊಂಡಿರುವ ಒಟ್ಟು 6363 ಕಾರ್ಯಕರ್ತರು ಕೋವಿಡ್ ಲಸಿಕೆಗಾಗಿ ನೋಂದಣಿ ಮಾಡಿಕೊಂಡಿದ್ದಾರೆ. ಇವರಲ್ಲಿ ಮೊದಲ ಹಂತದಲ್ಲಿ 814 ಜನರಿಗೆ ಕೋವಿಡ್ ಲಸಿಕೆ ನೀಡುವ ಕಾರ್ಯ ಆರಂಭಿಸಲಾಗಿದೆ. ಪ್ರತೀ ಕೇಂದ್ರದಲ್ಲಿ ಒಂದು ದಿನಕ್ಕೆ 100 ಜನರಿಗೆ ಮಾತ್ರ ಲಸಿಕೆ ನೀಡಲು ಅನುಮತಿಸಲಾಗಿದೆ.
ಚಾಮರಾಜನಗರದ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಬೆಳಿಗ್ಗೆ ಲಸಿಕೆ ನೀಡುವ ಪ್ರಕ್ರಿಯೆಗೆ ಚಾಲನೆ ದೊರೆಯಿತು. ವೈದ್ಯಕೀಯ ಕಾಲೇಜಿನ ಡಿ ಗ್ರೂಪ್ ನೌಕರ ಮಂಜುನಾಥ್ ಅವರಿಗೆ ಮೊದಲ ಲಸಿಕೆ ನೀಡಲಾಯಿತು. ಬಳಿಕ ಎರಡನೆಯವರಾಗಿ ಮೆಡಿಕಲ್ ಕಾಲೇಜಿನ ಡೀನ್ ಡಾ. ಜಿ.ಎಂ. ಸಂಜೀವ್ ಲಸಿಕೆ ಪಡೆದು ಇತರರಲ್ಲೂ ವಿಶ್ವಾಸ ಮೂಡಿಸಿದರು. ನಂತರ ಮೈಕೊ್ರೀ ಬಯಾಲಜಿ ವಿಭಾಗದ ಮುಖ್ಯಸ್ಥ ಡಾ. ಸತೀಶ್, ಕಾಲೇಜಿನ ಇತರೆ ಎಲ್ಲಾ ವರ್ಗದ ಸಿಬ್ಬಂದಿ ಲಸಿಕೆ ಪಡೆದರು. ಇವರೆಲ್ಲರಿಗೂ ಕೋವ್ಯಾಕ್ಸಿನ್ ಲಸಿಕೆ ನೀಡಲಾಯಿತು.
ಇದನ್ನೂ ಓದಿ:OTT, ನ್ಯೂಸ್ ವೆಬ್‌ಸೈಟ್‌ಗೆ ಮೂಗುದಾರ :ಸ್ವಯಂ ನಿಯಂತ್ರಣ ಕಾಯ್ದೆ ರಚನೆಗೆ ಮುಂದಾದ ಕೇಂದ್ರ
ಶಾಸಕ ಸಿ. ಪುಟ್ಟರಂಗಶೆಟ್ಟಿ, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಶಶಿಕಲಾ, ಜಿಲ್ಲಾಧಿಕಾರಿ ಡಾ.ಎಂ.ಆರ್. ರವಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹರ್ಷಲ್ ಬೋಯರ್ ನಾರಾಯಣ ರಾವ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಂ.ಸಿ ರವಿ, ವೈದ್ಯಕೀಯ ಕಾಲೇಜಿನ ಡೀನ್ ಡಾ. ಸಂಜೀವ್ ಅವರ ಉಪಸ್ಥಿತಿಯಲ್ಲಿ ಲಸಿಕಾ ಅಭಿಯಾನ ನಡೆಯಿತು.
ಲಸಿಕೆ ನೀಡುವ ಕಾರ್ಯಕ್ಕೆ ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡಲಾಗಿತ್ತು. ಮೊದಲು ಲಸಿಕೆ ಪಡೆಯುವವರ ನೋಂದಣಿ ಮಾಡಲಾಯಿತು. ಲಸಿಕೆ ಪಡೆಯುವವರನ್ನು ನಿರೀಕ್ಷಣಾ ಕೊಠಡಿಯಲ್ಲಿ ಕುಳಿತುಕೊಳ್ಳಲು ವ್ಯವಸ್ಥೆ ಕೈಗೊಳ್ಳಲಾಗಿತ್ತು. ಪರಿಶೀಲನಾ ವಿಭಾಗದಲ್ಲಿ ದೇಹದ ಉಷ್ಣಾಂಶ, ರಕ್ತದೊತ್ತಡ, ಸ್ಯಾಚುರೇಷನ್ ಪರೀಕ್ಷಿಸಲಾಯಿತು. ಬಳಿಕ ಲಸಿಕೆ ನೀಡುವ ಕೊಠಡಿಯಲ್ಲಿ ಲಸಿಕೆ ಕೊಡಲಾಯಿತು. ನಂತರ ನಿಗಾ ಘಟಕ ಕೊಠಡಿಯಲ್ಲಿ ಹಣ್ಣಿನ ರಸ ನೀಡಿ ಅರ್ಧ ತಾಸುಗಳ ಕಾಲ ನಿಗಾ ವಹಿಸಲಾಯಿತು. ಲಸಿಕೆ ಪಡೆದವರಲ್ಲಿ ಯಾರಲ್ಲಿಯೂ ಅಡ್ಡ ಪರಿಣಾಮ ಕಂಡು ಬರದ ಹಿನ್ನೆಲೆಯಲ್ಲಿ ಸುರಕ್ಷಿತವಾಗಿ ಕಳುಹಿಸಿ ಕೊಡಲಾಯಿತು.
ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ, ಲಸಿಕಾ ಅಭಿಯಾನ ಪ್ರಕ್ರಿಯೆಯನ್ನು ಕೂಲಂಕಷವಾಗಿ ಪರಿಶೀಲಿಸಿದರು. ನಂತರ ಮಾತನಾಡಿದ ಜಿಲ್ಲಾಧಿಕಾರಿಯವರು ಇಡೀ ಜಗತ್ತನ್ನೆ ಕಾಡಿದ ಕೊರೊನಾಗೆ ಲಸಿಕೆ ಲಭಿಸಿ ಇದನ್ನು ನೀಡಲಾಗುತ್ತಿರುವುದು ಅತ್ಯಂತ ಐತಿಹಾಸಿಕ ಸಂಭ್ರಮವಾಗಿದೆ. ಲಸಿಕೆಗಳು ಅತ್ಯಂತ ಸುರಕ್ಷಿತವೆಂದು ದೃಢೀಕೃತವಾಗಿವೆ. ಲಸಿಕೆ ಪಡೆದವರಲ್ಲಿ ಯಾವುದೇ ಅಡ್ಡ ಪರಿಣಾಮ ಕಂಡು ಬಂದಿಲ್ಲ. ವೈದ್ಯಕೀಯ ಕಾಲೇಜಿನ ಡೀನ್, ವಿವಿಧ ವಿಭಾಗಗಳ ಮುಖ್ಯಸ್ಥರು ಸೇರಿದಂತೆ ವಿವಿಧ ವರ್ಗದವರು ಇಂದು ಲಸಿಕೆ ಪಡೆದುಕೊಂಡಿದ್ದಾರೆ ಎಂದರು.
ಇದನ್ನೂ ಓದಿ:ಉಡುಪಿ ಜಿಲ್ಲೆಯಲ್ಲಿ ಕೋವಿಶೀಲ್ಡ್ ಲಸಿಕೆ ಪ್ರಯೋಗ; ಕೋವಿಡ್ ನಿರ್ಮೂಲನೆಯತ್ತ ಪ್ರಥಮ ಹೆಜ್ಜೆ
ಕೋವಿಡ್ ಲಸಿಕೆ ಪಡೆಯುವಾಗ ಯಾವುದೇ ಭಯವಾಗಲಿಲ್ಲ.. ಭಯ ಪಡುವ ಅವಶ್ಯಕತೆಯಿಲ್ಲ ಎಂದು ಚಾಮರಾಜನಗರದಲ್ಲಿ ಮೊದಲ ಲಸಿಕೆ ಪಡೆದ ಕಾಲೇಜಿನ ಡಿ ಗ್ರೂಪ್ ನೌಕರ ಮಂಜುನಾಥ್ ಹೇಳಿದರು.
ಚಾಮರಾಜನಗರ ಮೆಡಿಕಲ್ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೊದಲಿಗರಾಗಿ ಲಸಿಕೆ ಪಡೆದ ಮಂಜುನಾಥ್ ಮಾಧ್ಯಮಗಳೊಂದಿಗೆ ಮಾತನಾಡಿ ಮೇಲಿನಂತೆ ಹೇಳಿದರು. ಲಸಿಕೆ ಪಡೆಯುವವರು ಭಯಪಡುವ ಅವಶ್ಯಕತೆ ಇಲ್ಲ. ಜ್ವರ ಬಂದರೆ ಇಂಜೆಕ್ಷನ್ ತೆಗೆದುಕೊಳ್ಳುವುದಿಲ್ಲವೇ, ಹಾಗೆಯೇ ಕೋವ್ಯಾಕ್ಸಿನ್ ಲಸಿಕೆ ಪಡೆದಿದ್ದೇನೆ. ಯಾವುದೇ ತೊಂದರೆ ಇಲ್ಲದೆ ಆರಾಮವಾಗಿದ್ದೇನೆ ಎಂದರು.
ಕೋವ್ಯಾಕ್ಸಿನ್, ಕೋವಿಶೀಲ್‌ಡ್ ಲಸಿಕೆಗಳೆರಡರಲ್ಲೂ ಅಂತಹ ವ್ಯತ್ಯಾಸವೇನಿಲ್ಲ. ಎರಡೂ ಕೋವಿಡ್ ನಿರೋಧಕ ಲಸಿಕೆಗಳು. ಟ್ರಯಲ್ ರನ್ ಆಗಿಯೇ ಬಂದಿವೆ. ಹಾಗಾಗಿ ತೆಗೆದುಕೊಳ್ಳುವವರು ಭಯಪಡುವ ಅಗತ್ಯವಿಲ್ಲ. ನಾನು ಕೋವ್ಯಾಕ್ಸಿನ್ ಪಡೆದಿದ್ದೇನೆ.
-ಡಾ. ಸಂಜೀವ್, ಡೀನ್, ಸರ್ಕಾರಿ ವೈದ್ಯಕೀಯ ಕಾಲೇಜು
ಮೊದಲ ದಿನ 378 ಮಂದಿಗೆ ಲಸಿಕೆ
ಚಾಮರಾಜನಗರ: ಜಿಲ್ಲೆಯಲ್ಲಿ ಕೋವಿಡ್ ಲಸಿಕಾ ಅಭಿಯಾನದ ಮೊದಲ ದಿನವಾದ ಶನಿವಾರ 378 ಮಂದಿಗೆ ಲಸಿಕೆ ಹಾಕಲಾಯಿತು.
ಮೊದಲ ದಿನ 589 ಮಂದಿಗೆ ಲಸಿಕೆ ಹಾಕುವ ಗುರಿ ಹೊಂದಲಾಗಿತ್ತು. ಗುರಿಯ ಶೇ. 64ರಷ್ಟು ಮಂದಿಗೆ ಲಸಿಕೆ ಹಾಕಲಾಯಿತು. ಚಾಮರಾಜನಗರದ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ 100 ಮಂದಿಗೆ ಲಸಿಕೆ ಹಾಕುವ ಗುರಿ ಹೊಂದಲಾಗಿತ್ತು. 60 ಮಂದಿ ಲಸಿಕೆ ಪಡೆದುಕೊಂಡರು. ಗುಂಡ್ಲುಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ 100 ಮಂದಿಯ ಗುರಿ ಹೊಂದಲಾಗಿತ್ತು. 66 ಮಂದಿ ಲಸಿಕೆ ಪಡೆದರು. ಕೊಳ್ಳೇಗಾಲ ಸರ್ಕಾರಿ ಆಸ್ಪತ್ರೆಯಲ್ಲಿ 100 ಜನರಿಗೆ 54 ಮಂದಿ, ಕೊಳ್ಳೇಗಾಲದ ನಗರ ಆರೋಗ್ಯ ಕೇಂದ್ರದಲ್ಲಿ 100ಕ್ಕೆ 70 ಮಂದಿ, ಯಳಂದೂರು ಸರ್ಕಾರಿ ಆಸ್ಪತ್ರೆಯಲ್ಲಿ 89 ಮಂದಿಗೆ 59 ಮಂದಿ ಹಾಗೂ ರಾಮಾಪುರದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 100 ಮಂದಿಗೆ 69 ಮಂದಿ ಲಸಿಕೆ ಪಡೆದುಕೊಂಡಿದ್ದಾರೆ.
ಮೊದಲ ದಿನ 77 ವಯಲ್‌ಗಳನ್ನು ನೀಡುವ ಉದ್ದೇಶ ಹೊಂದಲಾಗಿತ್ತು. ಇವುಗಳಲ್ಲಿ 36 ವಯಲ್‌ಗಳು ಬಳಕೆಯಾಗಿವೆ. 41 ವಯಲ್‌ಗಳು ಬಾಕಿಯಿವೆ.